ಮಂಗಳೂರು: ನಗರದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ರಾಜ್ಯದ 4 ವಿಮಾನ ನಿಲ್ದಾಣಗಳ ನಿರ್ದೇಶಕರಿಗೆ ವಿಮಾನ ನಿಲ್ದಾಣದಲ್ಲಿ ಬಾಂಬ್ ಸ್ಫೋಟಿಸುವ ಕುರಿತು ಭಾನುವಾರ ಬೆಳಗ್ಗೆ ಇ-ಮೇಲ್ ಮೂಲಕ ಬೆದರಿಕೆಯ ಸಂದೇಶ ಬಂದಿದೆ ಎಂದು ವರದಿಯಾಗಿದೆ.
ಮಂಗಳೂರು, ಹುಬ್ಬಳ್ಳಿ, ಬೆಳಗಾವಿ, ಮತ್ತು ಬೆಂಗಳೂರು ವಿಮಾನ ನಿಲ್ದಾಣಗಳಿಗೆ ಇ-ಮೇಲ್ ಮೂಲಕ ಬೆದರಿಕೆಯ ಸಂದೇಶ ಬಂದಿದೆ. ಮುಂಜಾಗ್ರತಾ ಕ್ರಮವಾಗಿ ನಿಲ್ದಾಣಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಬಜ್ಪೆಯ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇ-ಮೇಲ್ ಮೂಲಕ ಬೆದರಿಕೆ ಬಂದಿದ್ದು, ಈ ಬಗ್ಗೆ ಪೊಲೀಸರು ಭದ್ರತೆಯ ಬಗ್ಗೆ ನಿಗಾವಹಿಸಿದ್ದಾರೆ ಎಂದು ಬಜ್ಪೆ ಪೊಲೀಸರು ತಿಳಿಸಿದ್ದಾರೆ.
ವಿಮಾನ ನಿಲ್ದಾಣದ ಆವರಣ ಪ್ರವೇಶಿಸುವ ಪ್ರತಿಯೊಬ್ಬ ಪ್ರಯಾಣಿಕನನ್ನು ಮತ್ತು ಸಾರ್ವಜನಿಕರನ್ನು ತೀವ್ರ ತಪಾಸಣೆಗೆ ಒಳಪಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳ, ಪೊಲೀಸ್, ಆಂತರಿಕ ಭದ್ರತಾ ಸಿಬ್ಬಂದಿ ಮತ್ತು ಗುಪ್ತಚರ ಇಲಾಖೆ ನಿಗಾ ವಹಿಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
























