40 ದಿನಗಳಲ್ಲಿ 21 ಯುವಕ-ಯುವತಿಯರನ್ನು ಬಲಿತೆಗೆದುಕೊಂಡ ಹೃದಯಾಘಾತ
ಬೆಂಗಳೂರು : ಹಾಸನ ಜಿಲ್ಲೆಯಲ್ಲಿ ಹೃದಯಾಘಾತಕ್ಕೆ ಬಲಿಯಾಗುತ್ತಿರುವ ಪ್ರಕರಣಗಳು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದು, ನಿನ್ನೆ ಮತ್ತೆ ಒಂದೇ ದಿನದಲ್ಲಿ ಮೂವರು ಇದೇ ಕಾರಣದಿಂದ ಮೃತಪಟ್ಟಿರುವುದು ವ್ಯಾಪಕ ಕಳವಳಕ್ಕೆ ಕಾರಣವಾಗಿದೆ. ಸಂಸದ ಡಾ.ಸಿ.ಎನ್. ಮಂಜುನಾಥ ಅವರು ಹಾಸನದ ಸರಣಿ ಹೃದಯಾಘಾತದ ಕಳವಳಕಾರಿ ವಿಚಾರವನ್ನು ಪ್ರಧಾನಿ ನರೇಂದ್ರ ಮೋದಿಯವರ ಗಮನಕ್ಕೆ ತರುತ್ತೇನೆ ಎಂದು ಹೇಳಿದ ದಿನವೇ ಮತ್ತೆ ಮೂವರು ಬಲಿಯಾಗಿದ್ದಾರೆ. ಇದರೊಂದಿಗೆ ಕಳೆದ 40 ದಿನಗಳಲ್ಲಿ ಹೃದಯಾಘಾತದಿಂದ ಮೃತಪಟ್ಟವರ ಸಂಖ್ಯೆ 21ಕ್ಕೆ ಏರಿಕೆಯಾಗಿದೆ.
ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಕೆಂಬಾಳು ಗ್ರಾಮದ ಲೋಹಿತ್ (38), ಬೇಲೂರಿನ ಜೆ.ಪಿ.ಲೇಪಾಕ್ಷಿ (50) ಹಾಗೂ ಹೊಳೆನರಸೀಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇಂಗ್ಲಿಷ್ ಪ್ರಾಧ್ಯಾಪಕ ಮುತ್ತಯ್ಯ (58) ಹೃದಯಾಘಾತದಿಂದ ನಿನ್ನೆ ಅಸುನೀಗಿದ್ದಾರೆ.
ಲೋಹಿತ್ ಕಳೆದ 18 ವರ್ಷಗಳಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ರಜೆಯಲ್ಲಿ ಊರಿಗೆ ಬಂದಿದ್ದ ಅವರು ಜುಲೈ 3ರಂದು ಕರ್ತವ್ಯಕ್ಕೆ ಮರಳುವವರಿದ್ದರು. ದುರದೃಷ್ಟವಶಾತ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಎರಡು ದಿನಗಳ ಹಿಂದಷ್ಟೇ ಹಾಸನದ ಸಿದ್ದೇಶ್ವರ್ ನಗರದ ನಿವಾಸಿ ಗೋವಿಂದ (37) ಎಂಬವರು ಹೃದಯಾಘಾತದಿಂದ ಮೃತಪಟ್ಟಿದ್ದರು. ಆಟೋ ಚಾಲಕರಾಗಿರುವ ಗೋವಿಂದ ಅವರಿಗೆ ಆಟೋ ಚಲಾಯಿಸುವಾಗ ಎದೆನೋವು ಕಾಣಿಸಿಕೊಂಡಿತ್ತು. ಕೂಡಲೇ ಅವರೇ ಆಟೋ ಚಲಾಯಿಸಿಕೊಂಡು ಜಿಲ್ಲಾಸ್ಪತ್ರೆಗೆ ತೆರಳಿದ್ದರು. ಆದಾಗ್ಯೂ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದರು.
ಹಾಸನ ಜಿಲ್ಲೆಯಲ್ಲಿ ಮತ್ತು ಕರ್ನಾಟಕದ ಇತರ ಕಡೆಗಳಲ್ಲಿ ಯುವಕ-ಯುವತಿಯರಲ್ಲೇ ಹೃದಯಾಘಾತ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಜತೆ ಚರ್ಚಿಸಲು ಬೆಂಗಳೂರು ಗ್ರಾಮಾಂತರ ಸಂಸದ ಡಾ. ಸಿಎನ್ ಮಂಜುನಾಥ್ ಮುಂದಾಗಿದ್ದಾರೆ. ಹೃದಯಘಾತ ನಿಯಂತ್ರಣಕ್ಕೆ ಸಂಬಂಧಿಸಿ ಸಿ.ಎನ್ ಮಂಜುನಾಥ್ ಈಗಾಗಲೇ ಕೇಂದ್ರ ಆರೋಗ್ಯ ಸಚಿವ ಜೆ.ಪಿ ನಡ್ಡಾ ಮತ್ತು ಕರ್ನಾಟಕ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ಜೊತೆಯೂ ಚರ್ಚೆ ಮಾಡಿದ್ದಾರೆ.
ಎದೆನೋವಿನಿಂದ ಬಳಲಿ ಬರುವವರಿಗೆ ಜಯದೇವ ಆಸ್ಪತ್ರೆ ಸಹಯೋಗದೊಂದಿಗೆ ಚಿಕಿತ್ಸೆ ನೀಡುವುದಕ್ಕಾಗಿ ಹಾಸನ ಜಿಲ್ಲೆಯ ಬೇಲೂರು, ಸಕಲೇಶಪುರ, ಆಲೂರು, ಅರಕಲಗೂಡು ಹಾಗೂ ಚನ್ನರಾಯಪಟ್ಟಣ ತಾಲ್ಲೂಕು ಆಸ್ಪತ್ರೆಗಳಲ್ಲಿ ಸ್ಟೆಮಿ ಯೋಜನೆ ಜಾರಿ ಮಾಡುವಂತೆ ಜಿಲ್ಲಾ ಅರೋಗ್ಯ ಅಧಿಕಾರಿ ಡಾ. ಅನಿಲ್ ಕುಮಾರ್ ಅವರು ಆರೋಗ್ಯ ಇಲಾಖೆಗೆ ಈಗಾಗಲೇ ಮನವಿ ಮಾಡಿದ್ದಾರೆ.
























