ನವದೆಹಲಿ: ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದವರು ಸಂವಿಧಾನವನ್ನು ಹತ್ಯೆ ಮಾಡುವ ಜೊತೆಗೆ ನ್ಯಾಯಾಂಗ ವ್ಯವಸ್ಥೆಯನ್ನು ಸಹ ಕೈಗೊಂಬೆಯನ್ನಾಗಿ ಮಾಡಿದ್ದರು. ಇಂತಹ ವಿರುದ್ಧ ಹೋರಾಡಿದವರನ್ನು ಸದಾ ನೆನಪಿಸಿಕೊಳ್ಳಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ತಮ್ಮ ತಿಂಗಳ ರೆಡಿಯೋ ಕಾರ್ಯಕ್ರಮ ಮನ್ ಕಿ ಬಾತ್ನಲ್ಲಿ ಮಾತನಾಡಿದ ಅವರು, ಇಪ್ಪತ್ತೊಂದು ತಿಂಗಳ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜನರಿಗೆ ಹಿಂಸೆ ನೀಡಲಾಯಿತು. ಗುಲಾಮಗಿರಿಗೆ ತಳ್ಳುವ ಪ್ರಯತ್ನ ನಡೆಯಿತು. ಇದಕ್ಕೆ ಸಾಕಷ್ಟು ಉದಾಹರಣೆಗಳು ನಮಗೆ ಸಿಗುವುದಾಗಿ ಅವರು ತಿಳಿಸಿದ್ದಾರೆ.
ಭಾರತ ಟ್ರಕೋಮಾ ಮುಕ್ತ ದೇಶ ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿದ್ದು, ಇದನ್ನು ಗಮನಾರ್ಹ ಸಾಧನೆ ಎಂದು ಪ್ರಧಾನಿ ಬಣ್ಣಿಸಿದ್ದಾರೆ. ಇದಕ್ಕೆ ಕಾರಣಕರ್ತರಾದ ಆರೋಗ್ಯ ಕಾರ್ಯಕರ್ತರನ್ನು ಅವರು ಅಭಿನಂದಿಸಿದ್ದಾರೆ.
ದೇಶದ 95 ಕೋಟಿ ಜನರು ಕೇಂದ್ರ ಸರ್ಕಾರದ ಸಾಮಾಜಿಕ ಭದ್ರತಾ ಕಲ್ಯಾಣ ಕಾರ್ಯಕ್ರಮಗಳ ಪ್ರಯೋಜನ ಪಡೆಯುತ್ತಿದ್ದಾರೆ. 2015 ರ ವರೆಗೆ ಈ ಸಂಖ್ಯೆ 25 ಕೋಟಿಗಳಷ್ಟು ಮಾತ್ರವೇ ಇತ್ತು. ಅಂತರಾಷ್ಟ್ರೀಯ ಕಾರ್ಮಿಕ ಸಂಸ್ಥೆ ಇತ್ತೀಚೆಗೆ ಬಿಡುಗಡೆ ಮಾಡಿದ ವರದಿಯಲ್ಲಿ ಭಾರತದ ಸುಮಾರು 64% ಗೂ ಅಧಿಕ ಜನರು ಒಂದಿಲ್ಲೊಂದು ಯೋಜನೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ಎಂದು ಅವರು ನುಡಿದಿದ್ದಾರೆ.
























