ಒಳಗಿಂದೊಳಗೆ ನಡೆಯುತ್ತಿದೆ ಹಲವು ಮಸಲತ್ತು
ಬೆಂಗಳೂರು: ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿ ಕುರ್ಚಿ ಫೈಟ್ ಮತ್ತೆ ಮುನ್ನೆಲೆಗೆ ಬಂದಿದೆ. ಶಾಸಕರು ಒಬ್ಬೊಬ್ಬರಾಗಿ ಅಸಮಾಧಾನ ವ್ಯಕ್ತಪಡಿಸಲು ಶುರುಮಾಡಿದ್ದು, ಕೈಯೊಳಗಿನ ತಳಮಳ ಬೀದಿಗೆ ಬರುತ್ತಿದೆ. ಬಿ.ಆರ್.ಪಾಟೀಲ್, ರಾಜು ಕಾಗೆ ಸಹಿತ ಹಲವು ಕಾಂಗ್ರೆಸ್ ಶಾಸಕರು ಸರ್ಕಾರದ ಕಾರ್ಯವೈಖರಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಬೆನ್ನಿಗೆ ಇನ್ನೂ ಕೆಲವು ಶಾಸಕರು ಅತೃಪ್ತಿ ತೋಡಿಕೊಳ್ಳತೊಡಗಿದ್ದಾರೆ. ಹೈಕಮಾಂಡ್ ಎಷ್ಟೇ ಖಡಕ್ ವಾರ್ನಿಂಗ್ ನೀಡಿದರೂ ಕಾಂಗ್ರೆಸ್‌ನೊಳಗಿನ ಬೇಗುದಿ ಪೂರ್ಣವಾಗಿ ಶಮನವಾಗುತ್ತಿಲ್ಲ. ಇದಕ್ಕೆಲ್ಲ ಮುಖ್ಯಮಂತ್ರಿ ಬದಲಾವಣೆಯ ವಿಚಾರವೇ ಮೂಲ ಎನ್ನಲಾಗುತ್ತಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಎರಡೂವರೆ ವರ್ಷಗಳ ಅಧಿಕಾರಾವಧಿಯನ್ನು ಪೂರ್ಣಗೊಳಿಸುವವರೆಗೆ ಪಕ್ಷ ಮತ್ತು ಸರ್ಕಾರದಲ್ಲಿ ಯಾವುದೇ ಬದಲಾವಣೆಗಳನ್ನು ತರದಿರಲು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದ್ದು, ಈ ಬೆಳವಣಿಗೆ ಕೈ ಪಾಳಯದ ಕೆಲ ನಾಯಕರಲ್ಲಿ ಅಸಮಾಧಾನವನ್ನು ಮೂಡಿಸಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಮುಂದುವರಿಯಬೇಕೆಂದು ಬಯಸುತ್ತಿರುವ ಸಹಕಾರ ಸಚಿವ ಕೆ.ಎನ್. ರಾಜಣ್ಣ, ಸೆಪ್ಟೆಂಬರ್‌ನಲ್ಲಿ ರಾಜ್ಯ ರಾಜಕೀಯದಲ್ಲಿ ದೊಡ್ಡ ಬದಲಾವಣೆಗಳಾಗಲಿದೆ ಎಂದು ಗುರುವಾರ ಹೇಳಿದ್ದು ರಾಜ್ಯ ರಾಜಕೀಯದಲ್ಲಿ ಭಾರಿ ಸಂಚಲನ ಉಂಟುಮಾಡಿದೆ.
ಈ ಹೇಳಿಕೆ ಮೂಲಕ ಸಿದ್ದರಾಮಯ್ಯ ಅವರನ್ನು ಬದಲಿಸಿದ್ದೇ ಆದರೆ ಪಕ್ಷದಲ್ಲಿ ಅಸಮಾಧಾನ ಭುಗಿಲೇಳಲಿದೆ ಎಂಬ ಸಂದೇಶವನ್ನು ಹೈಕಮಾಂಡ್‌ಗೆ ರಾಜಣ್ಣ ರವಾನಿಸಿದ್ದಾರೆ ಎನ್ನಲಾಗುತ್ತಿದೆ. ರಾಜಣ್ಣ ಅವರ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿರುವ ಡಿಸಿಎಂ ಡಿ.ಕೆ ಶಿವಕುಮಾರ್, ರಾಜಣ್ಣ ಹಿರಿಯ ನಾಯಕ, ನನಗೆ ಆ ಕ್ರಾಂತಿಯ ಬಗ್ಗೆ ತಿಳಿದಿಲ್ಲ ಎಂದು ಹೇಳಿದ್ದಾರೆ.
ಈ ನಡುವೆ ಸಿದ್ದರಾಮಯ್ಯ ಆಡಳಿತದ ಮೇಲಿನ ಹಿಡಿತ ಕಳೆದುಕೊಳ್ಳುತ್ತಿದ್ದಾರೆ ಎಂಬ ಭಾವನೆ ಕಾಂಗ್ರೆಸ್‌ನೊಳಗೆ ಸಾರ್ವತ್ರಿಕವಾಗಿ ಹರಡುತ್ತಿದೆ. ಜೊತೆಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರ ಕಾರ್ಯವೈಖರಿಯ ಬಗ್ಗೆಯೂ ವ್ಯಾಪಕ ಅಸಮಾಧಾನ ವ್ಯಕ್ತವಾಗುತ್ತಿದೆ. ಇತ್ತೀಚೆಗಿನ ಕೆಲ ಸಮಯದಿಂದ ಸರ್ಕಾರಕ್ಕೆ ಹಿನ್ನಡೆ ಮತ್ತು ಮುಜುಗರವಾಗುವಂಥ ಘಟನೆಗಳು ಬೆನ್ನುಬೆನ್ನಿಗೆ ನಡೆದಿರುವುದು ಮುಖ್ಯಮಂತ್ರಿಗೆ ಆಡಳಿತದ ಮೇಲೆ ಹಿಡಿತ ತಪ್ಪಿಸುವುದರ ಪರಿಣಾಮ ಎಂದು ಹೇಳಲಾಗುತ್ತಿದೆ.
ಮುಖ್ಯಮಂತ್ರಿ ಬದಲಾವಣೆ ವಿಚಾರ ಬಂದಾಗಲೆಲ್ಲ ಡಿ.ಕೆ.ಶಿವಕುಮಾರ್ ಬಣದ ನಡೆಯೂ ನಿಗೂಢವಾಗಿರುತ್ತದೆ. ವಸತಿ ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದ್ದ ಯೋಜನಾ ಆಯೋಗದ ಉಪಾಧ್ಯಕ್ಷರು ಬುಧವಾರ ಸಂಜೆ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡುವ ಮೊದಲು ಡಿ.ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದು ಇದಕ್ಕೊಂದು ಉದಾಹರಣೆ. ಇದು ಸಾಮಾನ್ಯ ಭೇಟಿಯೇ ಆಗಿದ್ದರು, ಭೇಟಿಯ ಸಂದರ್ಭ ನಾನಾ ಊಹಾಪೋಹಗಳಿಗೆ ಕಾರಣವಾಗಿದೆ. ಅನೇಕ ಶಾಸಕರು ಇತ್ತೀಚೆಗೆ ತಮ್ಮ ಕುಂದುಕೊರತೆಗಳನ್ನು ಹೇಳಲು ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಲು ಪ್ರಾರಂಭಿಸಿದ್ದಾರೆ. ಇವೆಲ್ಲ ಮುಖ್ಯಮಂತ್ರಿ ಬದಲಾವಣೆ ವಿಚಾರ ಮತ್ತೆ ಮುನ್ನೆಲೆಗೆ ಬಂದಿರುವ ಪರಿಣಾಮ ಎಂದು ವಿಶ್ಲೇಷಿಸಲಾಗುತ್ತಿದೆ.
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಕೂಡ ನವೆಂಬರ್‌ನಲ್ಲಿ ಕೆಲವು ಬದಲಾವಣೆಗಳಾಗಲಿವೆ ಎಂದು ಹೇಳಿರುವುದು ಗಮನಾರ್ಹ. ಹೀಗೊಂದು ಬದಲಾವಣೆ ಆದರೆ ತಾನು ಕೆಪಿಸಿಸಿ ಅಧ್ಯಕ್ಷನಾಗುವ ರೇಸಿನಲ್ಲಿದ್ದೇನೆ ಎಂದು ಅವರು ಈ ಮೊದಲೇ ಹೇಳಿಕೊಂಡಿದ್ದಾರೆ. ಮಂಗಳವಾರ ಮತ್ತು ಬುಧವಾರ ನವದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆ.ಸಿ. ವೇಣುಗೋಪಾಲ್ ಮತ್ತು ರಣದೀಪ್ ಸಿಂಗ್ ಸುರ್ಜೇವಾಲ ಅವರನ್ನು ಭೇಟಿ ಮಾಡಿದ ಸಿದ್ದರಾಮಯ್ಯ ತಂಡದಲ್ಲಿದ್ದವರಲ್ಲಿ ಸಚಿವ ಸತೀಶ್ ಜಾರಕಿಹೊಳಿ ಕೂಡ ಒಬ್ಬರಾಗಿದ್ದರು.
ಈ ನಡುವೆ ಸಿದ್ದರಾಮಯ್ಯ ಪಾಳಯದ ನಾಯಕರು ರಾಜ್ಯ ಉಸ್ತುವಾರಿ ಹುದ್ದೆಯಲ್ಲಿರುವ ಸುರ್ಜೇವಾಲಾ ಅವರನ್ನೇ ಬದಲಾಯಿಸುವಂತೆ ಹೈಕಮಾಂಡನ್ನು ಒತ್ತಾಯಿಸುತ್ತಿದ್ದಾರೆ ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಸುರ್ಜೆವಾಲಾ, ಡಿಕೆಶಿ ಬಣದತ್ತ ಹೆಚ್ಚು ಒಲವು ಹೊಂದಿದ್ದಾರೆ ಎನ್ನಲಾಗುತ್ತಿದೆ.
























