ಮೂರು ಕಾರುಗಳು ಸರಣಿ ಡಿಕ್ಕಿ ; ಶಾಸಕರು ಪಾರು
ಶಿವಮೊಗ್ಗ : ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಸಮೀಪದ ಕೋಡೂರಿನಲ್ಲಿ ನಡೆದಿದೆ. ಶುಕ್ರವಾರ ಸಂಜೆ ಗುರುರಾಜ ಗಂಟಿಹೊಳೆ ಉಡುಪಿ ಕಡೆಗೆ ತೆರಳುವ ವೇಳೆ ಅಪಘಾತ ನಡೆದಿದೆ.
ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರ ಕಾರು ಸೇರಿ ಮೂರು ಕಾರುಗಳು ಶುಕ್ರವಾರ ಸಂಜೆ ಕೋಡೂರು ಬಳಿ ಅಪಘಾತಕ್ಕೀಡಾಗಿವೆ. ಶಾಸಕರ ಕಾರಿನ ಮುಂದೆ ಚಲಿಸುತ್ತಿದ್ದ ಕಾರಿನ ಮುಂದೆ ಜಾನುವಾರು ಅಡ್ಡ ಬಂದ ಕಾರಣ ಅವಘಡ ನಡೆದಿದೆ. ಸರಣಿ ಅಪಘಾತದಲ್ಲಿ ಶಾಸಕರ ಕಾರು ಸೇರಿದಂತೆ 3 ಕಾರುಗಳು ಜಖಂಗೊಂಡಿದ್ದು, ಅದೃಷ್ಟವಶಾತ್ ಕಾರಿನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ಅಪಾಯ ಸಂಭವಿಸಿಲ್ಲ. ರಿಪ್ಪನ್ ಪೇಟೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದ ಬಳಿಕ ಶಾಸಕ ಗಂಟಿಹೊಳೆ ಅವರು ಉಡುಪಿಯತ್ತ ಪ್ರಯಾಣ ಮೊಟಕುಗೊಳಿಸಿ ಮತ್ತೊಂದು ಕಾರಿನಲ್ಲಿ ಬೈಂದೂರಿನ ಕಡೆಗೆ ತೆರಳಿದ್ದಾರೆ ಎನ್ನಲಾಗಿದೆ.
























