ಕೇಂದ್ರ ಸರ್ಕಾರದ ಮೇಲೆ ಕಾಂಗ್ರೆಸ್ ತೀಕ್ಷ್ಣ ವಾಗ್ದಾಳಿ
ನವದೆಹಲಿ: ಪಾಕಿಸ್ತಾನದ ವಿರುದ್ಧ ಕಳೆದ ಮೇ 7ರಂದು ನಡೆಸಿದ ಆಪರೇಷನ್ ಸಿಂಧೂರ ಕಾರ್ಯಾಚರಣೆಯಲ್ಲಿ ಭಾರತದ ಕೆಲವು ಯುದ್ಧ ವಿಮಾನಗಳು ನಾಶವಾಗಿವೆ ಎಂಬುದಾಗಿ ನೌಕಾಪಡೆಯ ಅಧಿಕಾರಿಯೊಬ್ಬರು ಇಂಡೋನೇಷ್ಯಾದಲ್ಲಿ ಹೇಳಿಕೊಂಡಿದ್ದು, ಈ ಹೇಳಿಕೆ ಭಾರಿ ಕೋಲಾಹಲ ಎಬ್ಬಿಸಿದೆ.
ಮೇ 7ರ ಆಪರೇಷನ್ ಸಿಂದೂರ ಕಾರ್ಯಾಚರಣೆ ವೇಳೆ ಭಾರತೀಯ ಯುದ್ಧ ವಿಮಾನಗಳನ್ನು ಪಾಕಿಸ್ತಾನ ಹೊಡೆದುರುಳಿಸಿದೆ. ರಾಜಕೀಯ ನಾಯಕತ್ವವು ನಿರ್ಬಂಧ ಹೇರಿದ್ದರಿಂದ ನಾವು ವಿಮಾನಗಳನ್ನು ಕಳೆದುಕೊಳ್ಳಬೇಕಾಯಿತು ಎಂದು ನೌಕಾಸೇನೆ ಅಧಿಕಾರಿ ನೀಡಿದ ಹೇಳಿಕೆಯನ್ನು ಉಲ್ಲೇಖಿಸಿ ಕಾಂಗ್ರೆಸ್ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದೆ.
ಇಂಡೋನೇಷ್ಯಾದ ವಿಶ್ವವಿದ್ಯಾಲಯವೊಂದರಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಭಾರತೀಯ ನೌಕಾಪಡೆಯ ಕ್ಯಾಪ್ಟನ್ ಶಿವಕುಮಾರ್ ನೀಡಿದ ಉಪನ್ಯಾದ ಕುರಿತು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. ಏಪ್ರಿಲ್ 22ರ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತ ಆಪರೇಷನ್ ಸಿಂದೂರ ಕಾರ್ಯಾಚರಣೆ ನಡೆಸಿತು. ಈ ಸಮಯದಲ್ಲಿ ಭಾರತೀಯ ವಾಯುಸೇನೆಯ 5 ಯುದ್ಧ ವಿಮಾನಗಳನ್ನು ಪಾಕಿಸ್ತಾನ ಹೊಡೆದುರುಳಿಸಿದೆ. ಮೂರು ರಫೇಲ್‌ಗಳು, 1 ಮಿಗ್-29 ಮತ್ತು ಸುಖೋಯ್-30 ಯುದ್ಧ ವಿಮಾನಗಳು ಹಾಗೂ ಒಂದು ಯುದ್ಧತಂತ್ರದ ಡ್ರೋನ್ ಕಳೆದುಕೊಳ್ಳಬೇಕಾಯಿತು. ರಾಜಕೀಯ ನಾಯಕತ್ವವು ನಿರ್ಬಂಧ ಹೇರಿದ್ದರಿಂದಲೇ ನಾವು ವಿಮಾನಗಳನ್ನು ಕಳೆದುಕೊಳ್ಳಬೇಕಾಯಿತು.
ಭಾರತವು ಹಲವು ವಿಮಾನಗಳನ್ನು ಕಳೆದುಕೊಂಡಿದೆ. ಅವರು ಈ ಮಾತನ್ನು ಒಪ್ಪದೇ ಇರಬಹುದು. ಆದರೆ ನಾವು ಕೆಲವು ವಿಮಾನಗಳನ್ನು ಕಳೆದುಕೊಂಡಿದ್ದೇವೆ. ಅದು ಮಿಲಿಟರಿ ನೆಲೆಗಳ ಮೇಲೆ ಮತ್ತು ವಾಯುರಕ್ಷಣಾ ವ್ಯವಸ್ಥೆಗಳ ಮೇಲೆ ದಾಳಿ ಮಾಡದಂತೆ ರಾಜಕೀಯ ನಾಯಕತ್ವವು ನಿರ್ಬಂಧ ಹೇರಿದ್ದರಿಂದಾಗಿದೆ. ಇದಾದ ಬಳಿಕ ನಾವು ನಮ್ಮ ತಂತ್ರಗಳನ್ನ ಸಂಪೂರ್ಣ ಬದಲಾಯಿಸಿದೆವು. ಅವರ ಮಿಲಿಟರಿ ನೆಲೆಗಳು, ವಾಯುರಕ್ಷಣಾ ವ್ಯವಸ್ಥೆಗಳ ಮೇಲೆ ದಾಳಿ ಮಾಡಿ ನಾಶಪಡಿಸಿದೆವು. ಮೇ 8, 9, 10ರಂದು ಸಂಪೂರ್ಣ ಹಿಡಿತ ಸಾಧಿಸಲಾಯಿತು ಎಂದು ಹೇಳಿರುವುದಾಗಿ ವರದಿಯಾಗಿದೆ. ಕ್ಯಾಪ್ಟನ್ ಶಿವಕುಮಾರ್ ಅವರು ಹೇಳಿದ್ದಾರೆ ಎನ್ನಲಾದ ಹೇಳಿಕೆ ಕುರಿತು ಕೇಂದ್ರ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಈ ವರದಿಯನ್ನು ತನ್ನ ಎಕ್ಸ್‌ನಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್ ಕೇಂದ್ರ ಸರ್ಕಾರ ದೇಶದ ಜನರ ದಾರಿ ತಪ್ಪಿಸುವ ಕೆಲಸ ಮಾಡಿದೆ ಎಂದು ಟೀಕಿಸಿದೆ. ಪ್ರಧಾನಿ ನರೇಂದ್ರ ಮೋದಿ ಸರ್ವಪಕ್ಷಗಳ ಸಭೆ ಕರೆಯಲು ಯಾಕೆ ನಿರಾಕರಿಸುತ್ತಿದ್ದಾರೆ. ಪಹಲ್ಗಾಮ್ ದಾಳಿ ಮತ್ತು ಆಪರೇಷನ್ ಸಿಂದೂರ ಕುರಿತು ಚರ್ಚಿಸಲು ವಿಶೇಷ ಅಧಿವೇಶನ ಕರೆಯಬೇಕು ಎನ್ನುವ ವಿರೋಧ ಪಕ್ಷಗಳ ಆಗ್ರಹವನ್ನು ಯಾಕಾಗಿ ಒಪ್ಪಿಕೊಳ್ಳುತ್ತಿಲ್ಲ? ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಪ್ರಶ್ನಿಸಿದ್ದಾರೆ. ದೇಶದ ಭದ್ರತೆಯ ವಿಚಾರದಲ್ಲಿ ರಾಜಿ ಮಾಡಿಕೊಂಡಿದ್ದಾರೆ. ಇದನ್ನು ಜನರ ಎದುರು ಕಾಂಗ್ರೆಸ್ ತೆರೆದಿಡುತ್ತದೆ ಎಂದು ಅವರು ಭಯಭೀತರಾಗಿದ್ದಾರೆ. ಅದಕ್ಕಾಗಿಯೇ ವಿಶೇಷ ಅಧಿವೇಶನ ಕರೆಯುತ್ತಿಲ್ಲ ಎಂದು ಟೀಕಿಸಿದ್ದಾರೆ.
























