ಮಂಗಳೂರು ನಗರವೊಂದರಲ್ಲೇ ಹಲವು ಲಕ್ಷ ರೂಪಾಯಿ ಪಂಗನಾಮ
ಮಂಗಳೂರು : ಆನ್‌ಲೈನ್ ಮೂಲಕ ಹೂಡಿಕೆಗೆ ಪ್ರಚೋದಿಸಿ ಮೋಸ ಮಾಡುತ್ತಿರುವ ಪ್ರಕರಣಗಳು ಮತ್ತೊಮ್ಮೆ ಕಳವಳಕಾರಿಯಾಗಿ ಹೆಚ್ಚುತ್ತಿವೆ. ಕಳೆದೊಂದು ವಾರದಲ್ಲೆ ಮಂಗಳೂರು ಸೈಬರ್ ಠಾಣೆಯಲ್ಲೇ ಇಂಥ ಹಲವು ಪ್ರಕರಣಗಳು ದಾಖಲಾಗಿದ್ದು, ಒಂದು ಕೋಟಿಗಟ್ಟಲೆ ಮೊತ್ತ ವಂಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮಂಗಳೂರು ನಗರ ಪೊಲೀಸರು ಸಾರ್ವಜನಿಕ ಜಾಗೃತಿ ಅಭಿಯಾನ ಪ್ರಾರಂಭಿಸಿದ್ದು, ಜನರು ಇಂಥ ತ್ವರಿತ ಲಾಭದ ಹೂಡಿಕೆಗಳ ಬಗ್ಗೆ ಜಾಗರೂಕರಾಗಿರಬೇಕೆಂದು ಎಚ್ಚರಿಸಿದ್ದಾರೆ.
ವಂಚಕರು ನಕಲಿ ಹೂಡಿಕೆ ಸೈಟ್‌ಗಳು, ಮೊಬೈಲ್ ಅಪ್ಲಿಕೇಶನ್‌ಗಳು ಮತ್ತು ಸಾಮಾಜಿಕ ಮಾಧ್ಯಮ ಜಾಹೀರಾತುಗಳನ್ನು ಬಳಸಿಕೊಂಡು ವೃತ್ತಿಪರ ಮತ್ತು ಹೆಚ್ಚು ಲಾಭದಾಯಕವೆಂದು ತೋರುವ ಯೋಜನೆಗಳಿಗೆ ಜನರನ್ನು ಆಕರ್ಷಿಸಿ ಮೋಸ ಮಾಡುತ್ತಿದ್ದಾರೆ. ದೊಡ್ಡ ಮೊತ್ತದ ಹಣ ಹೂಡಿಕೆ ಮಾಡಿದ ನಂತರ ವಂಚಿಸಲಾಗುತ್ತದೆ. ನಕಲಿ ವೆಬ್‌ಸೈಟ್‌ಗಳು, ವಾಟ್ಸಾಪ್ ಮತ್ತು ಟೆಲಿಗ್ರಾಮ್ ಗ್ರೂಪ್‌ಗಳು, ಫೇಸ್‌ಬುಕ್ ಖಾತೆಗಳಲ್ಲಿ ಸಿನಿಮಾ ತಾರೆಯರು, ಹೆಸರಾಂತ ವ್ಯಕ್ತಿಗಳ ನಕಲಿ ಪ್ರಮಾಣಪತ್ರಗಳನ್ನು ತೋರಿಸಿ ವಂಚಿಸುತ್ತಾರೆ.
ಸುರತ್ಕಲ್‌ನ ವ್ಯಕ್ತಿಯೊಬ್ಬರಿಗೆ ವಾಟ್ಸಾಪ್ ಗ್ರೂಪ್‌ಗಳ ಮೂಲಕ crypto tradingನಲ್ಲಿ ಹೂಡಿಕೆ ಮಾಡುವಂತೆ ನಂಬಿಸಿ ಹಂತ ಹಂತವಾಗಿ 1.57 ಕೋಟಿ ರೂ. ಹೂಡಿಕೆ ಮಾಡಿಸಿ ಮೋಸ ಮಾಡಿದ್ದಾರೆ. ಕೆ.ಪಿ.ಟಿ.ಯ ವ್ಯಕ್ತಿಯಿಂದ ಷೇರು ಮಾರುಕಟ್ಟೆ ಲಾಭದ ಆಶಯದಲ್ಲಿ ವಾಟ್ಸಾಪ್ ತರಬೇತಿ ಗ್ರೂಪ್ ಮೂಲಕ 37.49 ಲಕ್ಷ ರೂ. ಹೂಡಿಕೆ ಮಾಡಿಸಿದ್ದು, ಬಳಿಕ ಲಾಭಾಂಶ ಪಡೆಯಲು ಹೆಚ್ಚು ತೆರಿಗೆ ಪಾವತಿಸುವಂತೆ ಒತ್ತಾಯಿಸಿ ಮೋಸ ಮಾಡಿದ್ದಾರೆ. ಪಂಜಿಮೊಗರಿನ ವ್ಯಕ್ತಿಯೊಬ್ಬರಿಗೆ ಇನ್ಸ್ಟಾಗ್ರಾಂನಲ್ಲಿ Work from Home ಜಾಹೀರಾತು ನೆಪದಲ್ಲಿ 27.01 ಲಕ್ಷ ರೂ. ಅವರ ಹಾಗೂ ಕುಟುಂಬ ಸದಸ್ಯರ ಖಾತೆಯಿಂದ ವರ್ಗಾವಣೆ ಮಾಡಿಸಿ ಮೋಸ ಮಾಡಿದ್ದಾರೆ.
ಕಂಕನಾಡಿಯ ವ್ಯಕ್ತಿಗೆ Facebook ಜಾಹೀರಾತು ಮುಖಾಂತರ ಷೇರು ಮಾರುಕಟ್ಟೆ ಲಾಭದ ಭರವಸೆ ನೀಡಿ 30.55 ಲಕ್ಷ ರೂ. ಹೂಡಿಕೆ ಮಾಡುವಂತೆ ನಂಬಿಸಿ, ಹೂಡಿಕೆ ನಂತರ ಹಣ ನೀಡದೆ ಮೋಸ ಮಾಡಿದ್ದಾರೆ. ಉರ್ವದ ವ್ಯಕ್ತಿಗೆ ಟೆಲಿಗ್ರಾಮ್ ಖಾತೆ ಮೂಲಕ crypto currency trading ಸಲಹೆ ನೀಡಿ 13.57 ಲಕ್ಷ ರೂ. ಹೂಡಿಕೆ ಮಾಡಿಸಿ, ಯಾವುದೇ ಲಾಭ, ಹೂಡಿಕೆ ಹಣ ನೀಡದೆ ಮೋಸ ಮಾಡಿದ್ದಾರೆ. ಇವೆಲ್ಲ ಕಳೆದ ಸುಮಾರು ಒಂದು ವಾರದಲ್ಲಿ ನಗರದಲ್ಲಿ ನಡೆದಿರುವ ಮೋಸದ ಪ್ರಕರಣಗಳು.
























