ಕೆನರಾ ಬ್ಯಾಂಕ್‌ ಶಾಖೆಯಿಂದ 59 ಕೆಜಿ ಚಿನ್ನ ಕದ್ದ ಆರೋಪಿಗಳು ಅರೆಸ್ಟ್‌

ಬ್ಯಾಂಕ್‌ ಮ್ಯಾನೇಜರ್‌ ಕಳ್ಳರ ಗ್ಯಾಂಗಿನ ಲೀಡರ್‌ ; ಸಿನಿಮೀಯ ರೀತಿಯಲ್ಲಿ ಪ್ಲ್ಯಾನ್‌

ಬೆಂಗಳೂರು : ವಿಜಯಪುರ ಜಿಲ್ಲೆಯ ಬಸನವನಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದಲ್ಲಿರುವ ಕೆನರಾ ಬ್ಯಾಂಕ್ ಶಾಖೆಯಲ್ಲಿ ಮೇ 25ರಂದು ನಸುಕಿನ ಹೊತ್ತು ನಡೆದ 59 ಕೆಜಿ ಬಂಗಾರ ಕಳ್ಳತನ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಕೊನೆಗೂ ಸಫಲರಾಗಿದ್ದಾರೆ. ಆಘಾತಕಾರಿ ವಿಚಾರವೆಂದರೆ ಕೆನರಾ ಬ್ಯಾಂಕ್‌ ಮ್ಯಾನೇಜರ್‌ ಈ ಕಳ್ಳತನದ ರೂವಾರಿ. ಬ್ಯಾಂಕಿನಿಂದ ಮೇ 25ರಂದು ನಸುಕಿನ ಹೊತ್ತು 58.975.94 ಕೆಜಿ ಚಿನ್ನಾಭರಣಗಳು ಮತ್ತು 5.20 ಲಕ್ಷ ನಗದು ಕಳ್ಳತನವಾಗಿತ್ತು. ಇದು ದೇಶದಲ್ಲಿ ನಡೆದ ಅತಿದೊಡ್ಡ ಮೊತ್ತದ ಬ್ಯಾಂಕ್‌ ದರೋಡೆ ಪ್ರಕರಣಗಳಲ್ಲಿ ಒಂದಾಗಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸರು 8 ತಂಡಗಳನ್ನು ರಚಿಸಿ ತನಿಖೆ ಕೈಗೊಂಡಿದ್ದರು.
ಬ್ಯಾಂಕ್ ಕಿಟಕಿ ಸರಳು ಮುರಿದು, ಕಪ್ಪು ಗೊಂಬೆಗೆ ಪೂಜೆ ಮಾಡಿ ವಾಮಾಚಾರ ಮಾಡಿದ್ದು ತನಿಖೆಯ ಹಾದಿ ತಪ್ಪಿಸಲು ಎಂಬುವುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲೇ ಗೊತ್ತಾಗಿತ್ತು. 8 ವಿಶೇಷ ತಂಡಗಳು ಕೇರಳ ತಮಿಳುನಾಡು, ಮಹಾರಾಷ್ಟ್ರ, ಮಧ್ಯಪ್ರದೇಶ, ಬಿಹಾರ ಮತ್ತು ರಾಜಸ್ತಾನ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ತೀವ್ರ ತನಿಖೆ ನಡೆಸಿದ್ದವು.

ಘಟನೆ ನಡೆದ ದಿನ ಹುಬ್ಬಳ್ಳಿ ಪಾಸಿಂಗ್ ಹೊಂದಿದ್ದ ಕಾರೊಂದು ಬಾಗಲಕೋಟೆ ಜಿಲ್ಲೆಯ ಗದ್ದನಕೇರಿ ಕ್ರಾಸ್ ಬಳಿ ವಿಜಯಪುರದಿಂದ ಹುಬ್ಬಳ್ಳಿಯತ್ತ ರಾತ್ರಿ ಪ್ರಯಾಣ ಮಾಡಿದ್ದು ಕಂಡು ಬಂದಿತ್ತು. ಈ ಕಾರ್ ನಂಬರ್ ಆಧಾರದ ಮೇಲೆ ತನಿಖೆ ಮಾಡಿದಾಗ ಈ ಕಾರ್ ಮನಗೂಳಿ ಪಟ್ಟಣದ ಕೆನರಾ ಬ್ಯಾಂಕ್​ನಲ್ಲಿ ಮ್ಯಾನೇಜರ್ ಆಗಿದ್ದ ಹಾಗೂ ಸದ್ಯ ಕೊಲ್ಹಾರ ತಾಲೂಕಿನ ರೋಣಿಹಾಳ ಗ್ರಾಮದಲ್ಲಿರುವ ಕೆನರಾ ಬ್ಯಾಂಕ್​ ಮ್ಯಾನೇಜರ್ ಹುಬ್ಬಳ್ಳಿಯ ಕೊಠಾರಿ ನಗರದ ವಿಜಯಕುಮಾರ ಮಿರಿಯಾಲ ಎಂಬುವನದ್ದು ಎಂದು ತಿಳಿದು ಬಂದಿತ್ತು.





















































 
 

ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮನಗೂಳಿಯ ಕೆನೆರಾ ಬ್ಯಾಂಕ್ ಕಳ್ಳತನದ ವಿವರ ಬಹಿರಂಗವಾಗಿದೆ. ವಿಜಯ ಕುಮಾರ, ಹುಬ್ಬಳ್ಳಿಯ ಜನತಾ ಕಾಲನಿಯ ಚಂದ್ರಶೇಖರ್ ನೆರೆಲ್ಲಾ ಹಾಗೂ ಹುಬ್ಬಳ್ಳಿಯ ಚಾಲುಕ್ಯ ನಗರದ ಸುನೀಲ ಮೋಕಾ ಹಾಗೂ ಇತರರೊಂದಿಗೆ ಮನಗೂಳಿಯ ಕೆನರಾ ಬ್ಯಾಂಕ್ ಕಳ್ಳತನಕ್ಕೆ ಸಿನಿಮೀಯ ರೀತಿಯಲ್ಲಿ ಪಕ್ಕಾ ಪ್ಲ್ಯಾನ್ ಮಾಡಿದ್ದ. ಇಂಗ್ಲೀಷ್‌, ಹಿಂದಿ ಚಲನಚಿತ್ರಗಳನ್ನು ನೋಡಿ ಹೇಗೆ ಕಳ್ಳತನ ಮಾಡಬಹುದೆಂದು ಪ್ಲ್ಯಾನ್‌ ಮಾಡಿದ್ದರು. ವಿಜಯಕುಮಾರ ಮಿರಿಯಾಲ ಮನಗೂಳಿಯ ಕೆನರಾ ಬ್ಯಾಂಕ್ ಮ್ಯಾನೇಜರ್ ಆಗಿದ್ದಾಗಲೇ ಬ್ಯಾಂಕ್​ ಲಾಕರ್, ಸೈರನ್ ಸೇರಿದಂತೆ ಇತರ ಎಲ್ಲ ಕೀಗಳನ್ನು ನಕಲಿ ಮಾಡಿಸಿದ್ದನು. ನಂತರ ಅವೆಲ್ಲವುಗಳು ಸರಿಯಾಗಿ ಕೆಲಸ ಮಾಡುತ್ತಿವೆಯಾ ಎಂದು ಬಳಕೆ ಮಾಡಿ ನೋಡಿದ್ದಾನೆ.

ಮನಗೂಳಿ ಶಾಖೆಯಿಂದ ರೋಣಿಹಾಳ ಶಾಖೆಗೆ ವರ್ಗಾವಣೆಯಾಗಿ ಮೇ 9ರಂದು ವಿಜಯಕುಮಾರ ಹೋದ ಬಳಿಕ ಕಳ್ಳತನ ಮಾಡಲು ಸ್ಕೆಚ್ ಹಾಕಿದ್ದಾರೆ. ಮೇ 23 ರಂದು ಐಪಿಎಲ್ ಆರ್​ಸಿಬಿ ಹಾಗೂ ಸನ್ ರೈಸರ್ಸ್ ಪಂದ್ಯದ ದಿನ ಕಳ್ಳತನ ಮಾಡಲು ನಿರ್ಧಾರ ಮಾಡಿದ್ದರು. ಈ ಪಂದ್ಯದಲ್ಲಿ ಆರ್‌ಸಿಬಿ ಸೋತ ಕಾರಣ ಯಾರೂ ಪಟಾಕಿ ಹೊಡೆಯಲ್ಲ ಹಾಗೂ ಮಳೆ ಬಾರದ ಕಾರಣ ಅಂದು ಕಳ್ಳತನ ಮಾಡುವ ನಿರ್ಧಾರ ಕೈ ಬಿಟ್ಟಿದ್ದರು. ಮೇ 24ರಂದು ತಡರಾತ್ರಿ ಬಂದು ಸಿಸಿ ಕ್ಯಾಮೆರಾ ತಿರುಗಿಸಿ, ಲೈಟ್​ ಕನೆಕ್ಷನ್ ಕಟ್ ಮಾಡಿ ಇತರ ಎಲ್ಲಾ ಪ್ಲ್ಯಾನ್​ಗಳನ್ನು ಮಾಡುತ್ತಾರೆ. ಮುಖಕ್ಕೆ ಮಾಸ್ಕ್, ಹೆಲ್ಮೇಟ್ ಹಾಕಿಕೊಂಡು ಕೃತ್ಯ ಎಸಗುತ್ತಾರೆ. 58 ಕೆಜಿ 975.94 ಕೆಜಿ ಚಿನ್ನಾಭರಣ 5.20 ಲಕ್ಷ ನಗದು ಕದ್ದು ಪರಾರಿಯಾಗುತ್ತಾರೆ. ಇಷ್ಟೆಲ್ಲ ಆಗುವಾಗ ನಸುಕಿನ ಹೊತ್ತಾಗಿತ್ತು.

ಕೃತ್ಯಕ್ಕೆ ಬಳಸಿದ ಬೈಕ್​ಗಳನ್ನು ಸಾಗಿಲು ಟ್ರಕ್ ಉಪಯೋಗಿಸಿದ್ದಾರೆ. ಕಳ್ಳತನ ಮಾಡಿದ್ದ 58 ಕೆಜಿ 975.94 ಕೆಜಿ ಚಿನ್ನಾಭರಣಗಳನ್ನು ಕರಗಿಸಿ ಗಟ್ಟಿಗಳನ್ನಾಗಿ ಮಾಡಿದ್ದಾರೆ. ಸದ್ಯ ಮೂವರು ಆರೋಪಿಗಳ ಬಳಿ 10.5 ಕೆಜಿ ಚಿನ್ನಾಭರಣ ಕರಗಿಸಿ ಮಾಡಿಟ್ಟಿದ್ದ ಗಟ್ಟಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನೂ ಚಿನ್ನಾಭರಣ ಹಾಗೂ ಹಲವಾರು ಆರೋಪಿತರನ್ನು ಪತ್ತೆ ಮಾಡಬೇಕಿದೆ. ಶೀಘ್ರವೇ ಎಲ್ಲರ ಬಂಧನ ಮಾಡುತ್ತೇವೆಂದು ಎಸ್ಪಿ ಹೇಳಿದ್ದಾರೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top