8 ತಿಂಗಳ ಹಿಂದೆ ಇತ್ಯರ್ಥವಾಗಿದ್ದ ಅಪಘಾತ ವಿವಾದ ಸಂಬಂಧ ಈಗ ಕ್ರಮ
ಮಂಗಳೂರು: ರಸ್ತೆ ಅಪಘಾತ ಪ್ರಕರಣವೊಂದರಲ್ಲಿ ಬಸ್ಸು ಮಾಲೀಕನಿಂದ ಗಾಯಾಳುಗಳಿಗೆ ಸ್ಥಳದಲ್ಲಿಯೇ ಪರಿಹಾರ ಕೊಡಿಸುವಲ್ಲಿ ಮುಂಚೂಣಿಯಲ್ಲಿ ಇದ್ದು ಹೋರಾಟ ನಡೆಸಿದ ಹಿಂದೂ ಜಾಗರಣಾ ವೇದಿಕೆಯ ಮುಖಂಡನನ್ನು ಮೂಡುಬಿದಿರೆ ಪೊಲೀಸರು ಘಟನೆ ನಡೆದ 8 ತಿಂಗಳ ಬಳಿಕ ಬಂಧಿಸಿದ್ದಾರೆ.
ಹಿಂದೂ ಜಾಗರಣಾ ವೇದಿಕೆಯ ಮುಖಂಡ ಸಮಿತ್ ರಾಜ್ ಧರೆಗುಡ್ಡೆ ಬಂಧಿತ. ಕಾರ್ಕಳ ಅನಂತಶಯನ ದೇವಳ ರಸ್ತೆಯ ವ್ಯಾಪಾರ ಸಂಕೀರ್ಣವೊಂದರಲ್ಲಿ ಮೂಡುಬಿದಿರೆ ಪೊಲೀಸರ ತಂಡ ಗುರುವಾರ ಸಮಿತ್ರಾಜ್ ಅವರನ್ನು ಬಂಧಿಸಿದೆ.
2024, ನವಂಬರ್ 11 ರಂದು ಮೂಡುಬಿದಿರೆಯ ಮಿಜಾರು ಬಳಿ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಮಾಸ್ಟರ್ ಎಂಬ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮವಾಗಿ ದ್ವಿಚಕ್ರ ವಾಹನ ಸವಾರರಾದ ಸುಮಿತ್ರಾ ಹಾಗೂ ಅವರ ಮಗಳು ಸಾನ್ವಿ ಗಾಯಗೊಂಡಿದ್ದರು. ಬಸ್ ಚಾಲಕನ ನಿರ್ಲಕ್ಷ್ಯ ಮತ್ತು ಅತಿವೇಗ ಘಟನೆಗೆ ಕಾರಣವೆನ್ನಲಾಗಿದ್ದು, ಆ ಸಂದರ್ಭದಲ್ಲಿ ನಾಗರಿಕರು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದರು.
ನಾಗರಿಕರು ಹಾಗೂ ಹಿಂದು ಸಂಘಟನೆಯ ಕಾರ್ಯಕರ್ತರು ಹೋರಾಟಕ್ಕೆ ಇಳಿದಿದ್ದು, ಒಂದಿಷ್ಟು ಬಿಗುವಿನ ವಾತಾವರಣ ಉಂಟಾಗಿತ್ತು. ಆ ಹೋರಾಟದಲ್ಲಿ ಸಮಿತ್ರಾಜ್ ಧರೆಗುಡ್ಡೆ ಮುಂಚೂಣಿಯಲ್ಲಿ ಇದ್ದರು. ಗಾಯಾಳುಗಳಗೆ ಪರಿಹಾರ ನೀಡಬೇಕೆಂದು ಪಟ್ಟು ಹಿಡಿದಿರುವುದರಿಂದ ಅಪಘಾತ ಸಂಭವಿಸಿದ ಕೆಲವೇ ಗಂಟೆಯಲ್ಲಿ ಬಸ್ ಮಾಲೀಕ 5 ಲಕ್ಷ ರೂ. ಗಾಯಾಳುಗಳಿಗೆ ಪರಿಹಾರ ರೂಪದಲ್ಲಿ ನೀಡಿದ ಬಳಿಕ ವಿವಾದವು ಇತ್ಯರ್ಥಗೊಂಡಿತ್ತು.
ಬಸ್ಸಿನ ಮಾಲೀಕ ಈ ಕುರಿತು ಮೂಡುಬಿದಿರೆ ಠಾಣೆಗೆ ದೂರು ನೀಡಿ, ಬಸ್ಸಿಗೆ ಹಾನಿಗೊಳಿಸಿರುವ ಹಾಗೂ ತನ್ನಿಂದ 5 ಲಕ್ಷ ರೂ. ವಸೂಲಿ ನಡೆಸಿರುವ ಕುರಿತು ಆರೋಪಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ತನಿಖೆ ನಡೆಸಿ ಸಮಿತ್ರಾಜ್ ಅವರನ್ನು ಬಂಧಿಸಿದ್ದಾರೆ.
























