14 ದಿನ ಬಾಹ್ಯಾಕಾಶ ನಿಲ್ದಾಣದಲ್ಲಿ ವಾಸ; 60 ವಿವಿಧ ರೀತಿಯ ಪ್ರಯೋಗ
ಫ್ಲೋರಿಡಾ: ಆರು ಬಾರಿ ಮುಂದೂಡಿಕೆಯಾಗಿದ್ದ ಭಾರತೀಯ ಪ್ರಜೆ ಶುಭಾಂಶು ಶುಕ್ಲಾ ಸಹಿತ ನಾಲ್ಕು ಗಗನಯಾತ್ರಿಗಳ ಅಂತರಿಕ್ಷ ಯಾನಕ್ಕೆ ಇಂದು ಮಧ್ಯಾಹ್ನದ ಮುಹೂರ್ತ ನಿಗದಿಯಾಗಿದೆ. ಭಾರತೀಯ ಕಾಲಮಾನ ಪ್ರಕಾರ ಇಂದು ಮಧ್ಯಾಹ್ನ 12.01ಕ್ಕೆ ಫ್ಲೋರಿಡಾದಲ್ಲಿರುವ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ನಾಲ್ವರು ಗಗನಯಾತ್ರಿಗಳನ್ನು ಹೊತ್ತ ಆಕ್ಸಿಯಂ ನೌಕೆ ನಭಕ್ಕೇರಲಿದೆ. ಸ್ಪೇಸ್ಎಕ್ಸ್ ಫಾಲ್ಕನ್-9 ರಾಕೆಟ್ ಮೂಲಕ ಶುಭಾಂಶು ಶುಕ್ಲಾ ಅವರ ಜೊತೆಗೆ ಇತರ ಮೂವರು ಗಗನಯಾತ್ರಿಗಳು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣ ಬೆಳೆಸಲಿದ್ದಾರೆ.
28 ಗಂಟೆ ಪ್ರಯಾಣದ ಬಳಿಕ ಉದ್ದೇಶಿತ ಡಾಕಿಂಗ್ ಅನ್ನು ಗುರುವಾರ ಸಂಜೆ 4.30ಕ್ಕೆ ಕೈಗೊಳ್ಳಲಾಗುವುದು ಎಂದು ನಾಸಾ ಮಾಹಿತಿ ನೀಡಿದೆ.
1984ರಲ್ಲಿ ಸೋವಿಯತ್ ರಷ್ಯಾದ ಸೋಯುಜ್ ಬಾಹ್ಯಾಕಾಶ ನೌಕೆಯಲ್ಲಿ ಬಾಹ್ಯಾಕಾಶಕ್ಕೆ ಪ್ರಯಾಣ ಬೆಳೆಸುವ ಮೂಲಕ ಭಾರತೀಯರಾದ ರಾಕೇಶ್ ಶರ್ಮಾ ಇತಿಹಾಸ ಬರೆದಿದ್ದರು. 41 ವರ್ಷಗಳ ನಂತರ ಶುಕ್ಲಾ ಅವರು ಈ ಇತಿಹಾಸ ಬರೆಯಲು ಸಜ್ಜಾಗಿದ್ದಾರೆ.
ಲಖನೌದವರಾದ ಶುಕ್ಲಾ ಆಕ್ಸಿಯಮ್ ಸ್ಪೇಸ್ನ ಇಸ್ರೋ-ನಾಸಾ ಬೆಂಬಲಿತ ವಾಣಿಜ್ಯ ಬಾಹ್ಯಾಕಾಶ ಹಾರಾಟದ ಭಾಗವಾಗಿದ್ದಾರೆ. ಫ್ಲೋರಿಡಾದ ಕೆಎಸ್ಸಿಯ ಲಾಂಚ್ ಕಾಂಪ್ಲೆಕ್ಸ್ 39Aನಿಂದ ಲಿಫ್ಟ್-ಆಫ್ ಮಾಡಲು ಹೊಂದಿಸಲಾದ ಆಕ್ಸಿಯಮ್-4 (ಆಕ್ಸ್-4) ಕಾರ್ಯಾಚರಣೆಯಲ್ಲಿ ಕಮಾಂಡರ್ ಪೆಗ್ಗಿ ವಿಟ್ಸನ್, ಪೈಲಟ್ ಶುಕ್ಲಾ, ತಜ್ಞರಾದ ಹಂಗೇರಿಯ ಟಿಗೋರ್ ಕಾಪು ಮತ್ತು ಪೋಲೆಂಡ್ನ ಸ್ಲಾವೋಸ್ಜ್ ಉಜ್ನಾನ್ಸ್ಕಿ ಇದ್ದಾರೆ.
ಉಡಾವಣೆಗೆ ಮುನ್ನ ಆಕ್ಸ್-4 ಸಿಬ್ಬಂದಿ ಮತ್ತು ಸ್ಪೇಸ್ಎಕ್ಸ್ ತಂಡಗಳು ಉಡಾವಣಾ ದಿನದ ಚಟುವಟಿಕೆಗಳ ಸಂಪೂರ್ಣ ಪೂರ್ವಾಭ್ಯಾಸವನ್ನು ಪೂರ್ಣಗೊಳಿಸಿವೆ. 14 ದಿನಗಳ ಕಾಲ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಪ್ರಯೋಗಗಳನ್ನು ನಡೆಸಲಿದ್ದಾರೆ. ಪ್ರಮುಖವಾಗಿ ಬಾಹ್ಯಾಕಾಶದ ಗುರುತ್ವಾಕರ್ಷಣೆ, ಲೈಫ್, ಬಯೋಲಾಜಿಕಲ್, ಭೂಮಿ ವೀಕ್ಷಣೆ, ಮೆಟಿರಿಯಲ್ ಸೈನ್ಸ್ ಬಗ್ಗೆ ಅಧ್ಯಯನ ಸೇರಿದಂತೆ 60 ರೀತಿಯ ವಿವಿಧ ಪ್ರಯೋಗ ನಡೆಸಲಿದ್ದಾರೆ. ಇದರಲ್ಲಿ ಭಾರತದ ಪರವಾಗಿ ಶುಕ್ಲಾ ನಡೆಸುವ 7 ಪ್ರಯೋಗ ಕೂಡ ಸೇರಿದೆ. ತಮ್ಮ ಪ್ರಯಾಣದ ವೇಳೆ ಮೈಸೂರು ಹಲ್ವಾ, ಮಾವಿನ ಹಣ್ಣಿನ ರಸವನ್ನು ಐಎಸ್ಎಸ್ನ ಸಹಯಾತ್ರಿಗಳಿಗಾಗಿ ಕೊಂಡೊಯ್ಯಲಿದ್ದಾರೆ
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ 14 ದಿನಗಳ ಕಾರ್ಯಾಚರಣೆ ನಡೆಸುವ ‘ಆಕ್ಸ್ -4’ ಗಗನಯಾತ್ರಿಗಳು, ಪ್ರಧಾನಿ ನರೇಂದ್ರ ಮೋದಿ, ಶಾಲಾ ವಿದ್ಯಾರ್ಥಿಗಳು ಮತ್ತು ಬಾಹ್ಯಾಕಾಶ ಉದ್ಯಮದ ಪ್ರಮುಖರೊಂದಿಗೆ ಸಂವಹನ ನಡೆಸುವ ನಿರೀಕ್ಷೆಯಿದೆ. ಆಕ್ಸಿಯಮ್ ಮಿಷನ್ 4ನಲ್ಲಿನ ಶುಕ್ಲಾ ಅವರ ಅನುಭವವನ್ನು 2027ಕ್ಕೆ ಯೋಜಿಸಲಾಗಿರುವ ಗಗನಯಾನ ಕಾರ್ಯಾಚರಣೆಯಲ್ಲಿ ಬಳಸಿಕೊಳ್ಳಲಾಗುವುದು. ಆಕ್ಸಿಯಮ್ -4 ಕಾರ್ಯಾಚರಣೆಗಾಗಿ ಇಸ್ರೋ 550 ಕೋಟಿ ರೂ.ಗಳನ್ನು ಖರ್ಚು ಮಾಡಿದೆ.
























