ಢಾಕಾ: ಬಾಂಗ್ಲಾದೇಶದಲ್ಲಿ ಹಿಂದೂ ವಿರೋಧಿ ಚಟುವಟಿಕೆಗಳು ಮುಂದುವರೆದಿದ್ದು, ಢಾಕಾದ ಖಿಲ್ಖೇತ್ ಪ್ರದೇಶದ ಹಿಂದೂ ಧಾರ್ಮಿಕ ಶ್ರದ್ಧಾ ಕೇಂದ್ರವಾದ ದುರ್ಗಾ ದೇವಾಲಯವನ್ನು ಧ್ವಂಸ ಮಾಡಲಾಗಿದೆ.
ಈ ಘಟನೆಗೆ ಭಾರತದ ವಿದೇಶಾಂಗ ಸಚಿವಾಲಯದ ವಕ್ತಾರ ರಣದೀಪ್ ಸಿಂಗ್ ಜೈ ಸ್ ವಾಲ್ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಈ ಕೃತ್ಯ ಭಾರತೀಯರ ಧಾರ್ಮಿಕ ಭಾವನೆಗಳಿಗೆ ಘಾಸಿ ಮಾಡಿದೆ. ಇದನ್ನು ಸಾಮಾನ್ಯ ಘಟನೆ ಎಂದು ಹಗುರವಾಗಿ ಪರಿಗಣಿಸಲಾಗದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಘಟನೆ ಕೇವಲ ಭೂ ಕಬಳಿಕೆಯ ವಿಷಯವಲ್ಲ. ಬದಲಾಗಿ ಬಾಂಗ್ಲಾದೇಶದಲ್ಲಿ ಅಲ್ಲಿ ಅಲ್ಪಸಂಖ್ಯಾತ ಹಿಂದೂಗಳಿಗ ಭದ್ರತೆ, ಸುರಕ್ಷತೆಗೆ ಸಂಬಂಧಿಸಿದ ಗಂಭೀರ ಸಂಗತಿಯಾಗಿದೆ ಎಂದು ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬಾಂಗ್ಲಾದೇಶ, ಇದು ರೈಲ್ವೆ ಭೂಮಿಯಲ್ಲಿ ಇದ್ದ ಅನಧಿಕೃತ ನಿರ್ಮಾಣವಾಗಿದ್ದು, ಅದನ್ನು ಅನಧಿಕೃತ ನಿರ್ಮಾಣಗಳ ತೆರವಿನ ಭಾಗವಾಗಿ ತೆರವು ಮಾಡಲಾಗಿದೆ ಎಂದು ಹೇಳಿದೆ. ಕಳೆದ ವರ್ಷ ರೈಲ್ವೆ ಭೂಮಿಯಲ್ಲಿ ಹಿಂದೂ ಧರ್ಮೀಯರು ತಾತ್ಕಾಲಿಕವಾಗಿ ಈ ದುರ್ಗಾ ಪೂಜಾ ಮಂಟಪ ನಿರ್ಮಿಸಿತ್ತು. ಆ ಸಂದರ್ಭದಲ್ಲಿಯೇ ಪೂಜೆ ಮುಗಿದ ನಂತರ ಅದನ್ನು ತೆರವು ಮಾಡುವ ಷರತ್ತು ವಿಧಿಸಲಾಗಿತ್ತು ಎಂದು ತಿಳಿಸಿದೆ.
























