ಬೆಂಗಳೂರು: ಕೆಆರ್‌ಎಸ್ ಸಮೀಪದಲ್ಲಿ ಮನರಂಜನಾ ಪಾರ್ಕ್ ಮತ್ತು ಕಾವೇರಿ ಆರತಿ ನಿರ್ಮಾಣ ಕಾಮಗಾರಿಗೆ. ಸಂಬಂಧಿಸಿದಂತೆ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದ್ದು, ಈ ಸಂಬಂಧ ಸರ್ಕಾರಕ್ಕೆ ನೊಟೀಸ್ ಜಾರಿ ಮಾಡಿ ವಿವರಣೆ ಕೇಳಿದೆ.
ಈ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ವಿ. ಕಾಮೇಶ್ವರ್ ರಾವ್, ಸಿ.ಎಂ. ಜೋಶಿ ಅವರಿದ್ದ ಪೀಠ ವಿಚಾರಣೆ ನಡೆಸಿದ್ದು, ವಿವರಣೆ ಕೋರಿ ಕರ್ನಾಟಕ ಸರ್ಕಾರ ಮತ್ತು ಕಾವೇರಿ ನೀರಾವರಿ ನಿಗಮಕ್ಕೆ ನೊಟೀಸ್ ನೀಡಿರುವುದಾಗಿದೆ.
ಈ ಅರ್ಜಿಯಲ್ಲಿ ಅಣೆಕಟ್ಟಿನ ಸಮೀಪ 120 ಅಡಿಯ ಕಾವೇರಿ ಮೂರ್ತಿ ಸ್ಥಾಪಿಸಲಾಗುತ್ತಿರುವ ಬಗ್ಗೆಯೂ ಮಾಹಿತಿ ನೀಡಲಾಗಿದ್ದು, ಬೃಹತ್ ಯಂತ್ರಗಳಿಂದ ಕಾಮಗಾರಿ ನಡೆಸುತ್ತಿರುವ ಚಿತ್ರಗಳನ್ನೂ ಲಗತ್ತಿಸಲಾಗಿದೆ.
ಹೈಕೋರ್ಟ್ ನೀಡಿದ ನೊಟೀಸಿಗೆ ಸರ್ಕಾರ ಉತ್ತರಿಸಿದ್ದು, ಸದ್ಯ ಕಾವೇರಿ ಪ್ರತಿಮೆ ಸ್ಥಾಪನೆಗೆ ಮಾತ್ರ ಟೆಂಡರ್ ಕರೆಯಲಾಗಿದೆ. ಇದಕ್ಕಾಗಿ ತಜ್ಞರ ಅಭಿಪ್ರಾಯ ಸಹ ಪಡೆಯಲಾಗಿದೆ. ಡಿಸ್ನಿಲ್ಯಾಂಡ್‌ನಂತಹ ಮನರಂಜನಾ ಪಾರ್ಕ್ ನಿರ್ಮಾಣಕ್ಕೆ ಟೆಂಡರ್ ಪೂರ್ತಿಯಾಗಿಲ್ಲ ಎಂದು ಹೇಳಿದೆ.
ಇದಕ್ಕೆ ಮರು ಪ್ರಶ್ನೆ ಹಾಕಿರುವ ನ್ಯಾಯಾಲಯ,ಈ ಕಾಮಗಾರಿಯಿಂದ ಡ್ಯಾಂಗೆ ಅಪಾಯವಾಗುವುದಿಲ್ಲವೇ? ಇದಕ್ಕಾಗಿ ಜಲಾಶಯ ಸುರಕ್ಷತಾ ಸಮಿತಿಯ ಅನುಮತಿ ಏಕೆ ಪಡೆಯಲಾಗಿಲ್ಲ? ಎಂದು ಕೇಳಿದೆ. ಹಾಗೆಯೇ ಮನರಂಜನಾ ಪಾರ್ಕ್ ನಿರ್ಮಾಣಕ್ಕೆ ತಾಂತ್ರಿಕ ತಜ್ಞರ ಅನುಮತಿ ಪಡೆಯಲಾಗಿದೆಯೇ? ತಜ್ಞರ ಸಲಹೆ ಪಾಲನೆ ಮಾಡಲಾಗಿದೆಯೇ? ಎಂದು ಕೇಳಿದೆ.
























