ಶಿವಮೊಗ್ಗ: ಮನೆಯ ಮುಂದೆ ಕಸ ಹಾಕದಂತೆ ಸೂಚಿಸಿದ ವೃದ್ಧೆಯನ್ನು ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆ ನಡೆಸಿದ ಘಟನೆ ಸಾಗರದ ಗೌತಮಪುರ ಗ್ರಾಮದಲ್ಲಿ ನಡೆದಿದೆ.
ಹಲ್ಲೆಗೊಳಗಾದ ಮಹಿಳೆಯನ್ನು ಹುಚ್ಚಮ್ಮ (67) ಎಂದು ಗುರುತಿಸಲಾಗಿದೆ. ಆರೋಪಿಗಳಾದ ಪ್ರೇಮ, ಆಕೆಯ ಪತಿ ಮಂಜುನಾಥ್, ಪುತ್ರ ದರ್ಶನ್ ವಿರುದ್ಧ ಪ್ರಕರಣ ದಾಖಲಾಗಿದೆ.
ಕಳೆದ ಜೂ. 24 ರಂದು ಹುಚ್ಚಮ್ಮ ಅವರು ತಮ್ಮ ಮನೆಯ ಮುಂದೆ ಕಸ ಎಸೆಯದಂತೆ ನೆರೆಮನೆಯ ಪ್ರೇಮ ಅವರಿಗೆ ಹೇಳಿದ್ದಾರೆ. ಇದರಿಂದ ಸಿಟ್ಟಾದ ಪ್ರೇಮ ಅವರು ಹುಚ್ಚಮ್ಮ ಅವರನ್ನು ಮನೆಯಿಂದ ಎಳೆದುಕೊಂಡು ಬಂದು ಕಂಬಕ್ಕೆ ಕಟ್ಟಿ ಹಲ್ಲೆ ಮಾಡಿದ್ದಾರೆ.
ಈ ಘಟನೆಯ ಬಗ್ಗೆ ಗ್ರಾಮದ ಹಿರಿಯರ ಬಳಿ ಹುಚ್ಚಮ್ಮ ಅವರ ಪುತ್ರ ಕನ್ನಪ್ಪ ಅವರು ಹೇಳಿದ್ದು, ಅವರು ಅದನ್ನು ನಿರ್ಲಕ್ಷಿಸಿದ್ದಾರೆ. ಆ ಬಳಿಕ ಕನ್ನಪ್ಪ ಅವರು ಆನಂದಪುರದ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಆದರೆ ಆರೋಪಿಗಳನ್ನು ಬಂಧಿಸಿದ ಪೊಲೀಸರು ಠಾಣಾ ಜಾಮೀನಿನ ಮೇಲೆ ಮನೆಗೆ ಕಳುಹಿಸಿದ್ದರು. ಆದರೆ ಈ ಪ್ರಕರಣ ಗಂಭೀರ ಸ್ವರೂಪವನ್ನು ಪಡೆದುಕೊಳ್ಳುತ್ತಿದ್ದಂತೆ ಆರೋಪಿಗಳನ್ನು ಪೊಲೀಸರು ಮತ್ತೆ ಬಂಧಿಸಿದ್ದಾಗಿ ತಿಳಿದು ಬಂದಿದೆ.
























