ಭಾರತೀಯರನ್ನು ಕರೆತರಲು ಆಪರೇಷನ್ ಸಿಂಧು ಕಾರ್ಯಾಚರಣೆ
ನವದೆಹಲಿ: ಯುದ್ಧಪೀಡಿತ ಇರಾನ್ನಲ್ಲಿ ಸಿಲುಕಿಕೊಂಡಿದ್ದ 110 ಭಾರತೀಯ ವಿದ್ಯಾರ್ಥಿಗಳನ್ನು ಇಂದು ಭಾರತಕ್ಕೆ ಕರೆತರಲಾಗಿದೆ. ಇರಾನ್ನಿಂದ ಸ್ಥಳಾಂತರಿಸಲಾದ ಮೊದಲ ಗುಂಪಿನ ವಿದ್ಯಾರ್ಥಿಗಳು ತಡರಾತ್ರಿ ದೆಹಲಿಗೆ ವಿಮಾನ ಹತ್ತಿದ್ದು, ಇಂದು ಮುಂಜಾನೆ ಬಂದಿಳಿದಿದ್ದಾರೆ. ವಿಮಾನ ಮೂರು ಗಂಟೆಗಳ ಕಾಲ ವಿಳಂಬವಾಗಿ ಹೊರಟಿತ್ತು.
ಈ ವಿದ್ಯಾರ್ಥಿಗಳನ್ನು ಮೊದಲ ಹಂತದಲ್ಲಿ ಇರಾನ್ನಿಂದ ಅರ್ಮೇನಿಯಾ ಮತ್ತು ದೋಹಾಗೆ ಸ್ಥಳಾಂತರಿಸಲಾಗಿತ್ತು. ಇಂದು ಅವರ ವಿಮಾನ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದೆ. ಅವರಲ್ಲಿ ಹೆಚ್ಚಿನವರು (90) ಜಮ್ಮು ಮತ್ತು ಕಾಶ್ಮೀರದವರು. ಇವರೆಲ್ಲ ಉರ್ಮಿಯಾ ವೈದ್ಯಕೀಯ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು. ಇರಾನ್ನಲ್ಲಿರುವ ಭಾರತೀಯರನ್ನು ಕರೆತರಲು ಭಾರತ ಸರ್ಕಾರ ಆಪರೇಷನ್ ಸಿಂಧು ಹೆಸರಿನಲ್ಲಿ ಕಾರ್ಯಾಚರಣೆ ಪ್ರಾರಂಭಿಸಿದೆ.
ತಮ್ಮನ್ನು ಸುರಕ್ಷಿತವಾಗಿ ಕರೆತಂದಿರುವ ಕೇಂದ್ರ ಸರಕಾರಕ್ಕೆ ಈ ವಿದ್ಯಾರ್ಥಿಗಳು ಧನ್ಯವಾದ ಹೇಳಿದ್ದಾರೆ. ಆದರೆ ದಿಲ್ಲಿಯಿಂದ ಜಮ್ಮು-ಕಾಶ್ಮೀರಕ್ಕೆ ಕರೆದೊಯ್ಯಲು ಅಲ್ಲಿನ ರಾಜ್ಯ ಸರ್ಕಾರ ಮಾಡಿದ ವ್ಯವಸ್ಥೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೋದಿ ಸರ್ಕಾರ ನಮ್ಮನ್ನು ಸುರಕ್ಷಿವಾಗಿ ಕರೆದುಕೊಂಡು ಬಂದಿದೆ. ಆದರೆ ಜಮ್ಮು-ಕಾಶ್ಮೀರ ಸರ್ಕಾಸರ ದೀರ್ಘ ಪ್ರಯಾಣಕ್ಕೆ ಸುರಕ್ಷಿತವಲ್ಲದ ಬಸ್ಗಳ ವ್ಯವಸ್ಥೆ ಮಾಡಿದೆ ಎಂದು ಓರ್ವ ವಿದ್ಯಾರ್ಥಿ ಹೇಳಿಕೊಂಡಿರುವುದು ವೈರಲ್ ಆಗಿದೆ.
ಇರಾನ್ ಪ್ರಸ್ತುತ ಇಸ್ರೇಲ್ನೊಂದಿಗೆ ಯುದ್ಧದಲ್ಲಿ ತೊಡಗಿರುವುದರಿಂದ ಭಾರತೀಯ ವಿದ್ಯಾರ್ಥಿಗಳ ಕುಟುಂಬಗಳು ಸರ್ಕಾರದಿಂದ ಕ್ಷಿಪ್ರ ಸಹಾಯವನ್ನು ಬಯಸುತ್ತಿವೆ. ಕಾಶ್ಮೀರದಲ್ಲಿ ಇದರ ಬಗ್ಗೆ ಭಾರಿ ಪ್ರತಿಭಟನೆಗಳು ನಡೆದಿವೆ. ಇಲ್ಲಿಂದಲೇ ಗರಿಷ್ಠ ಸಂಖ್ಯೆಯ ವಿದ್ಯಾರ್ಥಿಗಳು ಇರಾನ್ಗೆ ಕಲಿಕೆಗೆ ಹೋಗುತ್ತಿದ್ದಾರೆ. ಇರಾನ್ನಲ್ಲಿ 13,000ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳಿದ್ದಾರೆ ಎಂದು ವರದಿಗಳು ಹೇಳುತ್ತವೆ. ಅವರಲ್ಲಿ ಹೆಚ್ಚಿನವರು ವೈದ್ಯಕೀಯ ಪದವಿ ಕಲಿಯುತ್ತಿದ್ದಾರೆ. ವಿದ್ಯಾರ್ಥಿಗಳಲ್ಲದೆ, ಯಾತ್ರಿಕರು ಸೇರಿದಂತೆ ಅನೇಕ ಭಾರತೀಯ ಪ್ರಜೆಗಳು ಇರಾನ್ನಲ್ಲಿ ಸಿಲುಕಿಕೊಂಡಿದ್ದಾರೆ. ಭಾನುವಾರ, ಟೆಹ್ರಾನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತುರ್ತು ಸಹಾಯವಾಣಿಯನ್ನು ಸ್ಥಾಪಿಸಿತು ಮತ್ತು ಭಾರತೀಯರನ್ನು ತಕ್ಷಣವೇ ಸ್ಥಳಾಂತರಿಸುವಂತೆ ಒತ್ತಾಯಿಸಿತು.
ಕಳೆದ ವಾರ ಇರಾನ್ನ ಟೆಲ್ ಅವಿವ್ ಪರಮಾಣು ತಾಣಗಳ ವಿರುದ್ಧ ‘ಆಪರೇಷನ್ ರೈಸಿಂಗ್ ಲಯನ್’ ಎಂದು ಕರೆಯಲಾದ ದಾಳಿಯನ್ನು ಇಸ್ರೇಲ್ ಪ್ರಾರಂಭಿಸಿದೆ. ಆಗಿನಿಂದ ಇರಾನ್ ಮತ್ತು ಇಸ್ರೇಲ್ ನಡುವಿನ ಉದ್ವಿಗ್ನತೆ ಹಲವು ಪಟ್ಟು ಹೆಚ್ಚಾಗಿದೆ. ಇಸ್ರೇಲ್ನ ಹಲವಾರು ನಗರಗಳ ಮೇಲೆ ಇರಾನ್ ಕ್ಷಿಪಣಿಗಳು ಮತ್ತು ಡ್ರೋನ್ಗಳ ದಾಳಿಯೊಂದಿಗೆ ಪ್ರತಿಕ್ರಿಯಿಸಿದೆ. ಇರಾನ್ನಲ್ಲಿ 400ಕ್ಕೂ ಹೆಚ್ಚು ಜನ ಯುದ್ಧಕ್ಕೆ ಬಲಿಯಾಗಿದ್ದಾರೆ.
























