ಪೂಜೆಯ ನೆಪದಲ್ಲಿ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಅರ್ಚಕರು
ಬೆಂಗಳೂರು: ಪೂಜೆ ಮಾಡಿಸುವ ನೆಪದಲ್ಲಿ ಬೆಂಗಳೂರಿನ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಕೇರಳದ ದೇವಸ್ಥಾನದ ಅರ್ಚಕನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಇನ್ನೋರ್ವ ಆರೋಪಿ ಮುಖ್ಯ ಅರ್ಚಕ ತಲೆಮರೆಸಿಕೊಂಡಿದ್ದಾನೆ. ವಾಟ್ಸಪ್‌ನಲ್ಲಿ ಮಹಿಳೆಯ ನಗ್ನ ವಿಡಿಯೋ ರೆಕಾರ್ಡ್ ಮಾಡಿಕೊಂಡು ಕೇರಳ ತೃಶ್ಶೂರ್‌ನ ಪ್ರಸಿದ್ಧ ದೇವಾಲಯದ ಅರ್ಚಕರಿಬ್ಬರು ಮಹಿಳೆಯನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದರು ಎಂದು ಬೆಳ್ಳಂದೂರು ಪೊಲೀಸರು ತಿಳಿಸಿದ್ದಾರೆ. ತೃಶ್ಶೂರ್‌ನ ಪ್ರಸಿದ್ಧ ಪೆರಿಗೊಟ್ಟುಕ್ಕಾರ ದೇವಾಲಯದ ಅರ್ಚಕ ಅರುಣ್ ಬಂಧಿತ ಆರೋಪಿ. ಮುಖ್ಯ ಅರ್ಚಕ ಉನ್ನಿ ದಾಮೋದರನ್ ಪರಾರಿಯಾಗಿದ್ದಾನೆ.
ಮಹಿಳೆಯೊಬ್ಬರು ತನಗೆ ಮಾಟಮಂತ್ರ ಮಾಡಿಸಿದ್ದಾರೆಂದು ಭಾವಿಸಿ ಪರಿಹಾರಕ್ಕಾಗಿ ತೃಶ್ಶೂರ್‌ನ ದೇವಸ್ಥಾನಕ್ಕೆ ತೆರಳಿದ್ದರು. ಈ ವೇಳೆ ದೇವಾಲಯದ ಅರ್ಚಕ ಅರುಣ್ ಪರಿಚಯ ಆಗಿತ್ತು. 24,000 ರೂ. ಕೊಟ್ಟರೆ ಪೂಜೆ ಮಾಡುವುದಾಗಿ ಅರುಣ್ ಹೇಳಿದ್ದ. ಬಳಿಕ ಮಹಿಳೆಯ ನಂಬರ್ ಪಡೆದು ಹೇಳಿದ ದಿನ ಬರುವಂತೆ ತಿಳಿಸಿದ್ದ. ಇದಾದ ಬಳಿಕ ಮಹಿಳೆಗೆ ತಡರಾತ್ರಿಯಲ್ಲಿ ತಾನು ಬೆತ್ತಲೆಯಾಗಿ ನಿಂತು ವಿಡಿಯೋ ಕರೆ ಮಾಡುತ್ತಿದ್ದ. ಅಲ್ಲದೇ ನಿಮಗೆ ಮಾಡಿರುವ ಮಾಟ ಮಂತ್ರ ಪರಿಹಾರ ಆಗಬೇಕಾದರೆ ಸಂಪೂರ್ಣ ಬೆತ್ತಲಾಗುವಂತೆ ಪೀಡಿಸುತ್ತಿದ್ದ.
ಮಹಿಳೆ ಇದನ್ನ ನಿರಾಕರಿಸಿದ್ದಕ್ಕೆ ನಿನ್ನ ಇಬ್ಬರು ಮಕ್ಕಳು ಸಾಯುವ ಹಾಗೆ ರಿಟರ್ನ್ ಪೂಜೆ ಮಾಡ್ತೀನಿ ಅಂತ ಬೆದರಿಕೆ ಹಾಕಿದ್ದ. ಅರ್ಚಕನ ಬೆದರಿಕೆಯಿಂದ ಮಹಿಳೆ ಅವನು ಹೇಳಿದಂತೆ ಮಾಡಿದ್ದರು. ಅರ್ಚಕ ಇದನ್ನು ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದ. ನಂತರ ಆ ವಿಡಿಯೋ ಇಟ್ಟುಕೊಂಡು ಕರೆದಾಗಲೆಲ್ಲ ಕೇರಳಕ್ಕೆ ಬರುವಂತೆ ಒತ್ತಾಯ ಮಾಡ್ತಿದ್ದ. ನೀನು ಬರುವಾಗ ಹೇಳು ರೂಂ ಬುಕ್ ಮಾಡ್ತೀನಿ ಅಂತ ಚಿತ್ರಹಿಂಸೆ ಕೊಟ್ತಿದ್ದ. ಇದರಿಂದ ಬೇಸತ್ತ ಮಹಿಳೆ ಅರ್ಚಕ ಅರುಣ್ ಹಾಗೂ ಮುಖ್ಯ ಅರ್ಚಕ ಉನ್ನಿ ದಾಮೋದರ್ ವಿರುದ್ಧ ಬೆಳ್ಳಂದೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
























