ದಿ ಎಮರ್ಜೆನ್ಸಿ ಡೈರೀಸ್ ಪುಸ್ತಕದಲ್ಲಿ ನೆನಪುಗಳನ್ನು ಬಿಚ್ಚಿದ ಪ್ರಧಾನಿ
ನವದೆಹಲಿ: ಇಂದಿರಾ ಗಾಂಧಿ ಸರ್ಕಾರ ದೇಶಾದ್ಯಂತ ತುರ್ತು ಪರಿಸ್ಥಿತಿ ಹೇರಿದ್ದ ಸಂದರ್ಭವನ್ನು ಭಾರತೀಯರು ಎಂದಿಗೂ ಮರೆಯದ ಕರಾಳ ದಿನ ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ತುರ್ತು ಪರಿಸ್ಥಿತಿ ಹೇರಿ ಇಂದಿಗೆ 50 ವರ್ಷವಾದ ಹಿನ್ನೆಲೆಯಲ್ಲಿ ಮೋದಿ ಆ ದಿನಗಳ ಕುರಿತು ಟವೀಟ್ ಮಾಡಿದ್ದಾರೆ.
ಭಾರತದ ಪ್ರಜಾಪ್ರಭುತ್ವ ಇತಿಹಾಸದ ಕರಾಳ ಅಧ್ಯಾಯಗಳಲ್ಲಿ ಒಂದಾದ ತುರ್ತು ಪರಿಸ್ಥಿತಿ ಹೇರಿಕೆಗೆ ಇಂದು ಐವತ್ತು ವರ್ಷಗಳು ತುಂಬಿವೆ. ಭಾರತದ ಜನರು ಈ ದಿನವನ್ನು ಸಂವಿಧಾನ ಹತ್ಯೆ ದಿವಸ್ ಎಂದು ಆಚರಿಸುತ್ತಾರೆ. ಈ ದಿನದಂದು ಭಾರತೀಯ ಸಂವಿಧಾನದಲ್ಲಿ ಪ್ರತಿಪಾದಿಸಲಾದ ಮೌಲ್ಯಗಳನ್ನು ಬದಿಗಿಡಲಾಯಿತು, ಮೂಲಭೂತ ಹಕ್ಕುಗಳನ್ನು ಅಮಾನತುಗೊಳಿಸಲಾಯಿತು, ಪತ್ರಿಕಾ ಸ್ವಾತಂತ್ರ್ಯವನ್ನು ಅಳಿಸಿ ಹಾಕಲಾಯಿತು ಮತ್ತು ಹಲವಾರು ರಾಜಕೀಯ ನಾಯಕರು, ಸಾಮಾಜಿಕ ಕಾರ್ಯಕರ್ತರು, ವಿದ್ಯಾರ್ಥಿಗಳು ಮತ್ತು ಸಾಮಾನ್ಯ ನಾಗರಿಕರನ್ನು ಜೈಲಿಗೆ ಹಾಕಲಾಯಿತು. ಆ ಸಮಯದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರ ಪ್ರಜಾಪ್ರಭುತ್ವವನ್ನು ಬಂಧನದಲ್ಲಿ ಇರಿಸಿತ್ತು ಎಂದು ಮೋದಿ ವಾಗ್ದಾಳಿ ನಡೆಸಿದ್ದಾರೆ.
ತುರ್ತು ಪರಿಸ್ಥಿತಿಯ ವಿರುದ್ಧದ ಹೋರಾಟದಲ್ಲಿ ದೃಢವಾಗಿ ನಿಂತ ಪ್ರತಿಯೊಬ್ಬ ವ್ಯಕ್ತಿಗೂ ನಾವು ನಮಸ್ಕರಿಸುತ್ತೇವೆ. ಭಾರತದಾದ್ಯಂತ ಎಲ್ಲ ಹಂತಗಳಿಂದ, ವೈವಿಧ್ಯಮಯ ಸಿದ್ಧಾಂತಗಳಿಂದ ಬಂದ ಜನರು ಇವರು, ಒಂದೇ ಗುರಿಯೊಂದಿಗೆ ಪರಸ್ಪರ ನಿಕಟವಾಗಿ ಕೆಲಸ ಮಾಡಿದರು. ಭಾರತದ ಪ್ರಜಾಪ್ರಭುತ್ವದ ಸಂರಚನೆಯನ್ನು ರಕ್ಷಿಸುವುದು ಮತ್ತು ನಮ್ಮ ಸ್ವಾತಂತ್ರ್ಯ ಹೋರಾಟಗಾರರು ತಮ್ಮ ಜೀವನವನ್ನು ಮುಡಿಪಾಗಿಟ್ಟ ಆದರ್ಶಗಳನ್ನು ಸಂರಕ್ಷಿಸುವುದು ಅವರ ಗುರಿಯಾಗಿತ್ತು ಎಂದಿದ್ದಾರೆ.
‘ದಿ ಎಮರ್ಜೆನ್ಸಿ ಡೈರೀಸ್’ ಪುಸ್ತಕ ತುರ್ತು ಪರಿಸ್ಥಿತಿಯ ವರ್ಷಗಳಲ್ಲಿ ನನ್ನ ಹೋರಾಟವನ್ನು ವಿವರಿಸುತ್ತದೆ. ಅದು ಆ ಕಾಲದ ಅನೇಕ ನೆನಪುಗಳನ್ನು ಮರಳಿ ತಂದಿತು. ತುರ್ತು ಪರಿಸ್ಥಿತಿಯ ಆ ಕರಾಳ ದಿನಗಳನ್ನು ನೆನಪಿಸಿಕೊಳ್ಳುವ ಎಲ್ಲರೂ ಅಥವಾ ಆ ಸಮಯದಲ್ಲಿ ಬಳಲಿದ ಕುಟುಂಬಗಳು ತಮ್ಮ ಅನುಭವಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲು ನಾನು ಕರೆ ನೀಡುತ್ತೇನೆ. 1975ರಿಂದ 1977ರವರೆಗಿನ ನಾಚಿಕೆಗೇಡಿನ ಸಂದರ್ಭದ ಬಗ್ಗೆ ಯುವ ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ.
ತುರ್ತು ಪರಿಸ್ಥಿತಿ ಹೇರಿದಾಗ, ನಾನು ಯುವ ಆರ್‌ಎಸ್‌ಎಸ್ ಪ್ರಚಾರಕನಾಗಿದ್ದೆ. ತುರ್ತು ಪರಿಸ್ಥಿತಿ ವಿರೋಧಿ ಚಳವಳಿ ನನಗೆ ಕಲಿಕೆಯ ಅನುಭವವಾಗಿತ್ತು. ಇದು ನಮ್ಮ ಪ್ರಜಾಪ್ರಭುತ್ವ ಚೌಕಟ್ಟನ್ನು ಸಂರಕ್ಷಿಸುವ ಚೈತನ್ಯವನ್ನು ನೀಡಿತು. ಬ್ಲೂಕ್ರಾಫ್ಟ್ ಡಿಜಿಟಲ್ ಫೌಂಡೇಶನ್ ಆ ಅನುಭವಗಳಲ್ಲಿ ಕೆಲವನ್ನು ಪುಸ್ತಕ ರೂಪದಲ್ಲಿ ಸಂಗ್ರಹಿಸಿದೆ ಎಂದು ತಿಳಿದು ನನಗೆ ಸಂತೋಷವಾಗಿದೆ. ಅದರ ಮುನ್ನುಡಿಯನ್ನು ಸ್ವತಃ ತುರ್ತು ಪರಿಸ್ಥಿತಿ ವಿರೋಧಿ ಚಳವಳಿಯ ಪ್ರಮುಖರಾದಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಬರೆದಿದ್ದಾರೆ ಎಂದು ಮೋದಿ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
























