ಇರಾನ್ ಗ್ಯಾಸ್ ಸ್ಥಾವರಕ್ಕೆ ಕ್ಷಿಪಣಿ ದಾಳಿ; ಇಸ್ರೇಲ್ನ ಐರನ್ ಡೋಮ್ ಭೇದಿಸಿದ ಇರಾನ್
ಟೆಲ್ ಅವೀವ್: ರಾತ್ರಿಯಿಡೀ ಇಸ್ರೇಲ್ ಮತ್ತು ಇರಾನ್ ನಡುವೆ ಭೀಕರ ಸಮರ ನಡೆದಿದ್ದು, ಇಸ್ರೇಲ್ ನಡೆಸಿದ ದಾಳಿಯಲ್ಲಿ ಇರಾನ್ನಲ್ಲಿ ಮತ್ತೆ 60ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಎರಡೂ ದೇಶಗಳು ವೈಮಾನಿಕ ದಾಳಿಯನ್ನು ತೀವ್ರಗೊಳಿಸಿದ್ದು, ಮಧ್ಯಪ್ರಾಚ್ಯದಲ್ಲಿ ಆತಂಕದ ಪರಿಸ್ಥಿತಿ ಉಂಟಾಗಿದೆ.
ಇರಾನ್ನ ಜೀವನಾಡಿ ಎಂದೇ ಹೇಳಲಾಗುವ ಬೃಹತ್ ಗ್ಯಾಸ್ ಸ್ಥಾವರಕ್ಕೆ ಶನಿವಾರ ರಾತ್ರಿ ಇಸ್ರೇಲ್ನ ಕ್ಷಿಪಣಿಗಳು ಬಂದೆರಗಿದ್ದು, ಆಪಾರ ಹಾನಿ ಸಂಭವಿಸಿದೆ. ಆಪರೇಷನ್ ರೈಸಿಂಗ್ ಲಯನ್ ಹೆಸರಿನಲ್ಲಿ ಇರಾನ್ ವಿರುದ್ಧ ಇಸ್ರೇಲ್ ಯುದ್ಧ ಶುರು ಮಾಡಿದೆ. ಅನಿಲ ಸ್ಥಾವರದ ಮೇಲಿನ ಇಸ್ರೇಲ್ ದಾಳಿ ಇರಾನ್ನ ಆರ್ಥಿಕ ಬಲವನ್ನು ಬುಡಮೇಲುಗೊಳಿಸುವ ಪ್ರಯತ್ನ ಎನ್ನಲಾಗಿದೆ.

ಇರಾನ್ನ ರಾಜಧಾನಿ ಟೆಹ್ರಾನ್ನ ಜನವಸತಿ ಪ್ರದೇಶದ ಮೇಲೂ ಕ್ಷಿಪಣಿ ದಾಳಿಯಾಗಿದ್ದು, 60ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ 29 ಮಕ್ಕಳು ಇದ್ದಾರೆ ಎನ್ನಲಾಗಿದೆ. ಇದಕ್ಕೂ ಮೊದಲು ನಡೆದ ಇನ್ನೊಂದು ಪ್ರತ್ಯೇಕ ದಾಳಿಯಲ್ಲಿ ಮೂವರು ಮಹಿಳೆಯರು ಸಾವಿಗೀಡಾಗಿದ್ದಾರೆ.
ಇಸ್ರೇಲ್ನ ಐರನ್ ಡೋಮ್ ಭೇದಿಸಿದ ಇರಾನ್
ವೈಮಾನಿಕ ದಾಳಿಯನ್ನು ತಡೆಯಲು ಇಸ್ರೇಲ್ ಅಭಿವೃದ್ಧಪಡಿಸಿದ್ದ ಅತ್ಯಾಧುನಿಕ ಐರನ್ ಡೋಮ್ ರಕ್ಷಣಾ ಕವಚವನ್ನು ಭೇದಿಸುವಲ್ಲಿ ಇರಾನ್ ಯಶಸ್ವಿಯಾಗಿದೆ. ಇದು ಇಸ್ರೇಲ್ಗೆ ಆಗಿರುವ ದೊಡ್ಡ ಹಿನ್ನಡೆ ಎಂದು ಪರಿಗಣಿಸಲಾಗಿದೆ. ಇಸ್ರೇಲ್ನ ಸೇನೆಯ ಪ್ರಮುಖ ಹೆಡ್ಕ್ವಾರ್ಟರ್ಸ್ ಮೇಲೆ ಇರಾನ್ ಕ್ಷಿಪಣಿ ಅಪ್ಪಳಿಸಿ ಭಾರಿ ಹಾನಿ ಸಂಭವಿಸಿದೆ.

ಇಷ್ಟರ ತನಕ ಇಸ್ರೇಲ್ ಈ ಐರನ್ ಡೋಮ್ ರಕ್ಷಣಾ ಕವಚವನ್ನು ನಂಬಿಕೊಂಡಿತ್ತು. ಹಮಾಸ್ ಮಾಡಿದ ಅಷ್ಟೂ ಕ್ಷಿಪಣಿ ದಾಳಿಯನ್ನು ಐರನ್ ಡೋಮ್ ತಡೆದಿತ್ತು. ಆದರೆ ಇರಾನ್ ಈ ರಕ್ಷಣಾ ಕವಚವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುವುದು ಇಸ್ರೇಲ್ ಪಾಲಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ. ಇದರ ಬೆನ್ನಿಗೆ ಇಸ್ರೇಲ್ ಪ್ರಧಾನಿ ನೆತನ್ಯಾಹು ಬೆಂಜಮಿನ್ ಇರಾನ್ ವಿರುದ್ಧ ಪೂರ್ಣ ಪ್ರಮಾಣದ ಯುದ್ಧ ಮಾಡುವುದಾಗಿ ಘೋಷಿಸಿದ್ದಾರೆ.
ಇರಾನ್ನ ಮೇಲೆ ಬೃಹತ್ ಪ್ರಮಾಣದಲ್ಲಿ ದಾಳಿ ಮಾಡಲು ಸೇನೆಗೆ ನೆತನ್ಯಾಹು ಆದೇಶಿಸಿದ್ದಾರೆ. ಅಣ್ವಸ್ತ್ರ ನೆಲೆಗಳು, ಸೇನಾ ನೆಲೆಗಳು, ಪ್ರಮುಖ ನಾಯಕರು ಮತ್ತು ಪ್ರದೇಶಗಳನ್ನು ಗುರಿ ಮಾಡಿಕೊಳ್ಳಲು ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶನಿವಾರ ರಾತ್ರಿ ಇರಾನ್ನ 150ಕ್ಕೂ ಹೆಚ್ಚು ಸ್ಥಳದ ಮೇಲೆ ಇಸ್ರೇಲ್ ಪಡೆಗಳು ವೈಮಾನಿಕ ದಾಳಿ ನಡೆಸಿವೆ.
ಇದ್ಯದಲ್ಲೇ ಇಸ್ರೇಲ್ನ ಫೈಟರ್ ಜೆಟ್ಗಳು ಟೆಹ್ರಾನ್ ಮೇಲೆ ಹಾರಾಡಲಿವೆ. ಅಯಾತುಲ್ಲಾ ಖಮೇನಿಯ ಆಡಳಿತದ ಪ್ರತಿ ಅಂಗುಲವನ್ನು ನಾವು ಶೋಧಿಸಲಿದ್ದೇವೆ ಎಂದು ನೆತಾನ್ಯಾಹು ಎಚ್ಚರಿಸಿದ್ದಾರೆ. ಹೀಗಾಗಿ ಈ ಯುದ್ಧ ಸದ್ಯಕ್ಕೆ ಮುಗಿಯುವುದಿಲ್ಲ ಎನ್ನಲಾಗಿದೆ.
























