ಬಾಡಿ ಫಿಟ್‌ನೆಸ್ ಕಾಪಾಡಿಕೊಳ್ಳುವುದಕ್ಕೂ ಬೆಸ್ಟ್ ಸೊಲ್ಯೂಶನ್ ಯೋಗ

ಇಂದು ಅಂತಾರಾಷ್ಟ್ರೀಯ ಯೋಗ ದಿನ

ಯೋಗ ಮನುಷ್ಯನ ದೇಹಕ್ಕೆ ಮಾತ್ರವಲ್ಲ ಮನಸ್ಸಿನ ಮೇಲೆಯೂ ಧನಾತ್ಮಕ ಪರಿಣಾಮ ಬೀರುವ ಒಂದು ಸಂಗತಿ. ಭಾರತ ಪರಂಪರೆಯಲ್ಲೇ ಯೋಗಕ್ಕೆ ವಿಶೇಷ ಮಾನ್ಯತೆ ಇರುವುದು ಅದರ ಪ್ರಾಚೀನತೆಗೆ ಮತ್ತು ನಮ್ಮ ಪೂರ್ವಜರ ಜ್ಞಾನಕ್ಕೆ ಹಿಡಿದ ಕೈಗನ್ನಡಿ.

ಯೋಗ ಬಲ್ಲವನಿಗೆ ರೋಗದ ಭಯ ಇಲ್ಲ ಎನ್ನುವ ಮಾತು ಸತ್ಯ. ದೇಹಕ್ಕೆ ಬಾಧಿಸುವ ಹಲವಾರು ರೋಗಗಳನ್ನು ಬಾರದಂತೆ ತಡೆಯುವ, ಬಂದರೂ ಅದನ್ನು ಶಮನ ಮಾಡುವ ಶಕ್ತಿ ಯೋಗಕ್ಕೆ ಇದೆ. ಇದಕ್ಕೆ ನಾವು ಅಳವಡಿಸಿಕೊಳ್ಳಬೇಕಾದ ಕ್ರಮ ಎಂದರೆ ಜೀವನದಲ್ಲಿ ಪ್ರತಿನಿತ್ಯ ಯೋಗ ಮಾಡುವುದು.





















































 
 

ಪ್ರಸ್ತುತ ನಾವು ಭೋಗ ಜೀವನದ ಹಿಂದೆ ಬಿದ್ದು ಅತ್ಯಮೂಲ್ಯ ಯೋಗವನ್ನು ಮರೆಯುತ್ತಿದ್ದೇವೆ ಎನ್ನುವುದು ದುರಂತ.

ಭಾರತದ ಯೋಗವನ್ನು ಇಂದು ವಿಶ್ವಕ್ಕೆ ಪರಿಚಯಿಸುವ ಕೆಲಸವನ್ನು ಕಳೆದ ಹನ್ನೊಂದು ವರ್ಷಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಾಡಿದೆ. ವಿಶ್ವ ಸಂಸ್ಥೆಯಲ್ಲಿ ಯೋಗಕ್ಕೆ ಮಾನ್ಯತೆ ಸಿಕ್ಕಿ ಜೂನ್ 21ನ್ನು ಅಂತಾರಾಷ್ಟ್ರೀಯ ಯೋಗ ದಿನ ಎಂಬುದಾಗಿಯೂ ಆಚರಣೆ ಮಾಡಲಾಗುತ್ತಿದೆ. ಇದು ಭಾರತಕ್ಕೆ ಹೆಮ್ಮೆಯ ಸಂಗತಿ.

ಅಂದಿನಿಂದ ವಿಶ್ವದೆಲ್ಲೆಡೆ ಯೋಗ ಒಂದು ಚಳವಳಿಯಂತೆ ನಡೆದು ಬರುತ್ತಿದೆ. ಜೂನ್ 21ರಂದು ವಿಶ್ವದಾದ್ಯಂತ ಹಲವಾರು ಸ್ಥಳಗಳಲ್ಲಿ ಯೋಗ ದಿನವನ್ನು ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಜನರ ದೈನಂದಿನ ಜೀವನದಲ್ಲೂ ಯೋಗದ ಮಹತ್ವದ ಬಗ್ಗೆ ಜಾಗೃತಿ ಹೆಚ್ಚುತ್ತಿದೆ ಎನ್ನುವುದು ಸಂತಸದ ವಿಷಯ. ಯೋಗವನ್ನು ಆರೋಗ್ಯ ಸಂರಕ್ಷಣಾ ವಿಚಾರವಾಗಿ ಮತ್ತು ದೈಹಿಕ ಸದೃಢತೆ, ಮಾನಸಿಕ ಶಾಂತಿಯ ಹಿನ್ನೆಲೆಯಿಂದ ಮತ್ತಷ್ಟು ಪ್ರಚಾರಕ್ಕೆ ತರುವ, ದೈನಂದಿನ ಬದುಕಿನಲ್ಲಿ ಸಂಯೋಜಿಸಿಕೊಳ್ಳುವ ಅಗತ್ಯ ಇದೆ ಎನ್ನುವುದು ಮುಖ್ಯ.

ಪ್ರಸ್ತುತ ನಾವು ಬಾಡಿ ಫಿಟ್‌ನೆಸ್ ಅಥವಾ ದೈಹಿಕ ಸದೃಢತೆ ಕಾಪಾಡಿಕೊಳ್ಳಲು ಜಿಮ್ ಮೊರೆ ಹೋಗುತ್ತೇವೆ. ಅದೇನೇನೋ ಕಸರತ್ತುಗಳನ್ನು ಮಾಡುತ್ತೇವೆ. ಆದರೆ ನಮ್ಮ ಪೂರ್ವಜರು ಕೇವಲ ಯೋಗ-ವ್ಯಾಯಾಮದ ಮೂಲಕವೇ ತಮ್ಮನ್ನು ಫಿಟ್ ಆ್ಯಂಡ್ ಫೈನ್ ಆಗಿ ಇರಿಸಿಕೊಂಡಿದ್ದರು ಎನ್ನುವುದು ನಮ್ಮ ಭವ್ಯ ಪರಂಪರೆಯ ಮೇಲೊಮ್ಮೆ ಕಣ್ಣಾಡಿಸಿದಾಗ ಗೊತ್ತಾಗುತ್ತದೆ.

ಪ್ರಸ್ತುತ ದಿನಮಾನಗಳಲ್ಲಿ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು ಸೇರಿದಂತೆ ಇನ್ನಿತರ ವಲಯಗಳಲ್ಲಿಯೂ ಯೋಗವನ್ನು ಅವುಗಳ ಕಾರ್ಯ ಭಾಗವನ್ನಾಗಿ ಮಾಡಿರುವುದು ಮುಂದಿನ ತಲೆಮಾರುಗಳಿಗೆ ಯೋಗವನ್ನು, ಅದರ ಪ್ರಯೋಜನಗಳನ್ನು ದಾಟಿಸುವ ನಿಟ್ಟಿನಲ್ಲಿ ಉತ್ತಮ ಪ್ರಯತ್ನ ಎಂದೇ ಹೇಳಬಹುದು. ಪ್ರತಿ ಶಾಲೆಯಲ್ಲಿ ಬೋಧನಾ ಕಲಿಕೆಯ ಜೊತೆಗೆ ಯೋಗ ಕಲಿಕೆಯನ್ನು ಕಡ್ಡಾಯ ಮಾಡುವುದು ವಿದ್ಯಾರ್ಥಿಗಳ ದೈಹಿಕ, ಮಾನಸಿಕ ಆರೋಗ್ಯ ಕಾಪಾಡುವುದು, ಮಕ್ಕಳಲ್ಲಿ ಖಿನ್ನತೆ ಕಾಡದಂತೆ ಅವರನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿಯೂ ಉಪಕಾರಿ.

ಮನುಷ್ಯ ವೈಯಕ್ತಿಕ ಪ್ರಜ್ಞೆಯಿಂದ ಸಾರ್ವತ್ರಿಕತೆಯತ್ತ ವಿಕಸನವಾಗಲು ಯೋಗ ಸಹಕಾರಿ. ಯೋಗ ಸಾರ್ವತ್ರಿಕ ಸಾಮರಸ್ಯ, ಶಾಂತಿ, ಏಕತೆಯ ತತ್ವಗಳನ್ನು ಒಳಗೊಂಡಿದೆ ಎನ್ನುವುದು ನಿರ್ವಿವಾದ. ಮನಸ್ಸು ಕೋಪಕ್ಕೆ ತುತ್ತಾದಾಗ ಒಂದಷ್ಟು ಸಮಯ ಕಣ್ಣು ಮುಚ್ಚಿ, ನಿಶ್ಶಬ್ದವಾಗಿ ಕುಳಿತು ನೋಡಿ. ಗೊಂದಲದ ಗೂಡಾಗಿರುವ, ಕೋಪದಿಂದ ಕುದಿಯುತ್ತಿರುವ ಮನಸ್ಸು ನಿರಾಳವಾಗಿ, ನಮ್ಮ ಉದ್ವೇಗ ಕಡಿಮೆಯಾಗುತ್ತದೆ. ಈ ನಿರಾಳತೆಯನ್ನು ನೀಡುವ ಕೆಲಸವನ್ನು ಪ್ರತಿನಿತ್ಯ ನಾವು ಯೋಗ ಜೀವನವನ್ನು ಅಳವಡಿಸಿಕೊಂಡಾಗ ನಮ್ಮದಾಗುತ್ತದೆ ಎನ್ನುವುದು ಸತ್ಯ.

ನಮ್ಮ ಸಂಕಷ್ಟಕರ ಸಮಯದಲ್ಲಿ ಒಂದು ರೀತಿಯ ಸ್ಥಿರ, ಆಂತರಿಕ ಬಲ ಹೆಚ್ಚಿಸಿಕೊಳ್ಳುವ ದಾರಿಯೆಂದರೆ ಯೋಗ. ದೇಹ ಬಲದ ಜೊತೆಗೆ ಮನಸ್ಸಿನ ಏಕಾಗ್ರತೆಯನ್ನು ಹೆಚ್ಚಿಸುವುದಕ್ಕೂ ನಿರಂತರ ಯೋಗಾಭ್ಯಾಸದಿಂದ ಸಾಧ್ಯ.

ಇಂದಿನಿಂದಲೇ ‌ನಾವೆಲ್ಲರೂ ಪ್ರತಿನಿತ್ಯ ಯೋಗದ ಜೊತೆಗೆ ದಿನವನ್ನು ಆರಂಭ ಮಾಡುವ ಸಂಕಲ್ಪ ಮಾಡೋಣ. ಆ ಮೂಲಕ ಆರೋಗ್ಯಪೂರ್ಣ ಸಮಾಜವನ್ನು ನಿರ್ಮಾಣ ಮಾಡುವ ಸಂಕಲ್ಪ ಮಾಡೋಣ. ನಾವೂ ಯೋಗ ಮಾಡೋಣ. ನಮ್ಮವರಿಗೂ ಯೋಗದಿಂದಾಗುವ ಪ್ರಯೋಜನಗಳ ಬಗ್ಗೆ ಅರಿವು ಮೂಡಿಸೋಣ. ಮುಂದಿನ ತಲೆಮಾರಿಗೆ ಯೋಗದ ಬಗೆಗಿನ ಜ್ಞಾನ ದಾಟಿಸುವ ಸದುದ್ದೇಶದ ಜೊತೆಗೆ ಯೋಗವನ್ನು ಜೀವನದ ಭಾಗವಾಗಿಸಿಕೊಳ್ಳೋಣ.

ಎಲ್ಲರಿಗೂ ಅಂತಾರಾಷ್ಟ್ರೀಯ ಯೋಗ ದಿನದ ಶುಭಾಶಯಗಳು

ಭುವನ ಬಾಬು ಪುತ್ತೂರು

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top