ನವದೆಹಲಿ: ಭಾರತದಲ್ಲಿ ಇಂದಿರಾ ಗಾಂಧಿ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಹೇರಲಾಗಿದ್ದ ‘ತುರ್ತು ಪರಿಸ್ಥಿತಿ’ಗೆ 50 ವರ್ಷಗಳಾಗಿದ್ದು, ಈ ಕರಾಳ ದಿನದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿದ್ದಾರೆ.
ತುರ್ತು ಪರಿಸ್ಥಿತಿಯನ್ನು ಭಾರತೀಯ ಪ್ರಜಾಪ್ರಭುತ್ವದ ಅತ್ಯಂತ ಕರಾಳ ದಿನ ಎಂದು ಕರೆದಿರುವ ಅವರು, ಭಾರತೀಯರು ಇದನ್ನು ಸಂವಿಧಾನ್ ಹಲ್ವಾ ದಿವಸ್ ಎಂದು ಕರೆಯುತ್ತಾರೆ ಎಂದು ಹೇಳಿದ್ದಾರೆ.
ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಸಂವಿಧಾನದ ಆಶಯಗಳನ್ನು, ಮೌಲ್ಯಗಳನ್ನು ಬದಿಗಿಡಲಾಯಿತು. ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳಲಾಯಿತು. ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಯಿತು. ಹಲವರನ್ನು ಜೈಲಿಗಟ್ಟಲಾಯಿತು. ಅಂದಿನ ಕಾಂಗ್ರೆಸ್ ಸರ್ಕಾರ ಪ್ರಜಾಪ್ರಭುತ್ವವನ್ನು ಜೈಲಿನಲ್ಲಿರಿಸಿದಂತಿತ್ತು ಎಂದು ಪ್ರಧಾನಿ ಮೋದಿ ಅವರು ತಿಳಿಸಿದ್ದಾರೆ.
ನಮ್ಮ ಸಂವಿಧಾನದ ಚೈತನ್ಯವನ್ನು ಉಲ್ಲಂಘನೆ ಮಾಡಿದ, ಸಂಸತ್ತಿನ ಧ್ವನಿಯಡಗಿಸಿದ, ನ್ಯಾಯಾಲಯಗಳ ಮೇಲೆ ನಿಯಂತ್ರಣ ಹೇರಲು ಮಾಡಿದ ಪ್ರಯತ್ನವನ್ನು ಯಾವೊಬ್ಬ ಭಾರತೀಯನೂ ಮರೆಯುವುದಿಲ್ಲ. ಕಾಂಗ್ರೆಸ್ ಕುತಂತ್ರಗಳಿಗೆ 42 ನೇ ತಿದ್ದುಪಡಿ ಒಂದು ಉದಾಹರಣೆಯಾಗಿದೆ. ಬಡವರು, ದೀನ ದಲಿತರನ್ನು ಈ ಸಂದರ್ಭದಲ್ಲಿ ಗುರಿಯಾಗಿಸಲಾಯಿತು. ಅವರ ಘನತೆಯನ್ನು ಕಾಂಗ್ರೆಸ್ ಅವಮಾನಿಸಿತು ಎಂದು ಪ್ರಧಾನಿ ಮೋದಿ ಅವರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.
























