ಪುತ್ತೂರು: ರಾಜ್ಯ ಕಾಂಗ್ರೆಸ್ ಸರಕಾರದ ಆಡಳಿತ ವೈಫಲ್ಯ, ಭ್ರಷ್ಟತೆ ಹಾಗೂ ಜನ ವಿರೋಧಿ ನೀತಿ ವಿರೋಧಿಸಿ ದ.ಕ. ಜಿಲ್ಲೆಯ 223 ಹಾಗೂ ಪುತ್ತೂರು ತಾಲೂಕಿನ 22 ಗ್ರಾಮ ಪಂಚಾಯಿತಿ, ನಗರ ಪಂಚಾಯಿತಿ ಹಾಗೂ ಪಟ್ಟಣ ಪಂಚಾಯಿತಿ ಎದುರು ಏಕಕಾಲದಲ್ಲಿ ಭಾರತೀಯ ಜನತಾ ಪಾರ್ಟಿ ವತಿಯಿಂದ ಬೃಹತ್ ಪ್ರತಿಭಟನೆ ಜೂ.23 ರಂದು ನಡೆಯಲಿದೆ ಎಂದು ಪುತ್ತೂರು ಮಾಜಿ ಶಾಸಕ ಸಂಜೀವ ಮಠಂದೂರು ತಿಳಿಸಿದ್ದಾರೆ.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕಟ್ಟಡ ಕಟ್ಟಲು ಬಳಕೆ ಮಾಡುವ ಕೆಂಪು ಕಲ್ಲುಗಳನ್ನು ಗಣಿ ಇಲಾಖೆಗೆ ಸೇರಿಸುವ ಹಾಗಿಲ್ಲ. ಆದರೂ ರಾಜ್ಯ ಸರಕಾರ ಗಣಿ ಇಲಾಖೆಗೆ ಸೇರಿಸಿ ಕೆಂಪು ಕಲ್ಲು ಗಣಿಗಾರಿಕೆಯನ್ನು ನಿಲ್ಲಿಸಿದೆ. ಜತೆಗೆ ಮರಳು ಸಿಗದಂತೆ ಮಾಡಿದೆ. ಪರಿಣಾಮ ಅತ್ತ ಕಾರ್ಮಿಕರಿಗೆ ಉದ್ಯೋಗ ಇಲ್ಲದ ಪರಿಸ್ಥಿತಿ ನಿರ್ಮಿಸಿದರೆ, ಇತ್ತ ಕಲ್ಲು, ಮರಳಿನ ಅಭಾವದಿಂದ ಅರ್ಧ ಮನೆ ನಿರ್ಮಿಸಿ ಪೂರ್ಣಗೊಳಿಸದೇ ಜನ ಹತಾಶರಾಗಿದ್ದು, ರಾಜ್ಯದಲ್ಲಿ ತುಘಲಕ್ ಸರಕಾರ ಇದಕ್ಕೆ ಕಾರಣವಾಗಿದೆ ಎಂದು ಆರೋಪಿಸಿದರು.
ಹಿಂದೆ ಗ್ರಾಮೀಣ ಭಾಗದಲ್ಲಿ 9/11 ಕುರಿತ ಕೆಲಸ ಕಾರ್ಯಗಳನ್ನು ಪಂಚಾಯಿತಿಯೇ ಮಾಡುತ್ತಿದ್ದು, ಗ್ರಾಮೀಣಾಭಿವೃದ್ಧಿ ಕೆಲಸವನ್ನು ನಗರಾಭಿವೃದ್ಧಿಗೆ ವಹಿಸಿಕೊಟ್ಟಿದೆ. ಪರಿಣಾಮ ನಗರ ಯೋಜನಾ ಪ್ರಾಧಿಕಾರದಲ್ಲಿ ಸ್ಟಾಫ್ ಕೊರತೆಯಿದ್ದು, ಸಾವಿರಾರು ಅರ್ಜಿಗಳು ಬಾಕಿಯಾಗಿವೆ. ಪರಿಣಾಮ ಜನಸಾಮಾನ್ಯರು ಭವಣೆ ಪಡುವಂತಾಗಿದೆ. ಇದಕ್ಕೆ ರಾಜ್ಯ ಸರಕಾರ ನೇರ ಕಾರಣವಾಗಿದೆ ಎಂದು ಆರೋಪಿಸಿದರು.
ಮೇ ತಿಂಗಳಿನಲ್ಲಿ ಸುರಿದ ಕುಂಭದ್ರೋಣ ಮಳೆಗೆ ಉಪ್ಪಿನಂಗಡಿ ಸಹಿತ ಐದು ಗ್ರಾಪಂ ವ್ಯಾಪ್ತಿಯಲ್ಲಿ ಧರೆ ಕುಸಿದು ಮನೆಗಳಿಗೆ ಹಾನಿಯಾಗಿದ್ದು, ಇದು ಮಡಿಕೇರಿಯಲ್ಲಿ ನಡೆದ ಘಟನೆ ತರ ಇದೆ. ಆದರೆ ಆಡಳಿತ ವ್ಯವಸ್ಥೆ ಸಂತ್ರಸ್ತರಿಗೆ ಮನೆ ಬಿಟ್ಟು ಹೋಗುವಂತೆ ಮಾತ್ರ ತಿಳಿಸಿದ್ದು, ಕಾಳಜಿ ಕೇಂದ್ರವನ್ನು ತೆರೆಯಲು ಕ್ರಮ ಕೈಗೊಂಡಿಲ್ಲ. ಹಿಂದೆ ಬಿಜೆಪಿ ಸರಕಾರ ಇರುವಾಗ ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ಕಾಳಜಿ ಕೇಂದ್ರವನ್ನು ತೆರೆದಿದೆ ಎಂದು ತಿಳಿಸಿದರು.
ಈಗಿನ ಸರಕಾರ ಪಂಚಾಯತ್ ರಾಜ್ ಕಾಯ್ದೆಗೆ ಬದ್ಧರಾಗಿರದೆ ಮೇ ತಿಂಗಳಿನಲ್ಲಿ ತಾಲೂಕು, ಜಿಲ್ಲಾ ಪಂಚಾಯಿತಿಗೆ ಚುನಾವಣೆ ಮಾಡುತ್ತೇವೆ ಎಂದು ಉಚ್ಛ ನ್ಯಾಯಾಲಯಕ್ಕೆ ಭರವಸೆ ಕೊಟ್ಟು ಚುನಾವಣೆ ನಡೆಸುವಲ್ಲಿ ವೃಥಾ ಕಾಲಹರಣ ಮಾಡುತ್ತಿದೆ. ಈ ಮೂಲಕ ತಮ್ಮದೇ ಪಕ್ಷದವರು ದಿ.ರಾಜೀವ ಗಾಂಧಿಯವರು ಕೇಂದ್ರದಲ್ಲಿ ಮಂಜೂರು ಮಾಡಿದ ಪಂಚಾಯತ್ ರಾಜ್ ಕಾಯ್ದೆಗೆ ತಿಲಾಂಜಲಿ ನೀಡುವ ಕಾರ್ಯ ರಾಜ್ಯ ಸರಕಾರ ಮಾಡುತ್ತಿದೆ. ಪರಿಣಾಮ ಪಂಚಾಯತ್ ರಾಜ್ ವ್ಯವಸ್ಥೆಗೆ ಗೌರವವಿಲ್ಲವೇ ಎಂದು ಸಾರ್ವಜನಿಕರು ಪ್ರಶ್ನಿಸುವಂತಾಗಿದೆ ಎಂದು ತಿಳಿಸಿದರು.
ರಾಜ್ಯ ಸರಕಾರ ಗ್ಯಾರಂಟಿ ಯೋಜನೆ ಮೂಲಕ ರೈತರ ಬದುಕಿನಲ್ಲಿ ಚೆಲ್ಲಾಟವಾಡುತ್ತಿದ್ದು, ಬಿಜೆಪಿ ಸರಕಾರ ನೀಡುತ್ತಿದ್ದ ರೈತ ವಿದ್ಯಾನಿಧಿ, ಕಿಸಾನ್ ಸಮ್ಮಾನ್ ನಿಧಿ, ಫಸಲು ವಿಮೆಯನ್ನು ಕಡಿಮೆ ಮಾಡಿದೆ. ಸಾಲದಕ್ಕೆ ರೈತರಿಗೆ ನೀಡುವ ಹಾಲಿನ ಸಹಾಯಧನವನ್ನು ಆರು ತಿಂಗಳು ಕಳೆದರೂ ಪಾವತಿ ಮಾಡುತ್ತಿಲ್ಲ, ರೈತರ ಪಂಪ್ ಶೆಡ್ ಜೋಡಣೆಗೆ ಪರಿವರ್ತಕಗಳಿಗೆ ಮೂರು ಲಕ್ಷ ದರ ನಿಗದಿ ಮಾಡಿ ರೈತರ ಪಾಲಿಕೆ ಕಂಟಕವಾಗಿ ಪರಿಣಮಿಸಿದೆ ಎಂದು ಆರೋಪಿಸಿದರು.
ರಾಜ್ಯ ಸರಕಾರದ ಭ್ರಷ್ಟಾಚಾರ ಎಲ್ಲಿ ತನಕ ನಡೆದಿದೆ ಎಂದರೆ 94 ಸಿ ಯಿಂದ ಹಿಡಿದು ವಾಲ್ಮೀಕಿ ನಿಗಮದ ತನಕ ಬಹಿರಂಗವಾಗಿದ್ದು, ದಕ್ಷಿಣ ಕನ್ನಡದಲ್ಲಿ ಮತೀಯ ಸಂಘರ್ಷಕ್ಕೆ ಎಡೆಮಾಡಿಕೊಟ್ಟು ಪೊಲೀಸ್ ಇಲಾಖೆ ಮೂಲಕ ದ್ವೇಷ ರಾಜಕಾರಣ ಮಾಡುತ್ತಿದೆ. ಅಮಾಯಕ ಮನೆಗೆ ರಾತ್ರಿ ವೇಳೆ ಪೊಲೀಸ್ ದಾಳಿ ನಡೆಯುತ್ತಿದ್ದು, ಒಂದು ವರ್ಗದ ಜನತೆಯನ್ನು ಸಂತುಷ್ಟಗೊಳಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ಎಸ್ ಟಿ ಮೋರ್ಚಾ ಜಿಲ್ಲಾ ಅಧ್ಯಕ್ಷ ಹರೀಶ್ ಬಿಜತ್ರೆ, ನಗರ ಮಂಡಲ ಪ್ರಧಾನ ಕಾರ್ಯದರ್ಶಿ ಅನಿಲ್ ತೆಂಕಿಲ, ನಗರಸಭೆ ಉಪಾಧ್ಯಕ್ಷ ಬಾಲಚಂದ್ರ ಕೆಮ್ಮಿಂಜೆ ಉಪಸ್ಥಿತರಿದ್ದರು.
























