2.5 ಕೋಟಿ ರೂ. ಕಾರಿಗೆ 50 ಲ.ರೂ. ಮೌಲ್ಯ ತೋರಿಸಿ ನೋಂದಾಯಿಸಿ ತೆರಿಗೆ ವಂಚನೆ

ಮನಪಾ ಬಳಿಕ ಮಂಗಳೂರು ಆರ್‌ಟಿಒ ಕಚೇರಿಯ ಅವ್ಯವಹಾರ ಬಯಲಿಗೆ

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ಕಚೇರಿಗೆ ಲೋಕಾಯುಕ್ತ ದಾಳಿಯಾದ ಬಳಿಕ ಅಲ್ಲಿ ನಡೆಯುತ್ತಿದ್ದ ಬ್ರಹ್ಮಾಂಡ ಭ್ರಷ್ಟಾಚಾರ ಬೆಳಕಿಗೆ ಬಂದು ಬುದ್ಧಿವಂತರ ಮತ್ತು ಪ್ರಜ್ಞಾವಂತರ ಜಿಲ್ಲೆ ಎಂಬ ಖ್ಯಾತಿ ಹೊಂದಿರುವ ದಕ್ಷಿಣ ಕನ್ನಡ ಜಿಲ್ಲೆಯ ಹೃದಯ ಭಾಗಕ್ಕೆ ಕಳಂಕ ಅಂಟಿಕೊಂಡಿದೆ. ಈಗ ಸಾರಿಗೆ ಕಚೇರಿಯ ಸರದಿ. ಮಂಗಳೂರಿನ ಸಾರಿಗೆ ಕಚೇರಿಯಲ್ಲಿ ವಾಹನ ನೋಂದಣಿಯಲ್ಲಿ ಭಾರಿ ಅವ್ಯವಹಾರ ನಡೆಯುತ್ತಿರುವುದು ಬೆಳಕಿಗೆ ಬಂದಿದೆ.

ಈ ಹಗರಣ ಮಂಗಳೂರು ಸಾರಿಗೆ ಅಧಿಕಾರಿ ಉಸ್ತುವಾರಿಯಲ್ಲೇ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಕೋಟ್ಯಂತರ ರೂಪಾಯಿ ಬೆಲೆಯ ಕಾರಿಗೆ ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಕ್ಕೆ ಭಾರಿ ವಂಚನೆ ಮಾಡಿರುವುದು ಪತ್ತೆ ಆಗಿದೆ. ಐಷಾರಾಮಿ ಕಾರುಗಳ ತಪಾಸಣೆ ವೇಳೆ ಈ ಭ್ರಷ್ಟಾಚಾರ ಬಯಲಾಗಿದೆ. ಈ ಕಾರನ್ನು ಸೀಜ್​ ಮಾಡಿ ಅದರ ಆರ್​ಸಿಯನ್ನು ಬ್ಲ್ಯಾಕ್‌ಲಿಸ್ಟ್​​ಗೆ ಸೇರಿಸಲಾಗಿದ್ದು, ಶಿವಮೊಗ್ಗ ವಿಭಾಗದ ಸಾರಿಗೆ ಇಲಾಖೆ ಜಂಟಿ ಆಯುಕ್ತರಿಂದ ಈ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.





















































 
 

ಕಾರಿನ ಮೌಲ್ಯ ಕಡಿಮೆ ಮಾಡಿ ಭಾರಿ ತೆರಿಗೆ ವಂಚನೆ ನಡೆದಿದೆ. Mercedes-Benz AMG G 63 ಕಾರಿಗೆ 2 ರಿಂದ 2.50 ಕೋಟಿ ಬೆಲೆ ಇದೆ. Mercedes-Benz GLA 200 CDA ಕಾರು ಸುಮಾರು 50 ಲಕ್ಷದವರೆಗೆ ಮೌಲ್ಯ ಹೊಂದಿದೆ. 2.50 ಕೋಟಿ ಮೌಲ್ಯದ ಕಾರಿಗೆ 50 ಲಕ್ಷ ರೂ ತೆರಿಗೆ ಕಟ್ಟಬೇಕು. ಆದರೆ 50 ಲಕ್ಷ ರೂ ಮೌಲ್ಯದ ಕಾರಿಗೆ 5 ರಿಂದ 6 ಲಕ್ಷ ರೂ ತೆರಿಗೆ ಕಟ್ಟಿದರೆ ಸಾಕು. ಇದೇ ಕಾರಣಕ್ಕೆ ತೆರಿಗೆ ಉಳಿಸಲು ಕಾರಿನ ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಕ್ಕೆ ವಂಚನೆ ಮಾಡಲಾಗಿದೆ. ತೆರಿಗೆ ವಂಚಿಸಲು ಮಂಗಳೂರು ಸಾರಿಗೆ ಅಧಿಕಾರಿ ಸಾಥ್ ನೀಡಿದ್ದಾರೆ ಎನ್ನಲಾಗಿದೆ.

2017ರಲ್ಲಿ ಮಂಗಳೂರಿನ ನಿಹಾಲ್ ಅಹ್ಮದ್ ಎಂಬುವವರು ಬೆಂಗಳೂರಿನಲ್ಲಿ 2.50 ಕೋಟಿ ಮೌಲ್ಯದ ಮರ್ಸಿಡಿಸ್-ಬೆಂಜ್​ ಎಎಂಜಿ ಜಿ63 ಕಾರು ಖರೀದಿಸಿದ್ದರು. ತಾತ್ಕಾಲಿಕವಾಗಿ ನೋಂದಣಿ ಮಾಡಿ 2017ರಿಂದ 2025ರವರೆಗೆ ಇದನ್ನು ಚಲಾಯಿಸಲಾಗಿದೆ. ಬಳಿಕ 2025ರಲ್ಲಿ ನೇರವಾಗಿ ಮಂಗಳೂರಿನ ನೀರಜ್ ಕುಮಾರ್ ಶರ್ಮಾ ಎಂಬುವವರ ಹೆಸರಿನಲ್ಲಿ ಕಾರು ನೋಂದಣಿ ಮಾಡಲಾಗಿದೆ.

ಕಾರು ನೋಂದಣಿಗೂ ಮುನ್ನವೇ ಮಂಗಳೂರು ಸಾರಿಗೆ ಅಧಿಕಾರಿ ಶ್ರೀಧರ್ ಮಲ್ಲಾಡ್​ ಕಾರಿನ ದಾಖಲೆ ಮಾರ್ಪಾಡು ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಆ ಮೂಲಕ ಸರ್ಕಾರಕ್ಕೆ ಲಕ್ಷಾಂತರ ರೂ. ತೆರಿಗೆ ವಂಚನೆಯಾಗಿದೆ. 2025ರ ಜನವರಿಯಲ್ಲೇ ದಾಖಲೆ ಬದಲಿಸಲಾಗಿದೆ. WDB4632722X261301 ಚಾಸಿಸ್ ನಂಬರ್​ನ Benz AMG G63 ಕಾರಿಗೆ ಅದೇ ಚಾಸಿಸ್ ನಂಬರ್​ನಲ್ಲಿ Benz GLA 200 CDA ಕಾರಿನ ನಕಲಿ ದಾಖಲೆ ಸೃಷ್ಟಿ ಮಾಡಲಾಗಿದೆ. 15798460107755 ಇಂಜಿನ್ ನಂಬರ್ ಸರಿಯಾಗಿದ್ದರೂ ಕಾರಿನ ಮಾಡೆಲ್ ಮಾರ್ಪಡಿಸಲಾಗಿದೆ. ಮಂಗಳೂರು ಆರ್​ಟಿಒದಲ್ಲಿ ನಕಲಿ ದಾಖಲೆ ಸೃಷ್ಟಿಸಿ ಉಡುಪಿ ಆರ್​​ಟಿಒದಲ್ಲಿ ಕಾರು ನೋಂದಣಿ ಮಾಡಲಾಗಿದೆ. ಸದ್ಯ ಮೈಸೂರಿನಲ್ಲಿ ತಪಾಸಣೆ ವೇಳೆ ಕಾರಿನ ನಕಲಿ ದಾಖಲೆ ಮಾಹಿತಿ ಬಹಿರಂಗವಾಗಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top