ಇರಾನ್‌ನ ಪರಮೋಚ್ಚ ನಾಯಕ ಖಮೇನಿಯ ಹತ್ಯೆ ಯೋಜನೆಗೆ ಅಮೆರಿಕ ತಡೆ

ಇರಾನ್‌ನ 230, ಇಸ್ರೇಲ್‌ನಲ್ಲಿ 10 ಮಂದಿ ಯುದ್ಧಕ್ಕೆ ಬಲಿ; ಮಿಲಿಟರಿ ನೆಲೆಗಳು, ಉನ್ನತ ನಾಯಕರು ಗುರಿ

ಟೆಲ್‌ ಅವೀವ್‌ : ಇಸ್ರೇಲ್‌ ಮತ್ತು ಇರಾನ್‌ ಯುದ್ಧ ನಾಲ್ಕನೇ ದಿನ ಪ್ರವೇಶಿಸಿದ್ದು, ನಾಲ್ಕು ದಿನಗಳಲ್ಲಿ ಇರಾನ್‌ನ 230 ಮಂದಿ ಹತರಾಗಿದ್ದಾರೆ. ಈ ಪೈಕಿ ಶೆ.90 ಮಂದಿ ಇರಾನ್‌ ನಾಗರಿಕರು ಎಂದು ಅಲ್ಲಿನ ಆರೋಗ್ಯ ಇಲಾಖೆ ಹೇಳಿಕೊಂಡಿದೆ. ಇಸ್ರೇಲ್‌ನಲ್ಲಿ 10 ನಾಗರಿಕರು ಇರಾನ್‌ ದಾಳಿಯಿಂದಾಗಿ ಮೃತಪಟ್ಟಿದ್ದಾರೆ.

ಭಾನುವಾರ ರಾತ್ರಿಯೂ ಉಭಯ ದೇಶಗಳ ನಡುವೆ ತೀವ್ರ ಸಮರ ನಡೆದಿದೆ. ಇರಾನ್‌ನ ತೀರ ಒಳ ಪ್ರದೇಶಗಳಲ್ಲಿರುವ ತೈಲ ಮತ್ತು ಗ್ಯಾಸ್‌ ಸ್ಥಾವರಗಳನ್ನು ಗುರಿ ಮಾಡಿಕೊಂಡು ಇಸ್ರೇಲ್‌ ವೈಮಾನಿಕ ದಾಳಿ ನಡೆಸಿದೆ.



















































 
 

ಇರಾನ್‌ನ ಪರಮೋಚ್ಚ ನಾಯಕ ಅಯಾತುಲ್ಲ ಅಲಿ ಖಮೇನಿಯನ್ನು ಸಾಯಿಸುವುದು ಇಸ್ರೇಲ್‌ ಗುರಿ ಎನ್ನಲಾಗಿದೆ. ಆದರೆ ಅಮೆರಿಕ ಇಂಥ ದುಸ್ಸಾಹಸ ಮಾಡದಂತೆ ಇಸ್ರೇಲನ್ನು ಎಚ್ಚರಿಸಿದೆ. ಈಗಾಗಲೇ ಇಸ್ರೇಲ್‌ ದಾಳಿಗೆ ಇರಾನಿನ ಹಲವು ಉನ್ನತ ಸೇನಾಧಿಕಾರಿಗಳು ಹತರಾಗಿದ್ದಾರೆ. ಇರಾನ್‌ನ ಇಸ್ಲಾಮಿಕ್‌ ರೆವಲ್ಯೂಷನರಿ ಕಾರ್ಪ್ಸ್‌ ಗಾರ್ಡ್‌ನ ಗುಪ್ತಚರ ಪಡೆಯ ಮುಖ್ಯಸ್ಥ, ಸಹಮುಖ್ಯಸ್ಥ ಸೇರಿ ಹಲವು ಸೇನಾ ಅಧಿಕಾರಿಗಳನ್ನು ಭಾನುವಾರ ರಾತ್ರಿ ಮಾಡಿದ ದಾಳಿಯಲ್ಲಿ ಇಸ್ರೇಲ್‌ ಸಾಯಿಸಿದೆ. ತನ್ನ ಹಲವು ಜನವಸತಿ ಪ್ರದೇಶಗಳ ಮೇಲೆ ಇಸ್ರೇಲ್‌ನ ಕ್ಷಿಪಣಿಗಳು ಎರಗಿವೆ ಎಂದು ಇರಾನ್‌ ಹೇಳಿದೆ.

ಉಭಯ ದೇಶಗಳು ಕದನ ವಿರಾಮದ ಶಾಂತಿ ಮಾತುಕತೆಯನ್ನು ನಿರಾಕರಿಸಿವೆ. ಕುವೈಟ್‌ ಮತ್ತು ಓಮಾನ್‌ ದೇಶಗಳು ಇಸ್ರೇಲ್‌ ದಾಳಿಗೆ ಇರಾನ್‌ನ ಪ್ರತೀಕಾರ ಮುಗಿದ ಬಳಿಕ ತಾವು ಮಾತುಕತೆ ನಡೆಸುವುದಾಗಿ ಹೇಳಿಕೊಂಡಿವೆ.

ಕಳೆದ ಶುಕ್ರವಾರದಿಂದೀಚೆಗೆ ಇರಾನ್‌ ಮೇಲೆ ಇಸ್ರೇಲ್‌ 300ಕ್ಕೂ ಅಧಿಕ ಕ್ಷಿಪಣಿಗಳನ್ನು ಪ್ರಯೋಗಿಸಿದೆ. ಇರಾನ್‌ನ ಆರ್ಥಿಕತೆಯ ಬೆನ್ನುಲುಬಾಗಿರುವ ತೈಲ, ಅನಿಲ ಸ್ಥಾವರಗಳು, ಮಿಲಿಟರಿ ನೆಲೆಗಳು ಮತ್ತು ಉನ್ನತ ಮಿಲಿಟರಿ ನಾಯಕರನ್ನು ಇಸ್ರೇಲ್‌ ಗುರಿಮಾಡಿಕೊಂಡಿದೆ.

ಭಾನುವಾರ ತಡರಾತ್ರಿ ಜೆರಸಲೇಮ್‌ ಮೇಲೆ ಇರಾನ್‌ ಕ್ಷಿಪಣಿ ದಾಳಿ ಮಾಡಿದ್ದು, ಜೆರುಸಲೇಮ್‌ನಲ್ಲಿ ಎಚ್ಚರಿಕೆಯ ಸೈರನ್‌ ಮೊಳಗಿದೆ. ಇರಾನ್‌ನ ಕ್ಷಿಪಣಿ ಉಡ್ಡಯನ ನೆಲೆಗಳು, ಮಿಲಿಟರಿ ನೆಲೆಗಳನ್ನು ಗುರಿ ಮಾಡಿಕೊಂಡು ತಾನು ದಾಳಿ ಮಾಡಿದ್ದೇನೆ ಎಂದು ಇಸ್ರೇಲ್‌ ಹೇಳಿಕೊಂಡಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top