ಮಂಗಳೂರು: ಜಾಗೃತ ಹಾಗೂ ಸಂಘಟಿತ ಜನತೆಯೇ ಪುಜಾಪ್ರಭುತ್ವದ ನಿಜವಾದ ಶಕ್ತಿ. ನಾಗರಿಕರು ಎಚ್ಚರವಾಗಿರದಿದ್ದರೆ ದೇಶದಲ್ಲಿ ಅಳುಕಿನ ಸ್ಥಿತಿ ನಿರ್ಮಾಣವಾಗುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಬಿಜೆಪಿ ರಾಜ್ಯ ಘಟಕದ ಉಸ್ತುವಾರಿ ರಾಧಾ ಮೋಹನದಾಸ್ ಅಗರ್ವಾಲ್ ಹೇಳಿದರು.
ಅವರು ಬಿಜೆಪಿಯ ದಕ್ಷಿಣ ಕನ್ನಡ ಜಿಲ್ಲಾ ಘಟಕ ಬುಧವಾರ ಏರ್ಪಡಿಸಿದ್ದ ‘ತುರ್ತು ಪರಿಸ್ಥಿತಿ ಹೇರಿದ ಕಾಂಗ್ರೆಸ್- ಕರಾಳ ಇತಿಹಾಸಕ್ಕೆ 50 ವರ್ಷ ಗಳು’ ಕಾರ್ಯ ಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
‘ಪ್ರಭುತ್ವವನ್ನು ಪ್ರಶ್ನಿಸುವುದನ್ನು ನಿಲ್ಲಿಸಿದರೆ ದೇಶವೂ ಮತ್ತೆ ಪರಕೀಯತೆಯತ್ತ ಹೆಜ್ಜೆ ಹಾಕುತ್ತದೆ. ತುರ್ತು ಪರಿಸ್ಥಿತಿಯ ಕರಾಳತೆಯನ್ನು ಮೆಲುಕು ಹಾಕುವ ಈ ದಿನ ನಾವೂ ಈ ಮಾತುಗಳನ್ನು ಮತ್ತೆ ಜ್ಞಾಪಿಸಿಕೊಳ್ಳಬೇಕು. ಅಂತಹ ಕರಾಳ ದಿನಗಳು ಮತ್ತೊಮ್ಮೆ ಮರುಕಳಿಸಲು ಅವಕಾಶ ನೀಡಬಾರದು ಎಂದರು.
‘ತುರ್ತು ಪರಿಸ್ಥಿತಿಯ ವಿರುದ್ಧದ ಅಂದೋಲನ ರೂಪುಗೊಂಡಿದ್ರೆ ಕರ್ನಾಟಕದ ನೆಲದಲ್ಲಿ, ರೈಲ್ವೆ ಕಾರ್ಮಿಕರ ನೇತಾರರಾಗಿದ್ದ ಈ ಮಣ್ಣಿನ ಮಗ ಜಾರ್ಜ್ ಫರ್ನಾಂಡಿಸ್ ಅದಕ್ಕೆ ಮುಂದಾಳತ್ವ ನೀಡಿದ್ದರು’ ಎಂದರು.
ಪ್ರಸ್ತಾವಿಕವಾಗಿ ಮಾತನಾಡಿದ ಸಂಸದ ಕ್ಯಾ.ಬ್ರಿಜೇಶ್ ಚೌಟ, ಬಿಜೆಪಿ ಹುಟ್ಟಿರುವುದೇ ದೇಶದ ಸಂವಿಧಾನವನ್ನು ಉಳಿಸುವುದಕ್ಕೆ. ಭಾರತ ಜಗತ್ತಿನಾದ್ಯಂತ ಮಾನ್ಯತೆ ಪಡೆದಿದ್ದರೆ ಪ್ರಜಾಪ್ರಭುತ್ವದ ಮೌಲ್ಯಗಳಿಂದಾಗಿ. ಕಾಂಗ್ರೆಸ್ ಮಾನಸಿಕತೆ ಪ್ರಜಾಪ್ರಭುತ್ತ ತತ್ವಗಳಿಗೆ ವಿರುದ್ಧ ಅದು ಈಗಲೂ ಬದಲಾಗಿಲ್ಲ. ಇಲ್ಲಿನ ಕಾಂಗ್ರೆಸ್ ನೇತೃತ್ವದ ಸರ್ಕಾರ ಹೋರಾಟಗಾರರ ಮನೆಗೆ ಮಧ್ಯರಾತ್ರಿ ಪೊಲೀಸರನ್ನು ಕಳುಹಿಸುತ್ತಿದೆ ಎಂದರು.
ಶಾಸಕರಾದ ಡಾ.ವೈ.ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ವೇದವ್ಯಾಸ ಕಾಮತ್, ಹರೀಶ್ ಪೂಂಜ, ಭಾಗಿರಥಿ ಮುರುಳ್ಯ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ಕಾರ್ಯಕ್ರಮ ಸಂಘಟನಾ ಸಮಿತಿಯ ಸಹಸಂಚಾಲಕ ಗಣೇಶ್ ಅರ್ಬಿ, ಬಿಜೆಪಿ ದ.ಕ. ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಯತೀಶ್ ಆರ್ವರ್ ಭಾಗವಹಿಸಿದ್ದರು.
ಬಿಜೆಪಿ ದ.ಕ. ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಕುಂಪಲ ಸ್ವಾಗತಿಸಿದರು. ಸಂಘಟನಾ ಸಮಿತಿ ಸಂಚಾಲಕ ಪುರುಷೋತ್ತಮ ಮುಂಗ್ಲಿಮನೆ ವಂದಿಸಿದರು.
























