ಒಂದೇ ಕುಟುಂಬದ ಆರು ಮಂದಿ ಅದೃಷ್ಟವಶಾತ್ ಪಾರು
ಮಂಗಳೂರು : ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ನಿನ್ನೆಯಿಂದ ಎಡೆಬಿಡದೆ ಮಳೆ ಸುರಿಯುತ್ತಿದ್ದು, ಕರಾವಳಿ ಭಾಗದಲ್ಲಿ ವರುಣಾರ್ಭಟಕ್ಕೆ ಜನ ತತ್ತರಿಸಿ ಹೋಗಿದ್ದಾರೆ. ಮಂಗಳೂರಿನಲ್ಲಿ ಭಾರಿ ಮಳೆಗೆ ಜಲ ಸ್ಫೋಟಗೊಂಡು ಖಾಸಗಿ ಆಸ್ಪತ್ರೆಯ ಗೋಡೆ ಕುಸಿದು ಬಿದ್ದಿದ್ದು, ಭಾರಿ ಅವಘಡವೊಂದು ಸ್ವಲ್ಪದರಲ್ಲೇ ತಪ್ಪಿದೆ. ಕುಟುಂಬವೊಂದು ಅದೃಷ್ಟವಶಾತ್ ಪಾರಾಗಿದೆ.
ಕಂಕನಾಡಿ ಬಳಿಯ ಸುವರ್ಣ ಲೇನ್‌ನಲ್ಲಿ ಭಾರಿ ಅವಘಡ ಸಂಭವಿಸಿದೆ. ಧಾರಾಕಾರ ಮಳೆಗೆ ಖಾಸಗಿ ಆಸ್ಪತ್ರೆಯ ಕಾಂಪೌಂಡ್ ಗೋಡೆ ಕುಸಿದು ಬಿದ್ದಿದೆ. ಕೂದಲೆಳೆ ಅಂತರದಲ್ಲಿ ಜೋಕಿಂ ಡಿಸೋಜಾ ಎಂಬವರ ಕುಟುಂಬ ಪಾರಾಗಿದೆ. ಕುಟುಂಬದ ಆರು ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚರ್ಚ್‌ಗೆ ಹೊರಡಲು ಮನೆಯಿಂದ ಹೊರ ಬರುತ್ತಿದ್ದಂತೆ ಖಾಸಗಿ ಆಸ್ಪತ್ರೆಯ ಗೋಡೆ ಕುಸಿದಿದೆ. ಅದೃಷ್ಟವಶಾತ್ ಡಿಸೋಜಾ ಕುಟುಂಬ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮಂಗಳೂರು ಸೇರಿದಂತೆ ಕರಾವಳಿ ಭಾಗದಲ್ಲಿ ನಿನ್ನೆಯಿಂದೀಚೆಗೆ ಧಾರಾಕಾರ ಮಳೆಯಾಗುತ್ತಿದೆ. ರಾಜ್ಯದಲ್ಲಿ ಮುಂದಿನ ಐದು ದಿನ ಬಿರುಗಾಳಿ, ಗುಡುಗು ಸಹಿತ ಮಳೆ ಸುರಿಯುವ ಸಾಧ್ಯತೆ ಇದೆ. ಜೂನ್ 14ರಂದು ಕರಾವಳಿ ಜಿಲ್ಲೆಗಳು, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಸೇರಿ 6 ಜಿಲ್ಲೆಗಳಿಗೆ ಹವಾಮಾನ ಇಲಾಖೆಯು ರೆಡ್ ಅಲರ್ಟ್ ಘೋಷಿಸಿದೆ. ಕರಾವಳಿ ಜಿಲ್ಲೆಗಳಲ್ಲಿ ಜೂನ್ 17ರವರೆಗೆ ಗಾಳಿ ಗಂಟೆಗೆ 55 ಕಿ.ಮೀ ವೇಗದಲ್ಲಿ ಬೀಸುವ ಸಾಧ್ಯತೆ ಹಿನ್ನೆಲೆಯಲ್ಲಿ ಮೀನುಗಾರರು ಸಮುದ್ರಕ್ಕಿಳಿಯದಂತೆ ಎಚ್ಚರಿಕೆ ನೀಡಲಾಗಿದೆ.
ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಸೂಚನೆ

ಭಾರಿ ಮಳೆ ಮುಂದುವರಿಯುವ ಸಾಧ್ಯತೆ ಇರುವುದರಿಂದ ಎಲ್ಲ ತಹಸೀಲ್ದಾರರು ಹಾಗೂ ಇನ್ಸಿಡೆಂಟ್ ಕಮಾಂಡರ್‌ಗಳಿಗೆ ಅಪಾಯದಲ್ಲಿರುವ ಮನೆಗಳಿಂದ ಕುಟುಂಬಗಳನ್ನು ತಕ್ಷಣವೇ ಕಾಳಜಿ ಕೇಂದ್ರಗಳಿಗೆ ಅಥವಾ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ನಿರ್ದೇಶನ ನೀಡಿದ್ದಾರೆ.
ನೆರೆ ಉಂಟಾಗುವ ಪ್ರದೇಶಗಳ ಮೇಲೆ ನಿಗಾ ವಹಿಸಿ ಎಲ್ಲ ರಕ್ಷಣಾ ಸಾಮಾಗ್ರಿಗಳನ್ನು ಸಿದ್ಧವಾಗಿರಿಸಬೇಕು. ಯಾವುದೇ ಸಾವುನೋವು ಸಂಭವಿಸದಂತೆ ಎಚ್ಚರಿಕೆ ವಹಿಸಬೇಕು. ಎಲ್ಲ ತಾಲೂಕುಗಳು ಮತ್ತು ಮಹಾನಗರಪಾಲಿಕೆಗಳಲ್ಲಿ ಕಂಟ್ರೋಲ್ ರೂಂ ದಿನದ ಇಪ್ಪತ್ನಾಲ್ಕು ಗಂಟೆಯೂ ಕಾರ್ಯನಿರ್ವಹಿಸಬೇಕು. ಪ್ರಾಕೃತಿಕ ವಿಕೋಪ ಕಾರ್ಯಾಚರಣೆಗಳಲ್ಲಿ ಯಾವುದೇ ನಿರ್ಲಕ್ಷ್ಯವನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಸಿದ್ದಾರೆ.
12 ಕುಟುಂಬಗಳು ಪರಿಹಾರ ಕೇಂದ್ರಕ್ಕೆ ಸ್ಥಳಾಂತರ
ಮಂಗಳೂರಿನ ಅತ್ತಾವರ ಸೇರಿದಂತೆ ಹಲವು ಪ್ರದೇಶಗಳಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿ ಹಲವು ಕುಟುಂಬಗಳಿಗೆ ತೊಂದರೆಯುಂಟಾಗಿದ್ದು, 12 ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ಆ ಕುಟುಂಬಗಳಿಗೆ ಮಹಾನಗರ ಪಾಲಿಕೆ ವತಿಯಿಂದ ಪುರಭವನ ಆವರಣದಲ್ಲಿ ಸ್ಥಾಪಿಸಿರುವ ತಾತ್ಕಾಲಿಕ ಪರಿಹಾರ ಕೇಂದ್ರದಲ್ಲಿ ಆಶ್ರಯ ನೀಡಲಾಗಿದ್ದು, ಅಲ್ಲಿ ಆಹಾರ ಮತ್ತು ಇತರ ಅಗತ್ಯ ವಸ್ತುಗಳನ್ನು ಒದಗಿಸಲಾಗಿದೆ.
























