ಇರಾನ್-ಇಸ್ರೇಲ್ ಯುದ್ಧಕ್ಕೆ ದೊಡ್ಡಣ್ಣನ ದಿಢೀರ್ ಎಂಟ್ರಿ ; ಬದಲಾಯಿತು ಯುದ್ಧದ ಗತಿ
ಟೆಹ್ರಾನ್: ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧಕ್ಕೆ ಅಮೆರಿಕ ದಿಢೀರ್ ಎಂದು ಎಂಟ್ರಿ ಕೊಟ್ಟಿದ್ದು, ಭಾನುವಾರ ನಸುಕಿನ ಹೊತ್ತು ಇರಾನ್ನ ಮೂರು ಪರಮಾಣು ಸ್ಥಾವರಗಳನ್ನು ಧ್ವಂಸ ಮಾಡಿದೆ. ಫೋರ್ಡೋ, ನತಾಂಝ್ ಮತ್ತು ಎಸ್ಪಹಾನ್ ಸ್ಥಾವರಗಳ ಮೇಲೆ ಅಮೆರಿಕ ದಾಳಿ ಮಾಡಿದೆ. ಈ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಹಿತಿ ಬಹಿರಂಗಪಡಿಸಿದ್ದಾರೆ. ಇತ್ತ ಕೆರಳಿ ಕೆಂಡವಾಗಿರುವ ಇರಾನ್ ನೀವು ಪ್ರಾರಂಭಿಸಿದ್ದೀರಿ, ಅದನ್ನು ನಾವು ಕೊನೆಗೊಳಿಸುತ್ತೇವೆ ಎಂದು ಅಮೆರಿಕಕ್ಕೆ ಎಚ್ಚರಿಕೆ ಸಂದೇಶ ರವಾನೆ ಮಾಡಿದೆ.
ಜಗತ್ತಿನ ಅತ್ಯಂತ ಪ್ರಬಲ ಸೇನೆ ಮತ್ತು ಶಸ್ತ್ರಾಸ್ತ್ರಗಳನ್ನು ಹೊಂದಿರುವ ಅಮೆರಿಕ ಇದೀಗ ಇರಾನ್ ಮೇಲೆ ರಾತ್ರೋರಾತ್ರಿ ದಾಳಿ ಮಾಡುವ ಮೂಲಕ ಈ ಯುದ್ಧದ ಗತಿ ಬದಲಾಗಿದೆ. ಇರಾನ್ನ ಮೂರು ನ್ಯೂಕ್ಲಿಯರ್ ಕೇಂದ್ರಗಳು ಧ್ವಂಸಗೊಂಡಿವೆ ಎಂದು ವರದಿಗಳು ಹೇಳಿವೆ. ಈ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿದ್ದು, ‘ಇರಾನ್ನ 3 ಪರಮಾಣು ನೆಲೆಗಳಾದ ಫೋರ್ಡೋ, ನತಾಂಝ್ ಮತ್ತು ಇಸ್ಪಹಾನ್ ಮೇಲೆ ದಾಳಿ ಯಶಸ್ವಿಯಾಗಿದೆ. ಎಲ್ಲ ಯುದ್ಧ ವಿಮಾನಗಳು ಸುರಕ್ಷಿತವಾಗಿ ತಮ್ಮ ನೆಲೆಗೆ ಮರಳುತ್ತಿವೆ. ಈಗ ಯುದ್ಧ ವಿಮಾನಗಳು ಇರಾನಿನ ವಾಯುಪ್ರದೇಶ ತೊರೆಯುತ್ತಿವೆ. ಈಗ ಶಾಂತಿಯ ಸಮಯ ಎಂದು ಟ್ರಂಪ್ ಹೇಳಿದ್ದಾರೆ.
ಇತ್ತ ಪರಮಾಣು ಕೇಂದ್ರ ಫೋರ್ಡೋ ಮೇಲಿನ ದಾಳಿಯನ್ನು ಇರಾನ್ನ ದೃಢಪಡಿಸಿದೆ. ಫೋರ್ಡೋ ಮೇಲೆ ಆರು ಅಮೆರಿಕನ್ ಬಾಂಬರ್ಗಳು ದಾಳಿ ಮಾಡಿವೆ. ನತಾಂಝ್ ಮತ್ತು ಎಸ್ಪಹಾನ್ ಮೇಲೆ ಅಮೆರಿಕನ್ ಜಲಾಂತರ್ಗಾಮಿ ನೌಕೆಗಳು 30 ಟೊಮಾಹಾಕ್ ಕ್ಷಿಪಣಿಗಳೊಂದಿಗೆ ದಾಳಿ ಮಾಡಿದ್ದು, ಇರಾನ್ನಿಂದ 400 ಮೈಲುಗಳಷ್ಟು ದೂರದಲ್ಲಿ ದಾಳಿ ನಡೆದಿದೆ. ಇರಾನ್ ಮೇಲೆ ಅಮೆರಿಕ ದಾಳಿ ಬೆನ್ನಲ್ಲೇ ಇರಾನ್ನಲ್ಲಿರುವ ಮೂರು ಪರಮಾಣು ತಾಣಗಳನ್ನು ಈಗಾಗಲೇ ಸ್ಥಳಾಂತರಿಸಲಾಗಿದೆ. ಪರಮಾಣು ಸೋರಿಕೆಯ ಯಾವುದೇ ಬೆದರಿಕೆ ಇಲ್ಲ ಎಂದು ಐಆರ್ಐಬಿ ಎಂಬ ಇರಾನ್ ಸರ್ಕಾರಿ ಚಾನೆಲ್ ಹೇಳಿದೆ.
ಇರಾನ್ ಮೇಲಿನ ದಾಳಿ ಬೆನ್ನಲ್ಲೇ ಅಮೆರಿಕ ವಾಯುನೆಲೆಯಲ್ಲಿ ಅಲರ್ಟ್ ಆಗಿದೆ. ಭಾರತೀಯ ಕಾಲಮಾನ ಪ್ರಕಾರ ಬೆಳಗ್ಗೆ 7.30ಕ್ಕೆ ದೇಶವನ್ನು ಉದ್ದೇಶಿಸಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾಷಣ ಮಾಡಲಿದ್ದಾರೆ. ಪರಮಾಣು ನೆಲೆಗಳ ಮೇಲಿನ ದಾಳಿ ಬಗ್ಗೆ ಮಾಹಿತಿ ನೀಡಲಿದ್ದಾರೆ.
























