ಪ್ರೀತಿಸುವ ನಾಟಕವಾಡಿ ವಂಚಿಸಿದ್ದಾರೆ ಎಂದು ಆರೋಪಿಸಿದ ಯುವತಿ
ಲಖನೌ: ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಆಡುತ್ತಿರುವ ಭಾರತದ ಯುವ ಕ್ರಿಕೆಟಿಗ ಯಶ್ ದಯಾಳ್ ವಿರುದ್ಧ ಯುವತಿಯೊಬ್ಬರು ಲೈಂಗಿಕ ದೌರ್ಜನ್ಯ, ಹಿಂಸೆ ಮತ್ತು ವಂಚನೆ ಆರೋಪ ಹೊರಿಸಿದ್ದಾರೆ. ಯಶ್ ದಯಾಳ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಯುವತಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು, ನ್ಯಾಯಕ್ಕಾಗಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ರಾಜ್ಯ ಪೊಲೀಸರಿಗೆ ಮನವಿ ಕೂಡ ಮಾಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ಸಿಎಂ ಹೆಲ್ಪ್‌ಲೈನ್ ಪೋರ್ಟಲ್‌ನಲ್ಲಿ ದೂರು ದಾಖಲಿಸಿದ್ದು, ಅದರ ಸ್ಕ್ರೀನ್‌ಶಾಟ್‌ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್‌ನಲ್ಲಿ ಮಹಿಳೆ ದಯಾಳ್ ಜೊತೆಗಿನ ತನ್ನ ಫೋಟೋವನ್ನು ಸಹ ಹಂಚಿಕೊಂಡಿದ್ದಾರೆ. ಕಳೆದ 5 ವರ್ಷಗಳಿಂದ ದಯಾಳ್ ಜೊತೆ ಸಂಬಂಧ ಹೊಂದಿದ್ದು, ದಯಾಳ್ ತನ್ನನ್ನು ಮದುವೆಯಾಗುವುದಾಗಿ ನಂಬಿಸಿ ಭಾವನಾತ್ಮಕವಾಗಿ, ಮಾನಸಿಕವಾಗಿ ಮತ್ತು ದೈಹಿಕವಾಗಿ ಶೋಷಿಸಿದ್ದಾರೆ. ದಯಾಳ್ ನನ್ನನ್ನು ಭಾವಿ ಸೊಸೆ ಎಂದು ಅವರ ಕುಟುಂಬಕ್ಕೆ ಪರಿಚಯಿಸಿ, ಆ ಬಳಿಕ ನನಗೆ ವಂಚಿಸಿದ್ದಾರೆ ಎಂದು ಯುವತಿ ಹೇಳಿಕೊಂಡಿದ್ದಾರೆ.
ದಯಾಳ್ ತನಗೆ ಮೋಸ ಮಾಡುತ್ತಿದ್ದಾರೆಂದು ತಿಳಿದ ತಕ್ಷಣ ನಾನು ಇದನ್ನು ಪ್ರತಿಭಟಿಸಿದೆ. ಇದರಿಂದ ನಾನು ದೈಹಿಕ ಹಿಂಸೆ ಮತ್ತು ಮಾನಸಿಕ ಕಿರುಕುಳ ಎದುರಿಸಬೇಕಾಯಿತು. ದಯಾಳ್ ನನ್ನೊಂದಿಗೆ ಮಾತ್ರವಲ್ಲದೆ ಅನೇಕ ಮಹಿಳೆಯರೊಂದಿಗೆ ಅಕ್ರಮ ಸಂಬಂಧವನ್ನು ಹೊಂದಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ನಾನು ಜೂನ್ 14ರಂದು ಮಹಿಳಾ ಸಹಾಯವಾಣಿಗೆ ಪ್ರಕರಣದ ಬಗ್ಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಸಂತ್ರಸ್ತೆ ಪೊಲೀಸರ ವಿರುದ್ಧವೂ ಆರೋಪ ಹೊರಿಸಿದ್ದಾರೆ.
ಯುವತಿ ಆರೋಪಗಳಲ್ಲಿ ಎಲ್ಲಿಯೂ ಯಶ್ ದಯಾಳ್ ಹೆಸರನ್ನು ಉಲ್ಲೇಖಿಸಿಲ್ಲ. ಆದರೆ ಸಾಮಾಜಿಕ ಮಾಧ್ಯಮ ಪೋಸ್ಟ್‌ನಲ್ಲಿ ಯಶ್ ದಯಾಳ್ ಅವರೊಂದಿಗೆ ತಾನಿರುವ ಫೋಟೊ ಹಂಚಿಕೊಂಡಿರುವುದರಿಂದ ದಯಾಳ್ ವಿರುದ್ಧವೇ ಈ ಆರೋಪ ಮಾಡುತ್ತಿದ್ದಾರೆ ಎಂದು ಖಚಿತವಾಗಿದೆ.
ಐಪಿಎಲ್‌ನಲ್ಲಿ ಚಾಂಪಿಯನ್ ಆರ್‌ಸಿಬಿ ಪರ ಆಡಿರುವ ಯಶ್ ದಯಾಳ್ ಸತತ ಐದು ಎಸೆತಗಳಲ್ಲಿ 5 ಸಿಕ್ಸರ್ ಹೊಡಿಸಿಕೊಂಡು ಭಾರಿ ಟೀಕೆಗೆ ಗುರಿಯಾಗಿದ್ದರು. ಆದರೆ ಬಳಿಕ ಅದೇ ಐಪಿಎಲ್‌ನಲ್ಲಿ ತಂಡವೊಂದನ್ನು ಚಾಂಪಿಯನ್ ಮಾಡುವ ಮೂಲಕ ಮೆಚ್ಚುಗೆಯನ್ನೂ ಪಡೆದಿದ್ದರು.
























