ಮಂಗಳೂರು: ವಿವಿಧ ಆ್ಯಪ್ ಗಳ ಸಾಲಗಳಿಂದ ಬೇಸತ್ತು ಯುವಕನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರಿನ ಕೋಡಿಕಲ್ ನಲ್ಲಿ ನಡೆದಿದೆ.
ಕೋಡಿಕಲ್ ನಿವಾಸಿ ನಿಖಿಲ್ ಪೂಜಾರಿ (30) ಆತ್ಮಹತ್ಯೆ ಮಾಡಿಕೊಂಡವರು.
ಸೋಮವಾರ ಬೆಳಗ್ಗೆ ತನ್ನ ಮನೆಯಲ್ಲಿ ಉಪಹಾರ ಸೇವಿಸಿದ ನಿಖಿಲ್ ಪೂಜಾರಿ ಕೋಣೆ ಸೇರಿದ್ದ. ಸಂಜೆಯವರೆಗೆ ಮಲಗುವ ಅಭ್ಯಾಸ ರೂಢಿಸಿಕೊಂಡಿದ್ದ ಕಾರಣ ಮನೆಮಂದಿ ನಿಖಿಲ್ ಪೂಜಾರಿಯ ಬಗ್ಗೆ ಹೆಚ್ಚಿನ ಗಮನ ಹರಿಸಿರಲಿಲ್ಲ ಎನ್ನಲಾಗಿದೆ. ಸಂಜೆ ಬಳಿಕ ಬಾಗಿಲು ಬಡಿದರೂ ತೆಗೆಯದ್ದರಿಂದ ಫೋನ್ ಕರೆ ಮಾಡಿದರೂ ಆತ ಫೋನ್ ಕರೆ ಸ್ವೀಕರಿಸಿರಲಿಲ್ಲ. ಹಾಗಾಗಿ ರಾತ್ರಿ 8:15ರ ವೇಳೆಗೆ ಬಾಗಿಲಿನ ಸಂದಿಯಿಂದ ನೋಡಿದಾಗ ನಿಖಿಲ್ ಆತ್ಮಹತ್ಯೆ ಮಾಡಿರುವುದು ಗಮನಕ್ಕೆ ಬಂದಿದೆ.
ಬೇರೆ ಬೇರೆ ಆ್ಯಪ್ಗಳಲ್ಲಿ ನಿಖಿಲ್ ಸಾಲ ಪಡೆದಿದ್ದು, ಇದರಿಂದ ಆರ್ಥಿಕ ಸಮಸ್ಯೆಗೊಳಗಾಗಿದ್ದ ತಾಯಿಗೆ ಆರೋಗ್ಯ ಸರಿಯಿಲ್ಲವೆಂದು ಒಂದು ವಾರದಿಂದ ಕೆಲಸಕ್ಕೂ ರಜೆ ಹಾಕಿದ್ದ ಎನ್ನಲಾಗಿದೆ. ಈ ಕುರಿತು ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
























