ಇರಾನ್‌ನಲ್ಲಿ ಆಪತ್ತಿನಲ್ಲಿದ್ದಾರೆ ಹತ್ತು ಸಾವಿರಕ್ಕೂ ಅಧಿಕ ಭಾರತೀಯ ವಿದ್ಯಾರ್ಥಿಗಳು

ಯುದ್ಧ ಉಲ್ಬಣಿಸುವ ಮೊದಲು ಪಾರು ಮಾಡಲು ಮೊರೆ

ಟೆಹ್ರಾನ್‌ : ಇಸ್ರೇಲ್‌ ಮತ್ತು ಇರಾನ್‌ ನಡುವಿನ ಯುದ್ಧ ತೀವ್ರಗೊಳ್ಳುತ್ತಿರುವಂತೆಯೇ ಇರಾನ್‌ನಲ್ಲಿರುವ ಹತ್ತು ಸಾವಿರಕ್ಕೂ ಅಧಿಕ ಭಾರತೀಯ ವಿದ್ಯಾರ್ಥಿಗಳ ಮೇಲೆ ಆತಂಕದ ಕಾರ್ಮೋಡ ಕವಿದಿದೆ. ಯುದ್ಧದ ಪರಿಣಾಮವಾಗಿ ಇರಾನ್‌ ತನ್ನ ವಾಯುಮಾರ್ಗವನ್ನು ಪೂರ್ತಿಯಾಗಿ ಮುಚ್ಚಿದೆ. ಅಲ್ಲಿಂದ ಯಾವುದೇ ವಿಮಾನ ಟೇಕಾಫ್‌ ಆಗುವಂತಿಲ್ಲ ಹಾಗೂ ಇಳಿಯುವಂತಿಲ್ಲ. ಆದರೆ ಭಾರತದ ವಿನಂತಿಯ ಮೇರೆಗೆ ಭೂಮಾರ್ಗವಾಗಿ ಅಂತಾರಾಷ್ಟ್ರೀಯ ಗಡಿ ದಾಟಿ ಹೋಗಲು ಭಾರತೀಯರಿಗೆ ಇರಾನ್‌ ಅನುಮತಿ ನೀಡಿದೆ.

ಅಜರ್‌ಬೈಜಾನ್‌, ಅಫಘಾನಿಸ್ಥಾನ್‌ ಅಥವಾ ತುರ್ಕಮೆನಿಸ್ಥಾನ್‌ ಗಡಿ ಮೂಲಕ ಭಾರತ ತಲುಪಲು ಭಾರತೀಯರಿಗೆ ಇರಾನ್‌ ಅವಕಾಶ ಕಲ್ಪಿಸಿದೆ. ಈ ಹಿನ್ನೆಲೆಯಲ್ಲಿ ಭಾರತ ಈಗ ತನ್ನ ಪ್ರಜೆಗಳನ್ನು ಕರೆತರುವ ಕಾರ್ಯಾಚರಣೆ ಪ್ರಾರಂಭಿಸುವ ತಯಾರಿ ನಡೆಸುತ್ತಿದೆ. ಇರಾನ್‌ ರಾಜಧಾನಿ ಟೆಹ್ರಾನ್‌ನಲ್ಲಿರುವ ಭಾರತೀಯ ದೂತವಾಸ ಭಾರತೀಯ ವಿದ್ಯಾರ್ಥಿಗಳ ಸುರಕ್ಷೆ ಮೇಲೆ ನಿರಂತರ ನಿಗಾ ವಹಿಸಿದೆ. ಕೆಲವು ವಿದ್ಯಾರ್ಥಿಗಳಿಗೆ ತನ್ನ ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ನೀಡಿದೆ. ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ತಾಯ್ನಾಡಿಗೆ ಕಳುಹಿಸುವ ಇತರ ಮಾರ್ಗಗಳನ್ನು ಕೂಡ ಪರಿಶೀಲಿಸಲಾಗುವುದು. ಸದ್ಯಕ್ಕೆ ಎಲ್ಲರೂ ಸುರಕ್ಷಿತರಾಗಿದ್ದಾರೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.





















































 
 

ಟೆಹ್ರಾನ್‌ ಮೇಲೆ ಭಾನವಾರ ರಾತ್ರಿ ಇಸ್ರೇಲ್‌ ನಡೆಸಿದ ದಾಳಿಯಲ್ಲಿ ಒಂದು ಕ್ಷಿಪಣಿ ಟೆಹ್ರಾನ್‌ ವಿಶ್ವವಿದ್ಯಾಲಯದ ಪುರುಷರ ಹಾಸ್ಟೆಲ್‌ಗೆ ಅಪ್ಪಳಿಸಿ ಕಾಶ್ಮೀರ ಮೂಲದ ಇಬ್ಬರು ವಿದ್ಯಾರ್ಥಿಗಳ ಸಹಿತ ಹಲವು ಮಂದಿ ಗಾಯಗೊಂಡಿದ್ದಾರೆ. ಈ ಘಟನೆ ಬಳಿಕ ಇರಾನ್‌ನಲ್ಲಿರುವ ಭಾರತೀಯ ವಿದ್ಯಾರ್ಥಿಗಳು ಯುದ್ಧ ಉಲ್ಬಣಿಸುವ ಮೊದಲು ತಮ್ಮನ್ನು ಕರೆದೊಯ್ಯುವಂತೆ ಮೊರೆಯಿಟ್ಟಿದ್ದಾರೆ.

ನಾವು ಸರಿಯಾಗಿ ನಿದ್ರಿಸದೆ ಮೂರು ದಿನ ಆಯಿತು. ಶುಕ್ರವಾರ ರಾತ್ರಿ 2.30ಕ್ಕೆ ಭೀಕರ ಸ್ಫೋಟದ ಶಬ್ದ ಕೇಳಿಸಿ ಬೆಚ್ಚಿಬಿದ್ದೆವು. ನಾವು ನಮ್ಮ ಅಪಾರ್ಟ್‌ಮೆಂಟ್‌ನ ಬೇಸ್‌ಮೆಂಟ್‌ನಲ್ಲಿ ಆಶ್ರಯ ಪಡೆದಿದ್ದೇವೆ. ಇಲ್ಲಿಂದ ಎಲ್ಲಿಗೂ ಹೋಗುವಂತಿಲ್ಲ. ನಾನು ಕಲಿಯುತ್ತಿರುವ ಟೆಹ್ರಾನ್‌ ವಿವಿಯೊಂದರಲ್ಲೇ ಸುಮಾರು 350 ಭಾರತೀಯ ವಿದ್ಯಾರ್ಥಿಗಳಿದ್ದಾರೆ ಎಂದು ಕಾಶ್ಮೀರದ ಇಮ್ತಿಸಾಲ್‌ ಮೊಯ್ದೀನ್‌ ಎಂಬ ವಿದ್ಯಾರ್ಥಿ ಫೋನ್‌ ಮೂಲಕ ಹೇಳಿಕೊಂಡಿದ್ದಾನೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top