ಮಂಗಳೂರು : ಮಂಜೇಶ್ವರ ಸಮೀಪ ವರ್ಕಾಡಿಯಲ್ಲಿ ಹೆತ್ತ ತಾಯಿಯನ್ನು ಬೆಂಕಿಹಚ್ಚಿ ಕೊಂದ ಕಟುಕ ಪುತ್ರನನ್ನು ಪೊಲೀಸರು ಉಡುಪಿಯ ಬೈಂದೂರಿನಲ್ಲಿ ಬಂಧಿಸಿದ್ದಾರೆ. ಆರೋಪಿ ಮಗ ಮೆಲ್ವಿನ್ ಗುರುವಾರ ರಾತ್ರಿ ಮನೆಯಲ್ಲಿ ಮಲಗಿದ್ದ ತಾಯಿಯನ್ನು ಮಾರಕಾಸ್ತ್ರಗಳಿಂದ ಹೊಡೆದು ಬಳಿಕ ಕಾಡಿನೊಳಗೆ ಎಳೆದೊಯ್ದು ಬೆಂಕಿ ಹಚ್ಚಿ ಸುಟ್ಟಾಕ್ಕಿದ್ದ. ತಾಯಿಯನ್ನು ಹತ್ಯೆ ಮಾಡಿದ ಬಳಿಕ ಆತ ಪಕ್ಕದ ಮನೆಯಲ್ಲಿದ್ದ ಅತ್ತೆಯನ್ನು ಕರೆದು ಕೊಲೆ ಮಾಡಲು ಯತ್ನಿಸಿದ್ದ.
ಮೆಲ್ವಿನ್ ಮೊಂತೇರೊ ತಾಯಿಯ ವರ್ಕಾಡಿಯಲ್ಲಿ ತಾಯಿ 60 ವರ್ಷದ ಹಿಲ್ಡಾ ಜೊತೆ ಈ ವಾಸವಿದ್ದ. ತಂದೆ ಲೂಯಿಸ್ ಮೊಂತೇರೋ ತೀರಿಹೋಗಿದ್ದಾರೆ. ಆತನ ಸಹೋದರ ಅಲ್ವಿನ್ ಮೊಂತೇರೋ ಗಲ್ಫ್ನಲ್ಲಿ ಇದ್ದಾರೆ. ಗುರುವಾರ ಮಧ್ಯರಾತ್ರಿ ಒಂದು ಗಂಟೆ ವೇಳೆಗೆ ತಾಯಿ ಹಿಲ್ಡಾ ಅವರ ತಲೆಗೆ ಹೊಡೆದು ಮಾರಕಾಸ್ತ್ರದಿಂದ ಹೊಡೆದಿದ್ದಾನೆ. ಬಳಿಕ ಅಲ್ಲಿಂದ ಎಳೆದುಕೊಂಡು ಮನೆಯ ಹಿಂಭಾಗಕ್ಕೆ ಹೋಗಿ ಕಾಡಿನಂತಹ ಜಾಗದಲ್ಲಿ ಎಸೆದಿದ್ದಾನೆ. ಬಳಿಕ ಪೆಟ್ರೋಲ್ ಹಚ್ಚಿ ಜೀವಂತವಾಗಿ ಸುಟ್ಟು ಹಾಕಿದ್ದ.
ಪಕ್ಕದ ಮನೆಯಲ್ಲಿ ಹಿಲ್ಡಾಳ ತಮ್ಮ ವಿಕ್ಟರ್ ಮನೆ ಇದೆ. ವಿಕ್ಟರ್ ಕೂಡ ವಿದೇಶದಲ್ಲಿ ಕೆಲಸದಲ್ಲಿದ್ದು, ಅವರ ಪತ್ನಿ 30 ವರ್ಷದ ಲೊಲಿಟಾ ತನ್ನ 5 ವರ್ಷದ ಮಗುವಿನೊಂದಿಗೆ ವಾಸವಿದ್ದರು. ತಾಯಿಯನ್ನು ಕೊಂದ ನಂತರ ಮೆಲ್ವಿನ್ ತನ್ನ ಅತ್ತೆ ಲೊಲಿಟಾ ಮನೆಯ ಬಾಗಿಲು ಬಡಿದಿದ್ದಾನೆ. ಲೊಲಿಟಾ ತಾಯಿಗೆ ಹುಷಾರಿಲ್ಲ. ಸೀರಿಯಸ್ ಆಗಿದ್ದಾಳೆ ಎಂದು ಹೇಳಿದ್ದಾನೆ. ಇದನ್ನು ಕೇಳಿದ ಲೊಲಿಟಾ ಮಲಗಿದ್ದ ಮಗುವನ್ನು ಒಂಟಿಯಾಗಿ ಮನೆಯಲ್ಲಿ ಬಿಟ್ಟು ಓಡೋಡಿ ಬಂದಿದ್ದಾರೆ. ಮನೆಗೆ ಬಂದ ಲೊಲಿಟಾಳಿಗೆ ಹೊಡೆದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಮುಂದಾಗಿದ್ದಾನೆ. ಆಗ ಲೊಲಿಟಾ ತಪ್ಪಿಸಿಕೊಂಡು ಕಾಡಿಗೆ ಓಡಿದ್ದಾರೆ. ಮುಂಜಾನೆ 5 ಗಂಟೆಗೆ ಒಂದು ಮನೆ ಬಳಿ ಹೋದಾಗ ಅಲ್ಲಿಯವರು ನೋಡಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಸಿದ್ದಾರೆ. ಸದ್ಯ ಲೊಲಿಟಾ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಾಯಿಯನ್ನು ಕೊಂದು ಅತ್ತೆಯನ್ನು ಕೊಲ್ಲಲು ಯತ್ನಿಸಿದ್ದ ಮೆಲ್ವಿನ್ ರಾತ್ರಿ ಇಡೀ ಮನೆಯಲ್ಲಿ ಕಾಲ ಕಳೆದು ಬೆಳಗ್ಗೆ ವಿಚಾರ ಊರಿನವರಿಗೆ ತಿಳಿಯುತ್ತಲೇ ಮೆಲ್ವಿನ್ 2 ಕಿಲೋಮೀಟರ್ ಓಡಿ ಮಜೀರ್ಪಲ್ಲ ಎಂಬಲ್ಲಿಗೆ ಹೋಗಿ ಆಟೋರಿಕ್ಷಾ ಹಿಡಿದು ಹೊಸಂಗಡಿಗೆ ತಲುಪಿದ್ದಾನೆ. ಬಳಿಕ ಮಂಗಳೂರು ಬಸ್ ಹತ್ತಿ ಮಂಗಳೂರು ಕೆ.ಎಸ್.ಆರ್.ಟಿ.ಸಿ ಬಸ್ಸ್ಟ್ಯಾಂಡ್ನಲ್ಲಿ ಇಳಿದು ಅಲ್ಲಿಂದ ಕುಂದಾಪುರ ಬಸ್ ಹತ್ತಿ ಬೈಂದೂರು ತಲುಪಿದ್ದಾನೆ.
ಮೆಲ್ವಿನ್ ಅರ್ಥ್ ಮೂವರ್ಸ್ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ. ಬೈಂದೂರು ಸುತ್ತಮುತ್ತ ಕಲ್ಲಿನಕೋರೆಯಲ್ಲಿ ಈ ಹಿಂದೆ ಕೆಲಸ ಮಾಡಿದ್ದ. ಹೀಗಾಗಿ ಆ ಜಾಗಕ್ಕೆ ಹೋಗಲು ಆತ ಇಲ್ಲಿಗೆ ಬಂದಿದ್ದ. ಬೈಂದೂರಿನಲ್ಲಿ ಅಂಗಡಿಯ ಎದುರು ಕುಳಿತುಕೊಂಡಿದ್ದಾಗ ಬೈಂದೂರು ಪೊಲೀಸರ ಸಹಕಾರದಿಂದ ಕೇರಳ ಪೊಲೀಸರು ಬಂಧಿಸಿದ್ದಾರೆ. ನನಗಿನ್ನೂ ಮದುವೆ ಆಗಿಲ್ಲ ಅಂತಷ್ಟೆ ಪೊಲೀಸರಿಗೆ ಹೇಳಿದ್ದಾನೆ ಎಂದು ತಿಳಿದು ಬಂದಿದೆ. ಅಲ್ವಿನ್ ವಿದೇಶದಿಂದ ಬಂದ ಬಳಿಕ ಹಿಲ್ಡಾ ಅವರ ಅಂತ್ಯ ಸಂಸ್ಕಾರ ನಡೆಯಲಿದೆ.
























