ಲೋಕಾಯುಕ್ತ ದಾಳಿಯಲ್ಲಿ ಬಯಲಾದ ಮಂಗಳೂರು ಮಹಾನಗರ ಪಾಲಿಕೆಯ ಭಾರಿ ಭ್ರಷ್ಟಾಚಾರ
ಮಂಗಳೂರು: ಕಳೆದ ಶನಿವಾರ ಲೋಕಾಯುಕ್ತ ಅಧಿಕಾರಿಗಳು ಮಂಗಳೂರು ಮಹಾನಗರ ಪಾಲಿಕೆ ಕಚೇರಿ ಮೇಲೆ ದಾಳಿ ಮಾಡಿದಾಗ ಅಲ್ಲಿ ಭಾರಿ ಭ್ರಷ್ಟಾಚಾರ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಅದರಲ್ಲೂ 15 ವರ್ಷದ ಹಿಂದೆ ನಿವೃತ್ತರಾಗಿದ್ದ ಆರೋಗ್ಯ ಅಧಿಕಾರಿಯೊಬ್ಬರು ಈಗಲೂ ಅದೇ ಹುದ್ದೆಯಲ್ಲಿ ಮುಂದುವರಿಯುತ್ತಿರುವುದನ್ನು ನೋಡಿ ಲೋಕಾಯುಕ್ತ ಅಧಿಕಾರಿಗಳೇ ಚಕಿತರಾಗಿದ್ದಾರೆ.
ಜೂನ್ 21ರಂದು ಲೋಕಾಯುಕ್ತ ಕಚೇರಿಯ ಪೊಲೀಸ್ ಉಪಾಧೀಕ್ಷಕರಾದ ಡಾ.ಗಾನ ಪಿ ಕುಮಾರ್, ಸುರೇಶ್ ಕುಮಾರ್ ಪಿ ಹಾಗೂ ಪೊಲೀಸ್ ನಿರೀಕ್ಷಕರಾದ ಭಾರತಿ ಜಿ, ಚಂದ್ರಶೇಖರ್ ಕೆ.ಎನ್ ಮತ್ತು ಉಡುಪಿ ಲೋಕಾಯುಕ್ತ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಮಂಜುನಾಥ, ರಾಜೇಂದ್ರ ನಾಯ್ಕ್ ಎಂ.ಎನ್ ಮಂಗಳೂರು ಮಹಾನಗರ ಪಾಲಿಕೆಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಪಾಲಿಕೆಯ ಕಂದಾಯ ವಿಭಾಗ, ಆರೋಗ್ಯ ವಿಭಾಗ, ಎಂಜಿನಿಯರ್ ವಿಭಾಗ, ಲೆಕ್ಕ ಪತ್ರ ವಿಭಾಗ. ನಗರ ಯೋಜನಾ ವಿಭಾಗ, ಆಯುಕ್ತರ ಕಛೇರಿಯಲ್ಲಿ ಕಡತ ವಿಲೇವಾರಿಯಲ್ಲಿ ಹಲವಾರು ನ್ಯೂನ್ಯತೆಗಳು ಕಂಡುಬಂದಿವೆ.
ಬ್ರೋಕರ್ ಒಬ್ಬರ ಬಳಿ 5 ಲಕ್ಷ ರೂ. ಹಣ ಪತ್ತೆಯಾಗಿದೆ. ಪಾಲಿಕೆಯ ಆರೋಗ್ಯ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಅಧಿಕಾರಿಯೊಬ್ಬರು 15 ವರ್ಷ ಕಳೆದರು ಕೂಡ ಇಲ್ಲಿಯವರೆಗೆ ಅದೇ ಹುದ್ದೆಯಲ್ಲಿ ಮುಂದುವರೆದಿದ್ದಾರೆ. ಆರೋಗ್ಯ ವಿಭಾಗದಲ್ಲಿ ಹಲವಾರು ಉದ್ದಿಮೆ ಪರವಾನಗಿ ಕಡತಗಳು ಎಂಸಿಸಿ ಟ್ರೇಡ್ ಲೈಸನ್ಸ್ ವೆಬ್‌ಸೈಟ್‌ನಲ್ಲಿ ಬಾಕಿ ಇರುವುದು ಕಂಡುಬಂದಿದೆ. ವ್ಯಾಪಾರ ಲೈಸೆನ್ಸ್‌ಗಳನ್ನು ನವೀಕರಿಸಿರುವುದಿಲ್ಲ ಮತ್ತು ಅದಕ್ಕೆ ಅನುಗುಣವಾದ ಶುಲ್ಕವನ್ನು ಸಂಗ್ರಹಿಸಿರುವುದಿಲ್ಲ. ಇಂಜಿನಿಯರ್ ವಿಭಾಗದಲ್ಲಿನ ಹಳೆಯ ಕಡತಗಳನ್ನು ಬಾಕಿ ಇರಿಸಿರುವುದು ಕಂಡುಬಂದಿದೆ. ಲೆಕ್ಕಪತ್ರ ವಿಭಾಗದಲ್ಲಿ ಕಾಲಮಿತಿಯೊಳಗೆ ಬಿಲ್‌ಗಳನ್ನು ವಿಲೇವಾರಿಗೊಳಿಸದೆ ಬಾಕಿ ಇರಿಸುವುದು ಕಂಡುಬಂದಿದೆ.
























