ಯಶಸ್ಸಾಗಲು ಹಣವೇ ಬೇಕೆಂದಿಲ್ಲ, ಛಲ, ಪರಿಶ್ರಮ ಸಾಕು ಎನ್ನುವುದಕ್ಕೆ ಸಾಕ್ಷಿಯಾದ ರೋಹಿತ್
ಯಾವುದೇ ಕೋಚಿಂಗ್ ಪಡೆಯದೆ, ತನ್ನ ಕುಟುಂಬದ ಆರ್ಥಿಕ ಸಂಕಷ್ಟಕ್ಕೆ ಹೆಗಲಾಗುವ ಬಯಕೆಯಿಂದ ರಸ್ತೆ ಬದಿಯಲ್ಲಿ ಮೊಬೈಲ್ ಕವರ್ ಮಾರುತ್ತಿದ್ದ ಹುಡುಗ ರೋಹಿತ್ ಕುಮಾರ್ ಎಂಬ ಯುವಕನೊಬ್ಬ ಈ ಸಾಲಿನ ನೀಟ್ ಪರೀಕ್ಷೆ ಪಾಸು ಮಾಡಿ ದೇಶದ ಗಮನ ಸೆಳೆದಿದ್ದಾರೆ.
ಯಾರು ಈ ರೋಹಿತ್?
ಜಾರ್ಖಂಡ್‌ನ ಜಮ್ಶೆಡ್‌ಪುರದ 20 ವರ್ಷದ ಯುವಕ ರೋಹಿತ್ ಕುಮಾರ್. ಇವರ ನೀಟ್ ಪರೀಕ್ಷಾ ತಯಾರಿ ಯಾವುದೋ ಕೋಚಿಂಗ್ ಸೆಂಟರ್‌ನಿಂದ ಆರಂಭವಾಗಿದ್ದಲ್ಲ. ಬದಲಾಗಿ ಬಡ ಕುಟುಂಬದ ಈ ಹುಡುಗ ರಸ್ತೆ ಬದಿಯಲ್ಲಿ ಮೊಬೈಲ್ ಕವರ್‌ಗಳನ್ನು ಮಾರಾಟ ಮಾಡಿ, ಅದರ ಜೊತೆಗೆ ಕಠಿಣ ಪರಿಶ್ರಮದಿಂದ ಅಭ್ಯಸಿಸಿ 2025ನೇ ಸಾಲಿನ ನೀಟ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ.

10ನೇ ತರಗತಿ ಶಿಕ್ಷಣದ ಬಳಿಕ ಕುಟುಂಬದ ಆರ್ಥಿಕ ಹೊರೆಯನ್ನು ಇಳಿಸಬೇಕು ಎಂದು ಮೊಬೈಲ್ ಕವರ್ ಮಾರಾಟದ ಮೂಲಕ ಸಂಪಾದನೆ ಮಾಡಲು ಹೊರಟವರು. ಇವರಿಗೆ ದ್ವಿತೀಯ ಪಿಯುಸಿಯಲ್ಲಿಯೂ ಉತ್ತಮ ಫಲಿತಾಂಶ ಬಂತು. ಅವರಿಗೆ ಈ ಮೊದಲೇ ತಾನೊಬ್ಬ ವೈದ್ಯನಾಗಬೇಕು, ತನ್ನ ಕುಟುಂಬವನ್ನು ಸಹ ಉತ್ತಮ ನೆಲೆಗೆ ತಲುಪಿಸಬೇಕು ಎಂಬ ಕನಸಿತ್ತು. ಆ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಅವರು ಪಟ್ಟ ಪರಿಶ್ರಮ ಸ್ಫೂರ್ತಿಯೇ ಸರಿ.
ರೋಹಿತ್ ಗೆ ತಾನೊಬ್ಬ ವೈದ್ಯನಾಗಬೇಕೆಂಬ ಕನಸು ಹುಟ್ಟಿದ್ದು ಹೇಗೆ?
ಇದೊಂದು ರೋಚಕ ಕಥೆ. ತನ್ನ ಕುಟುಂಬಕ್ಕೆ ಆರ್ಥಿಕವಾಗಿ ಹೆಗಲಾಗಲು ಹತ್ತನೇ ತರಗತಿ ಕಳೆದಾಗಲೇ ಮೊಬೈಲ್ ಕವರ್ ಮಾರಾಟಕ್ಕೆ ಇಳಿದವರು ರೋಹಿತ್. ಅವರು ಅದಕ್ಕಾಗಿ ಆಯ್ಕೆ ಮಾಡಿಕೊಂಡ ಸ್ಥಳದ ಪಕ್ಕದಲ್ಲೇ ಇದ್ದ ಆಸ್ಪತ್ರೆಯ ವೈದ್ಯರು ಬಿಳಿ ಕೋಟು, ಸ್ಕೆತಾಸ್ಕೋಪ್ ಧರಿಸಿ ಬರುವುದು, ರೋಗಿಗಳನ್ನು ಶುಶ್ರೂಷೆ ಮಾಡುವುದು, ರೋಗಿಗಳ ಜೊತೆಗೆ ಮಾತನಾಡುವುದು ಇವೆಲ್ಲವನ್ನೂ ದಿನನಿತ್ಯ ಗಮನಿಸುತ್ತಿದ್ದರು. ಇದರಿಂದಲೇ ಅವರಿಗೆ ತಾನೂ ಒಬ್ಬ ವೈದ್ಯನಾಗಬೇಕು ಎನ್ನುವ ಬಯಕೆ ಹುಟ್ಟಿದ್ದು. ಅದಕ್ಕಾಗಿ ಕಠಿಣ ಪರಿಶ್ರಮದಿಂದ ಅಧ್ಯಯನ ನಡೆಸಿದ್ದು. ಕೊನೆಗೆ ಯಾವುದೇ ತರಬೇತಿ ಪಡೆಯದೆ ತಾನೇ ಅಧ್ಯಯನ ನಡೆಸಿ ನೀಟ್ ಪಾಸ್ ಮಾಡಿದ್ದು.
ಅವರ ಪರಿಶ್ರಮ ಹೀಗಿತ್ತು…
ಅವರ ಆರ್ಥಿಕ ಪರಿಸ್ಥಿತಿ ಗಟ್ಟಿಯಾಗಿರಲಿಲ್ಲ ಎನ್ನುವುದು ಈಗಾಗಲೇ ಹೇಳಲಾಗಿದೆ. ಅಂತಹ ಸ್ಥಿತಿಯಲ್ಲಿ ಅವರು ಹೇಗೆ ತಾನೆ ನೀಟ್ ಪರೀಕ್ಷೆಗೆ ತರಬೇತಿ ಪಡೆಯಲು ಕೋಚಿಂಗ್ ಸೆಂಟರ್‌ಗಳಿಗೆ ಹೋಗಲು ಸಾಧ್ಯ? ಅಲ್ಲವೇ… ಆದರೆ ಇದು ಅವರ ಕನಸ್ಸನ್ನು ಚಿವುಟಿ ಹಾಕಲಿಲ್ಲ. ದ್ವಿತೀಯ ಪಿಯುಸಿ ಪರೀಕ್ಷಾ ಸಮಯದಲ್ಲಿ ಅವರು 3ರಿಂದ 4 ಗಂಟೆಗಳ ಅವಧಿಯನ್ನು ಅಧ್ಯಯನಕ್ಕಾಗಿ ಮೀಸಲಿಟ್ಟಿದ್ದರು. ಆದರೆ, ನೀಟ್ ಪರೀಕ್ಷಾ ತಯಾರಿಗೆ ಇದು ಸಾಲುವುದಿಲ್ಲ. ಅಲ್ಲಿಂದ ಅವರು ಅಧ್ಯಯನದಲ್ಲಿ ದಿನದಲ್ಲಿ 12ರಿಂದ 13 ಗಂಟೆಗಳ ಕಾಲ ತೊಡಗಿಸಿಕೊಳ್ಳುತ್ತಾರೆ. ಕೆಲಸದ ನಡುವಿನ ಬಿಡುವಿನ ವೇಳೆಯಲ್ಲಿಯೂ ಅವರ ಗಮನ ಅಧ್ಯಯನದ ಕಡೆಗೇ ಇತ್ತು. ಈ ಸಮಯದಲ್ಲಿ ಅವರು ಕಲಿತದ್ದನ್ನು ಮತ್ತೆ ನೆನಪಿಸಿಕೊಳ್ಳುವುದು, ಪ್ರಶ್ನೆಗಳನ್ನು ಪರಿಹರಿಸಿಕೊಳ್ಳುವುದು ಮತ್ತು ಗ್ರಹಿಕೆಯನ್ನು ಬಲಪಡಿಸುವ ಕೆಲಸವನ್ನು ಮಾಡುತ್ತಿದ್ದರು.
ಕೆಲವು ಬಾರಿ ಅವರಿಗೆ ಈ ಪ್ರಯತ್ನವನ್ನು ಬಿಟ್ಟು ಬಿಡಬೇಕು ಎಂದು ಅನಿಸುತ್ತಿತ್ತಂತೆ. ಏಕೆಂದರೆ ಕಷ್ಟಪಟ್ಟು ಮಾಡಿದ ಕೆಲಸಕ್ಕೆ ನಿರೀಕ್ಷಿತ ಫಲಿತಾಂಶ ದೊರೆಯುತ್ತಿರಲಿಲ್ಲ. ಆದರೆ ಯಶಸ್ಸು ರಾತ್ರೋರಾತ್ರಿ ಬರುವುದಿಲ್ಲ ಎನ್ನುವುದು ಮನದಟ್ಟಾಗಿ, ಅಭ್ಯಾಸ, ತಾಳ್ಮೆ, ನೋವು ಯಶಸ್ಸನ್ನು ತಂದು ಕೊಡುತ್ತದೆ ಎಂದುಕೊಂಡು ಮತ್ತೆ ಪ್ರಯತ್ನ ನಡೆಸುತ್ತಿದ್ದರು. ಅವರ ಪ್ರಯತ್ನ ಈಗ ದೇಶದೆಲ್ಲೆಡೆ ಅವರನ್ನು ಗುರುತಿಸುವ ಮಟ್ಟಿಗೆ ಅವರಿಗೆ ಯಶಸ್ಸಿನ ಹಿರಿಮೆಯನ್ನು ತಂದುಕೊಟ್ಟಿದೆ.
ಕುಟುಂಬ ಬಗ್ಗೆ ಹೇಳುವುದಾದರೆ…
ಇವರ ತಂದೆ ಸ್ಥಳೀಯ ಮಾರುಕಟ್ಟೆಯಲ್ಲಿ ತರಕಾರಿ ವ್ಯಾಪಾರಿ. ಅವರ ತಾಯಿ ಇದ್ದುದರಲ್ಲೇ ಮನೆಯನ್ನು ಅಚ್ಚುಕಟ್ಟಾಗಿ ನಡೆಸಿಕೊಂಡು ಹೋಗುವ ಗೃಹಿಣಿ. ರೋಹಿತ್ ಗೆ ತಮ್ಮ ಶಿಕ್ಷಣದ ಕನಸನ್ನು ಪೂರೈಸಲು ಬೆಂಬಲವಾಗಿ ನಿಂತಿದ್ದು ಅವರ ಕುಟುಂಬ. ನನಗೆ ನನ್ನ ಹೆತ್ತವರು ದೇವರಂತೆ ಎನ್ನುವ ರೋಹಿತ್ ನಾನಿಂದು ಏನೇ ಸಾಧನೆ ಮಾಡಿದ್ದರೂ ಅದು ಅವರಿಂದಾಗಿ ಎಂದು ಭಾವುಕರಾಗುತ್ತಾರೆ. ಇದೇ ಸಂದರ್ಭದಲ್ಲಿ ತಮಗೆ ಬೆನ್ನೆಲುಬಾದ ಶಿಕ್ಷಕರು, ಸ್ನೇಹಿತರನ್ನೂ ಅವರು ನೆನಪಿಸಿಕೊಳ್ಳುತ್ತಾರೆ. ಇವರೆಲ್ಲರ ಸಹಕಾರದಿಂದ ನಾನು ತುಳಿಯುವವರ ನಡುವೆ ಬೆಳೆದು ಬಂದಿದ್ದೇನೆ ಎಂದು ಹೆಮ್ಮೆಯಿಂದ ಹೇಳುತ್ತಾರೆ.
ಅಂದ ಹಾಗೆ ರೋಹಿತ್ ಅವರಿಗೆ NEET 2025ರಲ್ಲಿ 549 ಅಂಕಗಳು ಮತ್ತು ಎರಡನೇ ಪ್ರಯತ್ನದಲ್ಲಿ 12,484 ಅಖಿಲ ಭಾರತ ರ‍್ಯಾಂಕ್ (AIR) ದೊರೆತಿದೆ. ಈಗ ಅವರು ವೈದ್ಯನಾಗುವ ತನ್ನ ಕನಸಿಗೆ ಮತ್ತೊಂದು ಹೆಜ್ಜೆ ಹತ್ತಿರವಾಗಿದ್ದಾರೆ. ಜಾರ್ಖಂಡ್‌ನ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಪ್ರವೇಶ ಪಡೆಯುವ ಆಶಯವನ್ನು ಅವರು ಹೊಂದಿದ್ದಾರೆ ಮತ್ತು ನರವಿಜ್ಞಾನ ಅಥವಾ ಹೃದ್ರೋಗಶಾಸ್ತ್ರದಲ್ಲಿ ಪರಿಣತಿ ಹೊಂದಲು ಬಯಸಿದ್ದಾರೆ. ಅವರ ಗುರಿ ರೋಗಿಗಳಿಗೆ ಚಿಕಿತ್ಸೆ ನೀಡುವುದು ಮಾತ್ರವಲ್ಲ, ರೋಗಿಗಳ ಸೇವೆ ಮಾಡುವುದು.
ಇವರು ಯಾವ ರ್ಯಾಂಕ್ ಪಡೆದರು ಎನ್ನುವ ಕಾರಣಕ್ಕೆ ದೇಶದ ಜನರಿಗೆ ಆಪ್ತವಾಗಿರುವುದಲ್ಲ. ಬದಲಾಗಿ ಈ ರ್ಯಾಂಕ್ ಪಡೆಯಲು ಅವರು ನಡೆದು ಬಂದ ಹಾದಿ, ಪಟ್ಟ ಪರಿಶ್ರಮ ಇಂದು ದೇಶದೆಲ್ಲೆಡೆ ಅವರನ್ನು ಓರ್ವ ಮಾದರಿ ವಿದ್ಯಾರ್ಥಿ ಎಂಬುದಾಗಿ ಗುರುತಿಸುವಂತೆ ಮಾಡಿದೆ.
ಯಶಸ್ಸು ಹಣದ ಮೇಲೆ ಅವಲಂಬಿತವಾಗಿಲ್ಲ. ಬದಲಿಗೆ ಪರಿಶ್ರಮದ ಹಾದಿಯ ಮೇಲೆ ನಿರ್ಧಾರವಾಗುವಂಥದ್ದು. ಗೆಲುವು ಸುಲಭದಲ್ಲಿ ಸಿಗಲಾರದು. ಹಾಗೆಂದು ಸೋತಾಗ ಬೇಸರಿಸದೆ, ಪ್ರಯತ್ನ ಬಿಡದೆ ಇದ್ದರೆ, ಸೋಲಿನ ಹತಾಶೆಯಿಂದ ಯಾವುದೇ ಅನಾಹುತಕ್ಕೆ ನಮ್ಮನ್ನು ದೂಡದೆ ಮರಳಿ ಪ್ರಯತ್ನ ಮಾಡಿದರೆ ಫಲಿತಾಂಶ ಪಾಸಿಟಿವ್ ಆಗಿರುತ್ತದೆ ಎನ್ನುವುದಕ್ಕೆ ರೋಹಿತ್ ಪರಿಶ್ರಮದ ದಾರಿ ನಮಗೆಲ್ಲಾ ಮಾದರಿ.
ಭುವನ ಬಾಬು ಪುತ್ತೂರು

























