ಜಗತ್ತಿನಾದ್ಯಂತ ಹರ್ಷೋದ್ಗಾರ
ಫ್ಲೋರಿಡಾ: ಮಹತ್ವಾಕಾಂಕ್ಷಿ ಆಕ್ಸಿಯಮ್-4 ಬಾಹ್ಯಾಕಾಶ ಯೋಜನೆಗೆ ಅಧಿಕೃತ ಚಾಲನೆ ದೊರೆತಿದೆ. ಭಾರತೀಯ ಗಗನಯಾತ್ರಿ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ನೇತೃತ್ವದ ಗಗನಯಾತ್ರಿಗಳ ತಂಡವು ಫ್ಲೋರಿಡಾದಲ್ಲಿರುವ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಸ್ಪೇಸ್‌ಎಕ್ಸ್‌ನ ಫಾಲ್ಕನ್-9 ರಾಕೆಟ್‌ನಲ್ಲಿ ನಭಕ್ಕೆ ಚಿಮ್ಮಿದೆ. ಈ ಮೂಲಕ ಭಾರತದ ಬಾಹ್ಯಾಕಾಶ ಪರಿಕ್ರಮದಲ್ಲಿ ಹೊಸದೊಂದು ಮೈಲುಗಲ್ಲು ಸ್ಥಾಪನೆಯಾಗಿದೆ.
ಆರು ಸಲ ಮುಂದೂಡಿಕೆಯಾಗಿದ್ದ ಶುಭಾಂಶು ಶುಕ್ಲ ಗಗನಯಾನ ಇಂದು ಮಧ್ಯಾಹ್ನ 12 ಗಂಟೆಗೆ ಸರಿಯಾಗಿ ಯಶಸ್ವಿಯಾಗಿ ನಡೆಯಿತು. ಇದನ್ನು ನೋಡಿ ಭಾರತವೂ ಸೇರಿದಂತೆ ಜಗತ್ತಿನಾದ್ಯಂತ ಜನರು ಹರ್ಷೋದ್ಗಾರ ಮಾಡಿದ್ದಾರೆ. ಶುಭಾಂಶು ಶುಕ್ಲ 1984ರ ಬಳಿಕ ಬಾಹ್ಯಾಕಾಶವನ್ನು ತಲುಪಿದ ಎರಡನೇ ಭಾರತೀಯ ಎಂಬ ಇತಿಹಾಸ ನಿರ್ಮಿಸಿದ್ದಾರೆ.
ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ನಾಲ್ವರು ಗಗನಯಾತ್ರಿಗಳನ್ನು ಹೊತ್ತ ಆಕ್ಸಿಯಂ ನೌಕೆ ನಭಕ್ಕೇರಿದೆ. ಸ್ಪೇಸ್‌ಎಕ್ಸ್ ಫಾಲ್ಕನ್-9 ರಾಕೆಟ್ ಮೂಲಕ ಶುಭಾಂಶು ಶುಕ್ಲಾ ಅವರ ಜೊತೆಗೆ ಇತರ ಮೂವರು ಗಗನಯಾತ್ರಿಗಳು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣ ಬೆಳೆಸಿದ್ದಾರೆ.
28 ಗಂಟೆ ಪ್ರಯಾಣದ ಬಳಿಕ ಉದ್ದೇಶಿತ ಡಾಕಿಂಗ್ ಅನ್ನು ಗುರುವಾರ ಸಂಜೆ 4.30ಕ್ಕೆ ಕೈಗೊಳ್ಳಲಾಗುವುದು ಎಂದು ನಾಸಾ ಮಾಹಿತಿ ನೀಡಿದೆ.
1984ರಲ್ಲಿ ಸೋವಿಯತ್ ರಷ್ಯಾದ ಸೋಯುಜ್ ಬಾಹ್ಯಾಕಾಶ ನೌಕೆಯಲ್ಲಿ ಬಾಹ್ಯಾಕಾಶಕ್ಕೆ ಪ್ರಯಾಣ ಬೆಳೆಸುವ ಮೂಲಕ ಭಾರತೀಯರಾದ ರಾಕೇಶ್ ಶರ್ಮಾ ಇತಿಹಾಸ ಬರೆದಿದ್ದರು.
ಲಖನೌದವರಾದ ಶುಕ್ಲಾ ಆಕ್ಸಿಯಮ್ ಸ್ಪೇಸ್‌ನ ಇಸ್ರೋ-ನಾಸಾ ಬೆಂಬಲಿತ ವಾಣಿಜ್ಯ ಬಾಹ್ಯಾಕಾಶ ಹಾರಾಟದ ಭಾಗವಾಗಿದ್ದಾರೆ. ಫ್ಲೋರಿಡಾದ ಕೆಎಸ್‌ಸಿಯ ಲಾಂಚ್ ಕಾಂಪ್ಲೆಕ್ಸ್ 39Aನಿಂದ ಲಿಫ್ಟ್-ಆಫ್ ಮಾಡಲು ಹೊಂದಿಸಲಾದ ಆಕ್ಸಿಯಮ್-4 (ಆಕ್ಸ್-4) ಕಾರ್ಯಾಚರಣೆಯಲ್ಲಿ ಕಮಾಂಡರ್ ಪೆಗ್ಗಿ ವಿಟ್ಸನ್, ಪೈಲಟ್ ಶುಕ್ಲಾ, ತಜ್ಞರಾದ ಹಂಗೇರಿಯ ಟಿಗೋರ್ ಕಾಪು ಮತ್ತು ಪೋಲೆಂಡ್‌ನ ಸ್ಲಾವೋಸ್ಜ್ ಉಜ್ನಾನ್ಸ್ಕಿ ಇದ್ದಾರೆ.
ಅವರು 14 ದಿನಗಳ ಕಾಲ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ತಂಗಿ ಪ್ರಯೋಗಗಳನ್ನು ನಡೆಸಲಿದ್ದಾರೆ. ಪ್ರಮುಖವಾಗಿ ಬಾಹ್ಯಾಕಾಶದ ಗುರುತ್ವಾಕರ್ಷಣೆ, ಲೈಫ್, ಬಯೋಲಾಜಿಕಲ್, ಭೂಮಿ ವೀಕ್ಷಣೆ, ಮೆಟಿರಿಯಲ್ ಸೈನ್ಸ್ ಬಗ್ಗೆ ಅಧ್ಯಯನ ಸೇರಿದಂತೆ 60 ರೀತಿಯ ವಿವಿಧ ಪ್ರಯೋಗ ನಡೆಸಲಿದ್ದಾರೆ. ಇದರಲ್ಲಿ ಭಾರತದ ಪರವಾಗಿ ಶುಕ್ಲಾ ನಡೆಸುವ 7 ಪ್ರಯೋಗ ಕೂಡ ಸೇರಿದೆ.
























