ಟೆಸ್ಟ್ ಕ್ರಿಕೆಟ್ನ 148 ವರ್ಷಗಳ ಇತಿಹಾಸದಲ್ಲೇ ಕಳಪೆ ದಾಖಲೆ ಬರೆದ ಭಾರತ ತಂಡ
ಲಂಡನ್ : ಎರಡು ಇನ್ನಿಂಗ್ಸ್ಗಳಲ್ಲಿ ಒಟ್ಟು ಐದು ಶತಕ ಸಿಡಿಸಿದರೂ ಇಂಗ್ಲಂಎಡ್ ವಿರುದ್ಧ ಭಾರತ ಸೋತಿರುವುದು ಭಾರತೀಯ ಕ್ರಿಕೆಟ್ ಅಭಿಮಾನಗಳಿಗೆ ಬಹಳ ನಿರಾಶೆ ಮೂಡಿಸಿದೆ. ಹೆಡಿಂಗ್ಲೆ ಕ್ರೀಡಾಂಗಣದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು ಐದು ವಿಕೆಟ್ಗಳ ಸೋಲನುಭವಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪ್ರಥಮ ಇನಿಂಗ್ಸ್ನಲ್ಲಿ 471 ರನ್ ಕಲೆಹಾಕಿದರೆ, ಇಂಗ್ಲೆಂಡ್ 465 ರನ್ಗಳಿಸಿತು. ದ್ವಿತೀಯ ಇನಿಂಗ್ಸ್ನಲ್ಲಿ ಟೀಮ್ ಇಂಡಿಯಾ 364 ರನ್ಗಳಿಗೆ ಆಲೌಟ್ ಆಯಿತು. 371 ರನ್ಗಳ ಗುರಿಯನ್ನು ಇಂಗ್ಲೆಂಡ್ 82 ಓವರ್ಗಳಲ್ಲಿ ಚೇಸ್ ಮಾಡಿ ಭರ್ಜರಿ ಜಯ ಸಾಧಿಸಿದೆ.
148 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ತಂಡವೊಂದು ಪಂದ್ಯವೊಂದರಲ್ಲಿ 5 ಶತಕ ಸಿಡಿಸಿರುವುದು ಕೇವಲ ಮೂರು ಬಾರಿ. ಹೀಗೆ 5 ಶತಕ ಸಿಡಿಸಿ ಅಬ್ಬರಿಸಿದ ತಂಡಗಳೆಲ್ಲವೂ ಭರ್ಜರಿ ಜಯ ಸಾಧಿಸಿದೆ. ಆದರೆ ಟೀಮ್ ಇಂಡಿಯಾ ಪಾಲಿಗೆ ಆ ಅದೃಷ್ಟವಿಲ್ಲ.
ಟೆಸ್ಟ್ ಪಂದ್ಯದ ಪ್ರಥಮ ಇನಿಂಗ್ಸ್ನಲ್ಲಿ ಯಶಸ್ವಿ ಜೈಸ್ವಾಲ್ (101), ಶುಭ್ಮನ್ (147) ಹಾಗೂ ರಿಷಭ್ ಪಂತ್ (134) ಶತಕ ಸಿಡಿಸಿದ್ದರು. ದ್ವಿತೀಯ ಇನಿಂಗ್ಸ್ನಲ್ಲಿ ಕೆಎಲ್ ರಾಹುಲ್ (137) ಹಾಗೂ ರಿಷಭ್ ಪಂತ್ (118) ಶತಕ ಬಾರಿಸಿದ್ದರು. ಈ ಶತಕಗಳ ಹೊರತಾಗಿಯೂ ಈ ಪಂದ್ಯದಲ್ಲಿ ಟೀಮ್ ಇಂಡಿಯಾಗೆ ಗೆಲ್ಲಲು ಸಾಧ್ಯವಾಗಿಲ್ಲ. ಭಾರತ ತಂಡವು ಕೊನೆಯ ಇನ್ನಿಂಗ್ಸ್ನಲ್ಲಿ ನೀಡಿದ 371 ರನ್ಗಳ ಗುರಿಯನ್ನು ಇಂಗ್ಲೆಂಡ್ ತಂಡವು 82 ಓವರ್ಗಳಲ್ಲಿ ಚೇಸ್ ಮಾಡಿದೆ. ಈ ಮೂಲಕ 5 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
ಒಂದೇ ಪಂದ್ಯದಲ್ಲಿ 5 ಶತಕಗಳನ್ನು ಸಿಡಿಸಿದ್ದ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ತಂಡಗಳು ಭರ್ಜರಿ ಗೆಲುವು ದಾಖಲಿಸಿದ್ದವು. 1955ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 5 ಶತಕ ಬಾರಿಸಿದ ಆಸೀಸ್ ಪಡೆ ಇನಿಂಗ್ಸ್ ಹಾಗೂ 82 ರನ್ಗಳ ಅಮೋಘ ಗೆಲುವು ದಾಖಲಿಸಿತ್ತು.
2001ರಲ್ಲಿ ಬಾಂಗ್ಲಾದೇಶದ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ 5 ಶತಕ ಬಾರಿಸಿದ್ದ ಪಾಕಿಸ್ತಾನ ಇನ್ನಿಂಗ್ಸ್ ಹಾಗೂ 264 ರನ್ಗಳ ಅಭೂತಪೂರ್ವ ಗೆಲುವು ದಾಖಲಿಸಿತ್ತು. ಆದರೆ ಟೀಮ್ ಇಂಡಿಯಾ ದಾಂಡಿಗರು ಬಾರಿಸಿದ 5 ಶತಕಗಳು ಸೋಲಿನೊಂದಿಗೆ ವ್ಯರ್ಥವಾಗಿದೆ. ಈ ಮೂಲಕ 148 ವರ್ಷಗಳ ಟೆಸ್ಟ್ ಇತಿಹಾಸದಲ್ಲಿ ಪಂದ್ಯವೊಂದರಲ್ಲಿ 5 ಸೆಂಚುರಿ ಸಿಡಿಸಿದರೂ ಸೋತ ತಂಡವೆಂಬ ಹಣೆಪಟ್ಟಿ ಟೀಮ್ ಇಂಡಿಯಾ ಪಾಲಾಗಿದೆ. ಇದಾಗ್ಯೂ ಇಂಗ್ಲೆಂಡ್ ವಿರುದ್ಧ ಇನ್ನೂ ನಾಲ್ಕು ಪಂದ್ಯಗಳು ಉಳಿದಿದ್ದು, ಈ ಮ್ಯಾಚ್ಗಳಲ್ಲಿ ಗೆಲುವು ದಾಖಲಿಸಿ ಯಂಗ್ ಇಂಡಿಯಾ ಇತಿಹಾಸ ಬರೆಯಲಿದೆಯಾ ಕಾದು ನೋಡಬೇಕಿದೆ.
























