ನವದೆಹಲಿ: ಪಾಕಿಸ್ತಾನದ ಜೊತೆಗಿನ ಸಿಂಧೂ ಜಲ ಒಪ್ಪಂದ ಭಾರತಕ್ಕೆ ನ್ಯಾಯಸಮ್ಮತವಲ್ಲ. ಪಾಕ್ ಜೊತೆ ಈ ಒಪ್ಪಂದವನ್ನು ಮರುಸ್ಥಾಪಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಸ್ಪಷ್ಟಪಡಿಸಿದ್ದಾರೆ.
ಕಳೆದ ತಿಂಗಳು ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿ ಉಗ್ರ ಕೃತ್ಯ ನಡೆಸಿದ್ದ ಪಾಕ್ ಗೆ ತಕ್ಕ ಶಾಸ್ತಿ ಮಾಡಲು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಿಂಧೂ ಜಲ ಒಪ್ಪಂದವನ್ನು ಅಮಾನತು ಮಾಡಿತ್ತು.
ಈ ಬಗ್ಗೆ ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಶಾ ಸ್ಪಷ್ಟಪಡಿಸಿದ್ದು, ಸಿಂಧೂ ನದಿಯಿಂದ ಪಾಕ್ ಗೆ ಹರಿಯುತ್ತಿದ್ದ ನೀರನ್ನು ಕಾಲುವೆ ನಿರ್ಮಾಣದ ಮೂಲಕ ರಾಜಸ್ಥಾನಕ್ಕೆ ಹರಿಸಲಾಗುವುದು. ನ್ಯಾಯಯುತವಲ್ಲದ ರೀತಿಯಲ್ಲಿ ಪಾಕಿಸ್ತಾನ ನೀರನ್ನು ಮುಂದಿನ ದಿನಗಳಲ್ಲಿ ಪಡೆಯಲಾರದು ಎಂದು ಹೇಳಿದ್ದಾರೆ.
























