ಬಂಟ್ವಾಳ : ನಾಪತ್ತೆಯಾಗಿದ್ದ ಯುವಕನ ಮೃತದೇಹ ರಸ್ತೆ ಬದಿಯ ಕೃಷಿ ಹೊಂಡದಲ್ಲಿ ಸೋಮವಾರ ಪತ್ತೆಯಾಗಿದೆ. ಮೃತ ಯುವಕನನ್ನು ಅಮ್ಮುಂಜೆ ಗ್ರಾಮದ ಬೆಂಜನಪದವು ಕಂಬಳ ಮನೆಯ ನಿವಾಸಿ ಜನಾರ್ದನ ಪೂಜಾರಿ ಅವರ ಪುತ್ರ ಸಾಗರ್ (28) ಎಂದು ಗುರುತಿಸಲಾಗಿದೆ. ಕಾಲುಜಾರಿ ಹೊಂಡಕ್ಕೆ ಬಿದ್ದಿರುವ ಸಾಧ್ಯತೆ ಇದೆ ಎಂದು ಸಂಶಯಿಸಲಾಗಿದೆ.
ಪೈಟಿಂಗ್ ಕೆಲಸ ಮಾಡಿಕೊಂಡಿದ್ದ ಸಾಗರ್ ತಾಯಿಯ ಜೊತೆ ಬಿ.ಸಿ.ರೋಡಿಗೆ ಔಷಧಿ ತರಲೆಂದು ಅಟೋರಿಕ್ಷಾದಲ್ಲಿ ತೆರಳಿದ್ದರು. ವಾಪಾಸು ಬರುವಾಗ ಬೆಂಜನಪದವು ಮೂರು ಮಾರ್ಗ ಎಂಬಲ್ಲಿ ಸಾಗರ್ ಇಳಿದಿದ್ದು, ಬಳಿಕ ಮನೆಗೆ ಬಾರದೆ ನಾಪತ್ತೆಯಾಗಿದ್ದರು. ಈ ಬಗ್ಗೆ ಸೋಮವಾರ ಬೆಳಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ವಿದ್ಯಾನಗರ ಹೈಸ್ಕೂಲ್ ರೋಡ್ ಬಳಿ ನೀರು ತುಂಬಿದ್ದ ಹೊಂಡದಲ್ಲಿ ಮೃತದೇಹ ಕಂಡುಬಂದಿದ್ದು, ಈ ಬಗ್ಗೆ ಮಾಹಿತಿ ಪಡೆದ ತಂದೆ ಜನಾರ್ದನ ಪೂಜಾರಿ ಸ್ಥಳಕ್ಕೆ ತೆರಳಿ ಸಾಗರ್ ಮೃತದೇಹ ಎಂದು ದೃಢಪಡಿಸಿದ್ದಾರೆ. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.