ಸಂಘರ್ಷ ಉಂಟು ಮಾಡುವ ಸುದ್ದಿಗಳಿಗೆ ಕಡಿವಾಣ ಹಾಕಲು ಹೊಸ ವಿಧೇಯಕ ಮಂಡನೆಗೆ ಸಿದ್ಧತೆ
ಬೆಂಗಳೂರು : ದ್ವೇಷ ಭಾಷಣ ಮತ್ತು ಸುಳ್ಳು ಸುದ್ದಿ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಕಠಿಣ ಕಾನೂನು ತರಲು ರಾಜ್ಯ ಸರ್ಕಾರ ಮುಂದಾಗಿದೆ. ಇದಕ್ಕಾಗಿ ಕರಡು ಮಸೂದೆಯೊಂದನ್ನು ರಚಿಸಲಾಗಿದ್ದು, ಇದರಲ್ಲಿ ಸಂಘರ್ಷಕ್ಕೆ ಕಾರಣವಾಗುವ ದ್ವೇಷ ಭಾಷಣಕ್ಕೆ ಮತ್ತು ನಕಲಿ ಸುದ್ದಿ ಹರಡುವವರಿಗೆ 3ರಿಂದ 7 ವರ್ಷ ಜೈಲು ಶೀಕ್ಷೆ ವಿಧಿಸುವ ಪ್ರಸ್ತಾವ ಇಡಲಾಗಿದೆ.
ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ‘ದ್ವೇಷ ಅಪರಾಧಗಳು ಮತ್ತು ದ್ವೇಷ (ಹೋರಾಟ, ತಡೆಯುವಿಕೆ) ವಿಧೇಯಕ- 2025’ ಕರಡು ಬಗ್ಗೆ ಚರ್ಚಿಸಲಾಗಿದೆ. ಈ ಬಗ್ಗೆ ಸಂಪುಟ ಸಭೆಯಲ್ಲಿ ಪ್ರಾಥಮಿಕವಾಗಿ ಪ್ರಸ್ತಾಪಿಸಲಾಗಿದ್ದು ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ತೀರ್ಮಾನಿಸಲಾಗುವುದು ಎಂದು ತಿಳಿದುಬಂದಿದೆ.
ದ್ವೇಷ ಭಾಷಣ ದೇಶದ ಜ್ಯಾತ್ಯತೀತ ಸಂರಚನೆಗೆ ಹಾನಿ ಮಾಡುವಷ್ಟು ಸಮರ್ಥವಾಗಿರುವ ಗಂಭೀರ ಅಪರಾಧ ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ಅಭಿಪ್ರಾಯಪಟ್ಟಿದೆ. ಇದನ್ನೇ ಸಮರ್ಥನೆಯಾಗಿಟ್ಟುಕೊಂಡು ಹೊಸ ಕಾಯಿದೆ ರಚನೆಗೆ ಸರ್ಕಾರ ಮುಂದಾಗಿದೆ.
ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆ ಸೇರಿ ಹಲವೆಡೆ ದ್ವೇಷ ಭಾಷಣ, ಪ್ರಚೋದನೆಗಳು ಹೆಚ್ಚಾಗಿದ್ದು, ಈ ಹಿನ್ನೆಲೆಯಲ್ಲಿ ಕೆಲವರನ್ನು ಜಿಲ್ಲೆಯಿಂದ ಗಡಿಪಾರು ಮಾಡಲು ಸಹ ಕ್ರಮ ಕೈಗೊಳ್ಳಲಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಅಥವಾ ಪ್ರಕಟಣೆಗಳಲ್ಲಿ ತಪ್ಪು ಮಾಹಿತಿ ನೀಡಿದರೆ ಎರಡರಿಂದ ಐದು ವರ್ಷಗಳ ಜೈಲು ಶಿಕ್ಷೆ ಮತ್ತು ದಂಡ. ಈ ಅಪರಾಧಗಳನ್ನು ಸಂಜ್ಞೇಯವೆಂದು ಪರಿಗಣಿಸಲಾಗುತ್ತದೆ. ಇದು ಜಾಮೀನು ರಹಿತ ಪ್ರಕರಣವೆಂದು ಪರಿಗಣಿಸಲಾಗುತ್ತದೆ. ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸುವುದು ಹಾಗೂ ದ್ವೇಷ ಭಾಷಣ ಮಾಡುವವರು ಎಚ್ಚರಿಕೆಯಿಂದ ಇರಬೇಕು.
ಈ ಕಾಯ್ದೆಯನ್ನು ಜಾರಿಗೆ ತರಲು ನಕಲಿ ಸುದ್ದಿ ನಿಯಂತ್ರಣ ಪ್ರಾಧಿಕಾರವನ್ನು ರಚಿಸಲಾಗುತ್ತದೆ. ಕರಡು ಮಸೂದೆಯ ಪ್ರಕಾರ, ಸುದ್ದಿಗಳಲ್ಲಿ ತಪ್ಪು ಉಲ್ಲೇಖಗಳು ಅಥವಾ ಒಬ್ಬರ ಹೇಳಿಕೆಯ ಸುಳ್ಳು ಅಥವಾ ತಪ್ಪಾದ ವರದಿಗಳ ಸಂಯೋಜನೆ ಸೇರಿದೆ. ಸತ್ಯ ಮತ್ತು ಸಂದರ್ಭದ ವಿರೂಪಕ್ಕೆ ಕಾರಣವಾಗುವ ಆಡಿಯೋ ಅಥವಾ ವೀಡಿಯೋ ತುಣುಕುಗಳನ್ನು ಸಂಪಾದಿಸುವುದು ಕಾನೂನುಬದ್ಧ, ಸಂಘಟಿತ ಅಥವಾ ಅಸಂಘಟಿತ, ಸಾಮಾಜಿಕ ಮಾಧ್ಯಮ ವಿಷಯವನ್ನು ಬಳಸಿಕೊಳ್ಳುವುದು, ಸಾಮಾಜಿಕ ಮಾಧ್ಯಮ ಖಾತೆಗಳ ಮೂಲಕ, ಪರಿಶೀಲಿಸಿದ ಅಥವಾ ಗುಪ್ತನಾಮ, ಕಾಲ್ಪನಿಕ ಅಥವಾ ಸುಳ್ಳು ಖಾತೆ/ಪುಟದ ಹೆಸರಿನ ಮೂಲಕ ಸಂದೇಶಗಳು ಅಥವಾ ಮಾಹಿತಿಯನ್ನು ಕಳುಹಿಸುವುದು, ನಕಲಿ ಸುದ್ದಿಗಳನ್ನು ಹರಡುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ.
ದ್ವೇಷ ಭಾಷಣಕ್ಕೆ 3 ವರ್ಷ ಶಿಕ್ಷೆ
ದ್ವೇಷ ಭಾಷಣ ಹಾಗೂ ದ್ವೇಷ ಅಪರಾಧ ತಡೆಗೆ ವಿಧೇಯಕ ಜಾರಿಗೆ ಪ್ರಸ್ತಾಪಿಸಿದ್ದು, ದ್ವೇಷ ಭಾಷಣ ಧಾರ್ಮಿಕ, ಜನಾಂಗೀಯ, ಜಾತಿ ಅಥವಾ ಸಮುದಾಯ, ಲಿಂಗ, ಲೈಂಗಿಕ ದೃಷ್ಟಿಕೋನ, ಜನ್ಮಸ್ಥಳ, ನಿವಾಸ, ಅಂಗವೈಕಲ್ಯ, ಬುಡಕಟ್ಟು ಕುರಿತು ಯಾವುದೇ ವ್ಯಕ್ತಿಗೆ ಹಾನಿ ಮಾಡುವ ಅಥವಾ ದ್ವೇಷವನ್ನು ಉತ್ತೇಜಿಸುವ ಅಥವಾ ಪ್ರಚಾರ ಮಾಡುವ ವ್ಯಕ್ತಿ ಅಥವಾಗ ಗುಂಪಿಗೆ 3 ವರ್ಷಗಳ ಕಾಲ ಶಿಕ್ಷೆ ವಿಧಿಸಬಹುದು ಅಥವಾ 5 ಸಾವಿರ ದಂಡದ ಜತೆಗೆ ಶಿಕ್ಷೆ ವಿಧಿಸಲು ಪ್ರಸ್ತಾಪಿಸಲಾಗಿದೆ.
ಸದ್ಯ ನಕಲಿ ಸುದ್ದಿಗಳನ್ನು ಪೋಸ್ಟ್ ಮಾಡುವಲ್ಲಿ ವ್ಯಕ್ತಿ ತಪ್ಪಿತಸ್ಥರೆಂದು ಏಳು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 10 ಲಕ್ಷ ರೂ.ಗಳವರೆಗೆ ದಂಡ ಅಥವಾ ಎರಡನ್ನೂ ವಿಧಿಸುವ ಬಗ್ಗೆ ರೂಪರೇಷ ಸಿದ್ಧವಾಗಿದೆ.
























