ಮುರುಡೇಶ್ವರ ಕ್ಷೇತ್ರದಲ್ಲಿ ಭಕ್ತರಿಗೆ ವಸ್ತ್ರ ಸಂಹಿತೆ ಜಾರಿ

ಭಕ್ತರ ಧಾರ್ಮಿಕ ಭಾವನೆಗೆ ಧಕ್ಕೆಯಾಗದ ರೀತಿ ಸಭ್ಯ ಉಡುಪು ಧರಿಸಲು ಸೂಚನೆ

ಮುರುಡೇಶ್ವರ : ದೇಶದೆಲ್ಲೆಡೆಯಿಂದ ನಿತ್ಯ ಸಾವಿರಾರು ಭಕ್ತರು ಆಗಮಿಸುವ ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಪುಣ್ಯಕ್ಷೇತ್ರವಾದ ಮುರುಡೇಶ್ವರದಲ್ಲಿ ಭಕ್ತರಿಗೆ ವಸ್ತ್ರ ಸಂಹಿತೆಯನ್ನು ಜರಿಗೊಳಿಸಲಾಗಿದೆ. ಪುರಾಣ ಪ್ರಸಿದ್ಧ ಸ್ಥಳವಾದ ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದಲ್ಲಿ ಈಗಾಗಲೇ ವಸ್ತ್ರ ಸಂಹಿತೆ ಜಾರಿ ಮಾಡಲಾಗಿದೆ. ಇದರ ಬೆನ್ನಲ್ಲೇ ಇದೀಗ ಭಟ್ಕಳ ತಾಲೂಕಿನ ಪ್ರಸಿದ್ಧ ಶಿವ ಕ್ಷೇತ್ರವಾದ ಮುರುಡೇಶ್ವರ ಶಿವಾಲಯದಲ್ಲೂ ಇಲ್ಲಿನ ಆಡಳಿತ ಮಂಡಳಿ ವಸ್ತ್ರ ಸಂಹಿತೆ ಜಾರಿಗೆ ತಂದಿದೆ.

ಮುರುಡೇಶ್ವರ ದೇಶದ ಪ್ರಸಿದ್ಧ ಪ್ರವಾಸಿ ಕ್ಷೇತ್ರಗಳಲ್ಲಿ ಒಂದಾಗಿದ್ದು, ಪ್ರತಿವರ್ಷ ದೇಶ ವಿದೇಶಗಳ, ಲಕ್ಷಾಂತರ ಜನ ಪ್ರವಾಸಿಗರು ಮುರುಡೇಶ್ವರಕ್ಕೆ ಭೇಟಿ ನೀಡುತ್ತಾರೆ. ಇಲ್ಲಿನ ಜಲ ಸಾಹಸ ಕ್ರೀಡೆ, ಸ್ಕೂಬಾ ಡೈವ್‌ಗಳು ಪ್ರಸಿದ್ಧವಾಗಿದ್ದು, ಬೃಹತ್ ಶಿವನ ಮೂರ್ತಿ ಮತ್ತು ಗೋಪುರ ವಿಶ್ವ ಪ್ರಸಿದ್ಧಿ ಪಡೆದಿದೆ.





















































 
 

ಇಲ್ಲಿಗೆ ಬರುವ ಪ್ರವಾಸಿಗರು ಕಡಲ ತೀರಕ್ಕೆ ಭೇಟಿ ನೀಡಿದ ನಂತರ ಶಿವನ ದೇವಾಲಯಕ್ಕೂ ಭೇಟಿ ಕೊಡುತ್ತಾರೆ. ಈ ವೇಳೆ ಪುರುಷರು ಚಡ್ಡಿ, ಬನಿಯನ್‌ನಲ್ಲಿ ಬಂದರೆ, ಮಹಿಳೆಯರು ಸಹ ಆಕ್ಷೇಪಾರ್ಹ ರೀತಿಯ ಉಡುಪು ಧರಿಸಿ ಬರುತ್ತಿರುವ ಬಗ್ಗೆ ಆಕ್ಷೇಪ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಭಕ್ತರು ಆಡಳಿತ ಮಂಡಳಿಗೆ ವಸ್ತ್ರ ಸಂಹಿತೆ ಜಾರಿ ತರುವಂತೆ ಮನವಿ ಮಾಡಿದ್ದರು.

ಈಗ ಆಡಳಿತ ಮಂಡಳಿ ಈ ಬಗ್ಗೆ ನಿರ್ಧಾರ ಕೈಗೊಂಡಿದ್ದು, ಪುರುಷರಿಗೆ ಪಂಚೆ ಮತ್ತು ಮಹಿಳೆಯರು ಸೀರೆ ಅಥವಾ ಚೂಡಿದಾರ ಧರಿಸಿದರೆ ಮಾತ್ರ ದೇವಾಲಯಕ್ಕೆ ಪ್ರವೇಶ ಕಲ್ಪಿಸಲಿದೆ. ದೇವಾಲಯದ ಎದುರುಭಾಗ ಸೂಚನ ಫಲಕ ಹಾಕಲಾಗಿದ್ದು, ಯಾವ ವಸ್ತ್ರ ಧರಿಸಬೇಕು ಎಂದು ಫಲಕದಲ್ಲಿ ಚಿತ್ರ ಸಹಿತ ನಮೂದಿಸಲಾಗಿದೆ. ಈ ದೇವಸ್ಥಾನ ಖಾಸಗಿ ಆಡಳಿತ ಮಂಡಳಿ ಹೊಂದಿದ್ದು, ಉದ್ಯಮಿ ಆರ್.ಎನ್.ಶೆಟ್ಟಿ ಅವರ ಕುಟುಂಬ ಈ ದೇವಸ್ಥಾನದ ನಿರ್ವಹಣೆ ಮಾಡುತ್ತಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top