ದೇಶಾದ್ಯಂತ ದಿಗ್ಭ್ರಮೆ ಮೂಡಿಸಿದ ಅಮಾನವೀಯ ಘಟನೆ
ಬೆಂಗಳೂರು: ಚಾಮರಾಜನಗರದಲ್ಲಿ ಐದು ಹುಲಿಗಳ ಸಾವಿಗೆ ವಿಷಪ್ರಾಶನ ಕಾರಣ ಎನ್ನುವುದು ಮೇಲ್ನೋಟಕ್ಕೆ ಕಂಡುಬಂದಿದೆ.
ಹುಲಿಗಳ ಸಂರಕ್ಷಣೆಯಲ್ಲಿ ದೇಶದಲ್ಲೇ ಎರಡಡನೇ ಸ್ಥಾನದಲ್ಲಿರುವ ಕರ್ನಾಟಕದಲ್ಲಿ ಒಂದೇ ಸಲ ಐದು ಹುಲಿಗಳು ಸಾವಿಗೀಡಾಗಿರುವುದು ದೇಶಾದ್ಯಂತ ಚರ್ಚೆಗೆ ಕಾರಣವಾಗಿದೆ. ಹುಲಿಗಳ ಸಂಖ್ಯೆ ಕ್ಷೀಣಿಸುತ್ತಿರುವ ದಿನಗಳಲ್ಲಿ ಐದು ಹುಲಿಗಳನ್ನು ವಿಷವಿಕ್ಕಿ ಕೊಂದಿರುವುದು ಆಘಾತವುಂಟುಮಾಡಿದೆ.
ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ವನ್ಯಧಾಮದಲ್ಲಿ ತಾಯಿ ಹುಲಿ ಹಾಗೂ ನಾಲ್ಕು ಹುಲಿಗಳು ನಿನ್ನೆ ಅಸಹಜ ರೀತಿಯಲ್ಲಿ ಸಾವಿಗೀಡಾಗಿರುವುದು ಕಂಡುಬಂದಿತ್ತುಯ. ಹೂಗ್ಯಂ ಅರಣ್ಯ ವಲಯದ ಮೀಣ್ಯಂ ಸಮೀಪ ಮಹದೇಶ್ವರ ಗುಡಿ ಬಯಲಿನಲ್ಲಿ ಈ ಐದೂ ಹುಲಿಗಳು ಸತ್ತುಬಿದ್ದಿದ್ದವು. ಅರಣ್ಯ ಸಿಬ್ಬಂದಿ ಗಸ್ತಿನ ವೇಳೆ ಐದು ಹುಲಿಗಳ ಮೃತದೇಹ ಪತ್ತೆಯಾಗಿದ್ದು, ಅನತಿ ದೂರದಲ್ಲಿ ಹಸುವೊಂದರ ಮೃತದೇಹವೂ ಕಂಡು ಬಂದಿದೆ.
ವನ್ಯಪ್ರಾಣಿಯ ದಾಳಿಯಿಂದ ಹಸು ಸಾವನ್ನಪ್ಪಿದ್ದು, ಇದರ ಅರ್ಧಂಬರ್ಧ ದೇಹವನ್ನು ವನ್ಯಪ್ರಾಣಿಗಳು ತಿಂದು ಹೋಗಿವೆ. ಉಳಿದ ಮಾಂಸ ತಿನ್ನಲು ವನ್ಯಪ್ರಾಣಿ ಬರಬಹುದು ಎಂಬ ಕಾರಣಕ್ಕೆ ಅದನ್ನು ಕೊಲ್ಲಲು ಹಸುವಿನ ಮಾಂಸಕ್ಕೆ ಯಾರೋ ವಿಷ ಸಿಂಪಡಣೆ ಮಾಡಿರಬಹುದು ಎಂಬ ಗುಮಾನಿ ಇದೆ. ವಿಷ ಮಿಶ್ರಿತ ಹಸುವಿನ ಮಾಂಸ ತಿಂದು ತಾಯಿ ಹುಲಿ ಹಾಗೂ ನಾಲ್ಕು ಮರಿ ಹುಲಿಗಳು ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ.
ಐದು ಹುಲಿಗಳು ಒಮ್ಮೆಲೆ ಮೃತಪಟ್ಟಿರುವುದಕ್ಕೆ ಅರಣ್ಯ ಸಚಿವ ಈಶ್ವರ ಖಂಡ್ರೆ ದಿಗ್ಭ್ರಮೆ ವ್ಯಕ್ತಪಡಿಸಿದ್ದು, ಪ್ರಕರಣದ ತನಿಖೆಗೆ ಪಿಸಿಸಿಎಫ್ ನೇತೃತ್ವದಲ್ಲಿ ಉನ್ನತ ಮಟ್ಟದ ತಂಡ ರಚಿಸಲಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ನಿರ್ಲಕ್ಷ್ಯ ತೋರಿಸಿದ್ದರೆ ಅವರ ವಿರುದ್ಧ ಅಥವಾ ವಿಷಪ್ರಾಶನದಿಂದ ಮೃತಪಟ್ಟಿದ್ದರೆ ಅದಕ್ಕೆ ಕಾರಣರಾಗಿರುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಆದೇಶ ನೀಡಿದ್ದಾರೆ. 14 ದಿನಗಳ ಒಳಗೆ ತನಿಖಾ ತಂಡಕ್ಕೆ ವರದಿ ಕೊಡಲು ಸೂಚಿಸಲಾಗಿದೆ.
ಸಂತಾನೋತ್ಪತ್ತಿ ಮಾಡುವ ಹೆಣ್ಣು ಹುಲಿ ಮತ್ತು ನಾಲ್ಕು ಮರಿಗಳು ಅಸಹಜವಾಗಿ ಸಾಯುವುದು ದೊಡ್ಡ ಆಘಾತಕಾರಿ ವಿಷಯವಾಗಿದೆ ಎಂದು ವನ್ಯಜೀವಿ ತಜ್ಞರು ಬೇಸರ ಆಘಾತ ವ್ಯಕ್ತಪಡಿಸಿದ್ದಾರೆ. ಹುಲಿಗಳು ಕಡಿಮೆ ಸಾಂದ್ರತೆಯಿರುವ ಮಲೆ ಮಹದೇಶ್ವರಬೆಟ್ಟದಲ್ಲಿ ಹೀಗಾಗಿರುವುದು ಅತ್ಯಂತ ಖಂಡನೀಯವಾಗಿದ್ದು, ಈ ವಿಚಾರದಲ್ಲಿ ಅತ್ಯಂತ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪರಿಸರವಾದಿಗಳು ಆಗ್ರಹಿಸಿದ್ದಾರೆ.
























