ಟೆಹ್ರಾನ್: ಇರಾನ್ – ಇಸ್ರೇಲ್ ನಡುವೆ ಕದನ ವಿರಾಮದಲ್ಲಿದ್ದರೂ ಉಭಯ ರಾಷ್ಟ್ರಗಳ ಕೆಸರೆರಚಾಟ ಮಾತ್ರ ನಿಂತಿಲ್ಲ.
ಇಸ್ರೇಲ್ ವಿರುದ್ಧ ಮಾತಿನ ಚಾಟಿ ಬೀಸಿರುವ ಇರಾನಿನ ವಿದೇಶಾಂಗ ಸಚಿವ ಅಬ್ಬಾಸ್ ಅರಖ್ಚಿ, ಇರಾನಿನ ಕ್ಷಿಪಣಿಗಳಿಂದ ನಾಶವಾಗುವುದನ್ನು ತಪ್ಪಿಸಲು ಇಸ್ರೇಲ್ಗೆ ‘ಅಪ್ಪನ ಬಳಿಗೆ ಓಡುವುದು ಬಿಟ್ಟು ಬೇರೆ ದಾರಿ ಇಲ್ಲ’ ಎಂದು ಅಮೇರಿಕಾವನ್ನು ಉದ್ದೇಶಿಸಿ ಹೇಳಿದ್ದಾರೆ.
ಹಾಗೆಯೇ ಇರಾನ್ ಜೊತೆಗೆ ಪರಮಾಣು ಒಪ್ಪಂದವನ್ನು ಮಾಡಿಕೊಳ್ಳುವ ಬಗ್ಗೆ ಅಮೆರಿಕಾ ಗಂಭೀರವಾಗಿದ್ದರೆ, ಸುಪ್ರೀಂ ನಾಯಕ ಅಯತೊಲ್ಲಾ ಖಮೇನಿ ಮೇಲೆ ಅಗೌರವದ ಸ್ವರ ಬಳಕೆ ಮಾಡುವುದನ್ನು ತಪ್ಪಿಸಬೇಕು ಎಂದು ಅವರು ತಿಳಿಸಿದ್ದಾರೆ.
ಇರಾನಿನ ಜನರು ಬೆದರಿಕೆ, ಅವಮಾನಗಳನ್ನು ಸೌಮ್ಯವಾಗಿ ಸ್ವೀಕರಿಸುವುದಿಲ್ಲ. ಅಂತಹ ಭ್ರಮೆಗಳು ಕೆಟ್ಟ ತಪ್ಪುಗಳಿಗೆ ಕಾರಣವಾಗುತ್ತವೆ. ಇರಾನಿನ ಜನತೆ ತಮ್ಮ ನೈಜ ಸಾಮರ್ಥ್ಯ ಅನಾವರಣ ಮಾಡಲು ಹಿಂದೆ ಮುಂದೆ ನೋಡುವುದಿಲ್ಲ. ಇದು ಇರಾನಿನ ಬಗ್ಗೆ ಇರುವ ಭ್ರಮೆಯನ್ನು ಕೊನೆಗೊಳಿಸುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
























