ಜಮೀನಿನ ನಕ್ಷೆ ಮಾಡಿಕೊಡಲು ಲಂಚ ಸ್ವೀಕರಿಸಿದ ಸರ್ವೆಯರ್‌, ದಲ್ಲಾಳಿ ಲೋಕಾಯುಕ್ತ ಬಲೆಗೆ

ಎರಡು ತುಂಡು ಜಮೀನುಗಳ ನಕ್ಷೆ, ಪ್ರಾಪರ್ಟಿ ಕಾರ್ಡ್‌ಗೆ 41,500 ರೂ.ಲಂಚ ಪಡೆದಿದ್ದ ಸರ್ವೆಯರ್‌

ಮಂಗಳೂರು: ಜಮೀನಿನ ಸಿಂಗಲ್ ಸೈಟ್ ನಕ್ಷೆ ಹಾಗೂ ಪ್ರಾಪರ್ಟಿ ಕಾರ್ಡ್ ಮಾಡಿಕೊಡಲು ಲಂಚ ಸ್ವೀಕರಿಸಿದ ಭೂಮಾಪನ ಇಲಾಖೆಯ ಸರ್ವೆಯರ್‌ ಮತ್ತು ಈತನಿಗೆ ಸಹಕರಿಸಿದ ದಲ್ಲಾಳಿಯನ್ನು ಲೋಕಾಯುಕ್ತ ಪೊಲೀಸರು ಲಂಚದ ಹಣ ಪಡೆಯುತ್ತಿರುವಾಗಲೇ ಬಲೆಬೀಸಿ ಬಂಧಿಸಿದ್ದಾರೆ.

ವ್ಯಕ್ತಿಯೊಬ್ಬರು ತನ್ನ ಹಾಗೂ ತನ್ನ ತಾಯಿಯ ಹೆಸರಿನಲ್ಲಿರುವ ಕಂಕನಾಡಿ ಮತ್ತು ಬಜಾಲ್ ಗ್ರಾಮದ ಜಮೀನಿನ ಸಿಂಗಲ್ ಸೈಟ್ ನಕ್ಷೆ ಹಾಗೂ ಪ್ರಾಪರ್ಟಿ ಕಾರ್ಡ್ ಮಾಡಿಸಲು ಕಳೆದ ಫೆಬ್ರವರಿಯಲ್ಲಿ ಮಂಗಳೂರು ಯು.ಪಿ.ಒ.ಆರ್ ಕಚೇರಿಗೆ ಅರ್ಜಿ ಸಲ್ಲಿಸಲಾಗಿತ್ತು. ಬಳಿಕ ಸರ್ವೆಯರ್ ನಂದೀಶ್ 2025ರ ಏಪ್ರಿಲ್‌ನಲ್ಲಿ ಸರ್ವೆ ನಡೆಸಿ ಲಂಚಕ್ಕೆ ಬೇಡಿಕೆ ಸಲ್ಲಿಸಿದ್ದರು. 6,500 ರೂ. ಸರ್ವೆಯರ್ ಸ್ವತಃ ಸ್ವೀಕರಿಸಿದ್ದಲ್ಲದೆ, 20,000 ರೂ.ವನ್ನು ದಲ್ಲಾಳಿ ಬಿಜೈಯ ದಿವಾಕರ್ ಮೂಲಕ ಪಡೆದುಕೊಂಡಿದ್ದರು.





















































 
 

ನಂತರ ಸರ್ವೆಯರ್ ನಂದೀಶ್ ಎರಡೂ ಗ್ರಾಮದ ಎರಡೂ ಸ್ಥಳಗಳ ಸಿಂಗಲ್ ಸೈಟ್ ನಕ್ಷೆ ಮತ್ತು ಪ್ರಾಪರ್ಟಿ ಕಾರ್ಡ್ ನೀಡಲು ಹೆಚ್ಚುವರಿಯಾಗಿ 18,000 ರೂ. ನೀಡುವಂತೆ ಒತ್ತಾಯಿಸಿದ್ದರು. ಈ ಬಗ್ಗೆ ಸಾಕ್ಷಿಯೊಂದಿಗೆ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಸರ್ವೆಯರ್ ನಂದೀಶ್ ಇದೇ ತಿಂಗಳಲ್ಲಿ ಮತ್ತೆ 15,000 ರೂ.ವನ್ನು ದಿವಾಕರ್ ಮೂಲಕ ಪಡೆದುಕೊಂಡಿದ್ದರು. ಹೀಗೆ ಒಟ್ಟು 41,500 ರೂ.ವನ್ನು ಪಡೆದುಕೊಂಡು ಬುಧವಾರ ಮತ್ತೆ 2,000 ರೂ. ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಕುಮಾರಚಂದ್ರ, ಉಪಾಧೀಕ್ಷಕರಾದ ಡಾ.ಗಾನ ಪಿ. ಕುಮಾರ್ ಮತ್ತು ಸುರೇಶ್ ಕುಮಾರ್ ಪಿ., ಪೊಲೀಸ್ ನಿರೀಕ್ಷಕರಾದ ಭಾರತಿ ಜಿ. ಮತ್ತು ಚಂದ್ರಶೇಖರ್ ಕೆ.ಎನ್. ಪಾಲ್ಗೊಂಡಿದ್ದರು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top