ಟ್ರಂಪ್ ಮಧ್ಯಸ್ಥಿಕೆಯಲ್ಲಿ ಕದನ ವಿರಾಮಕ್ಕೆ ಒಪ್ಪಿಕೊಂಡ ಉಭಯ ದೇಶಗಳು
ವಾಷಿಂಗ್ಟನ್ : ಇಸ್ರೇಲ್ ಮತ್ತು ಇರಾನ್ ನಡುವೆ ಕಳೆದ 12 ದಿನಗಳಿಂದ ನಡೆಯುತ್ತಿದ್ದ ಘನಘೋರ ಸಮರ ಕೊನೆಗೂಂಡಿದೆ. ಎರಡು ದೇಶಗಳು ಕದನ ವಿರಾಮಕ್ಕೆ ಒಪ್ಪಿಕೊಂಡಿವೆ. ಇರಾನ್ ಸಂಪೂರ್ಣ ಕದನ ವಿರಾಮ ಘೋಷಿಸಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೊಂಡಿದ್ದಾರೆ. ಆದರೆ ಇರಾನ್ ಸಂಪೂರ್ಣ ಕದನ ವಿರಾಮ ಎಂಬ ವ್ಯಾಖ್ಯಾನವನ್ನು ತಿರಸ್ಕರಿಸಿದೆ. ಆದರೆ ಸೋಮವಾರ ರಾತ್ರಿ ಉಭಯ ದೇಶಗಳು ಪರಸ್ಪರರ ಮೇಲೆ ಯಾವುದೇ ಕ್ಷಿಪಣಿ ದಾಳಿ ಮಾಡಿಲ್ಲ. ಹೀಗಾಗಿ ಯುದ್ಧ ನಿಂತಿದೆ ಎನ್ನಲಾಗಿದೆ.
ಟ್ರಂಪ್ ಆಡಳಿತವು ಮಧ್ಯಪ್ರಾಚ್ಯದಲ್ಲಿ ಯಾವುದೇ ಮಿಲಿಟರಿ ಹಸ್ತಕ್ಷೇಪವನ್ನು ಬಯಸುವುದಿಲ್ಲ. ಈ ಯುದ್ಧದದೊಂದಿಗೆ ಜಗತ್ತಿನಲ್ಲಿ ಶಾಂತಿ ನೆಲೆಯಾಗಲಿದೆ. ಎಂದು ಅಮೆರಿಕ ಹೇಳಿಕೊಂಡಿದೆ. ಅಮೆರಿಕ ಅಧ್ಯಕ್ಷ ಟ್ರಂಪ್ ಇಸ್ರೇಲ್ ಮತ್ತು ಇರಾನ್ ನಡುವೆ ಕದನ ವಿರಾಮವನ್ನು ಘೋಷಿಸಿದ್ದಾರೆ.
ಇರಾನ್ ಅಧಿಕೃತವಾಗಿ ಇಸ್ರೇಲ್ ಜೊತೆ ಕದನ ವಿರಾಮಕ್ಕೆ ಒಪ್ಪಿಕೊಂಡಿದೆ. ಕತಾರ್ನಲ್ಲಿರುವ ಅಮೆರಿಕದ ಮೇಲೆ ಇರಾನ್ 6 ಕ್ಷಿಪಣಿಗಳನ್ನು ಹಾರಿಸಿದ ನಂತರ ಕದನ ವಿರಾಮ ಘೋಷಿಸುವ ನಿರ್ಧಾರ ಬಂದಿದೆ. ಅಮೆರಿಕದ ದಾಳಿಗೆ ಪ್ರತಿಕ್ರಿಯೆಯಾಗಿ ಇರಾನ್ ಈ ಕ್ಷಿಪಣಿಗಳನ್ನು ಹಾರಿಸಿತ್ತು. ಇರಾನ್ನಿಂದ ಬಲವಾದ ಪ್ರತಿದಾಳಿಯ ನಂತರ, ಎಲ್ಲ ಮಧ್ಯಪ್ರಾಚ್ಯ ದೇಶಗಳಲ್ಲಿ ಕೋಲಾಹಲ ಉಂಟಾಯಿತು. ಎಲ್ಲಾ ದೇಶಗಳು ಪ್ರತಿಕ್ರಿಯಿಸಿದ್ದವು.
ಕತಾರ್ನಲ್ಲಿರುವ ಅಮೆರಿಕದ ಸೇನಾ ನೆಲೆಯ ಮೇಲೆ ಇರಾನ್ ನಡೆಸಿದ ದಾಳಿಯನ್ನು ಸೌದಿ ಅರೇಬಿಯಾ ಖಂಡಿಸಿತ್ತು. ಕತಾರ್ಗೆ ಸೌದಿ ತನ್ನ ಸಂಪೂರ್ಣ ಬೆಂಬಲವನ್ನು ಘೋಷಿಸಿತ್ತು. ಕತಾರ್ನಲ್ಲಿರುವ ಅಮೆರಿಕದ ನೆಲೆಗಳ ಮೇಲೆ ಇರಾನ್ ನಡೆಸಿದ ಕ್ಷಿಪಣಿ ದಾಳಿ ಸ್ವೀಕಾರಾರ್ಹವಲ್ಲ ಮತ್ತು ಅದನ್ನು ಸಮರ್ಥಿಸಲು ಸಾಧ್ಯವಿಲ್ಲ ಎಂದು ಸೌದಿ ಹೇಳಿತ್ತು. ಇದಕ್ಕೂ ಮೊದಲು, ರಷ್ಯಾದ ಪರವಾಗಿ ಮೆಡ್ವೆಡೆವ್, ರಷ್ಯಾ ಇರಾನ್ಗೆ ಪರಮಾಣು ಶಸ್ತ್ರಾಸ್ತ್ರಗಳನ್ನು ನೀಡುವ ಉದ್ದೇಶವನ್ನು ಹೊಂದಿಲ್ಲ, ಆದರೆ ಇತರ ದೇಶಗಳು ಅವುಗಳನ್ನು ನೀಡಬಹುದು ಎಂದು ಹೇಳಿದ್ದರು.
ಎಲ್ಲವೂ ಅಂದುಕೊಂಡಂತೆ ನಡೆಯುತ್ತದೆ ಮತ್ತು ಅದು ಹಾಗೆಯೇ ಆಗುತ್ತದೆ ಎಂಬ ಊಹೆಯ ಮೇಲೆ 12 ದಿನಗಳ ಯುದ್ಧ ಕೊನೆಗೊಳಿಸಲು ನಿರ್ಧರಿಸಿದ್ದಕ್ಕಾಗಿ ಇಸ್ರೇಲ್ ಮತ್ತು ಇರಾನ್ ಎರಡೂ ರಾಷ್ಟ್ರಗಳನ್ನು ನಾನು ಅಭಿನಂದಿಸಲು ಬಯಸುತ್ತೇನೆ ಎಂದು ಟ್ರಂಪ್ ತಮ್ಮ ಟ್ರೂತ್ ಸಾಮಾಜಿಕ ತಾಣದಲ್ಲಿ ಬರೆದಿದ್ದಾರೆ.
ಟೆಹ್ರಾನ್ ಕದನ ವಿರಾಮಕ್ಕೆ ಒಪ್ಪಿಕೊಂಡಿದೆ ಎಂದು ಇರಾನಿನ ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ, ಇಸ್ರೇಲ್ನಿಂದ ಇನ್ನೂ ಯಾವುದೇ ತಕ್ಷಣದ ಪ್ರತಿಕ್ರಿಯೆ ಬಂದಿಲ್ಲ. ಇರಾನ್ ಯಾವುದೇ ದಾಳಿಗಳನ್ನು ನಡೆಸುವುದಿಲ್ಲ ಎಂಬ ಷರತ್ತಿನ ಮೇಲೆ ಇಸ್ರೇಲ್ ಒಪ್ಪಿಕೊಂಡಿದೆ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗಿನ ಮಾತುಕತೆಯಲ್ಲಿ ಟ್ರಂಪ್ ಈ ಒಪ್ಪಂದವನ್ನು ಮಧ್ಯಸ್ಥಿಕೆ ವಹಿಸಿದ್ದಾರೆ ಎಂದು ಶ್ವೇತಭವನದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇಸ್ರೇಲ್ ಮತ್ತು ಇರಾನ್ ಮಧ್ಯೆ ನಡೆಯುತ್ತಿರುವ ಕಾರ್ಯಾಚರಣೆಗಳನ್ನು ಪೂರ್ಣಗೊಳಿಸಲು ಸ್ವಲ್ಪ ಸಮಯ ಬೇಕಾಗುತ್ತದೆ. ನಂತರ ಕದನ ವಿರಾಮ ಹಂತ ಹಂತವಾಗಿ ಪ್ರಾರಂಭವಾಗುತ್ತದೆ ಎಂದು ಅಮೆರಿಕ ಹೇಳಿದೆ. ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದಲ್ಲೂ ಟ್ರಂಪ್ ಮಧ್ಯಸ್ಥಿಕೆ ವಹಿಸಿದ್ದಾರೆ ಎಂದು ಶ್ವೇತಭವನ ಹೇಳಿದೆ. ಆದರೆ ಭಾರತ ಹಾಗೂ ಪಾಕ್ ನಡುವೆಯೂ ಟ್ರಂಪ್ ಇದೇ ಮಾತು ಹೇಳಿದ್ದರು. ಆದರೆ ಭಾರತ ಇದನ್ನು ನಿರಾಕರಿಸಿತ್ತು.
























