ಅಹಮದಾಬಾದ್‌ ವಿಮಾನ ದುರಂತ : ಇಂದು ಪ್ರಧಾನಿ ಮೋದಿ ಭೇಟಿ

ನವದೆಹಲಿ: ಏರ್‌ ಇಂಡಿಯಾ ವಿಮಾನ ಪತನಗೊಂಡು 265 ಮಂದಿ ಸಾವನ್ನಪ್ಪಿರುವ ಅಹಮದಾಬಾದ್‌ನ ದುರಂತ ಸ್ಥಳಕ್ಕೆ ಪ್ರಧಾನಿ ನರೇಂದ್ರ ಮೋದಿ ಇಂದು ಭೇಟಿ ನೀಡಲಿದ್ದಾರೆ. ಸಚಿವರು ಮತ್ತು ಅಧಿಕಾರಿಗಳ ಜೊತೆ ನಿನ್ನೆಯಿಂದೀಚೆಗೆ ನಿರಂತರ ಸಂಪರ್ಕದಲ್ಲಿರುವ ಮೋದಿ ಇಂದು ಖುದ್ದಾಗಿ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಲಿದ್ದಾರೆ.

ವಿಮಾನ ಪತನಗೊಂಡ ಸ್ಥಳಕ್ಕೆ ಮೋದಿ ಭೇಟಿ ನೀಡಲಿದ್ದು, ಅಧಿಕಾರಿಗಳಿಂದ ದುರಂತದ ಬಗ್ಗೆ ಮಾಹಿತಿ ಪಡೆಯಲಿದ್ದಾರೆ. ಬಳಿಕ ಆಸ್ಪತ್ರೆಗೆ ಭೇಟಿ ನೀಡಿ, ಬದುಕುಳಿದ ಏಕೈಕ ಪ್ರಯಾಣಿಕನ ಆರೋಗ್ಯ ವಿಚಾರಿಸಲಿದ್ದಾರೆ. ನಿನ್ನೆಯೂ ಅವಘಡದ ಕುರಿತು ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮಮೋಹನ್ ನಾಯ್ಡು ಅವರೊಂದಿಗೆ ಮಾತನಾಡಿ, ವಿಮಾನ ಅಪಘಾತದ ಕುರಿತು ಮಾಹಿತಿ ಪಡೆದಿದ್ದರು.

ದುರಂತದ ಬಗ್ಗೆ ಎಕ್ಸ್‌ ಪೋಸ್ಟ್‌ ಮೂಲಕ ಸಂತಾಪ ಸೂಚಿಸಿದ್ದ ಪ್ರಧಾನಿ ಮೋದಿ, ಅಹಮದಾಬಾದ್‌ನಲ್ಲಿ ಏರ್ ಇಂಡಿಯಾ ವಿಮಾನ ದುರಂತದಿಂದ ದಿಗ್ಭ್ರಮೆಗೊಂಡಿದ್ದೇನೆ. ಇದರಿಂದ ಎಲ್ಲರಿಗೂ ಅತೀವ ನೋವು ಉಂಟಾಗಿದೆ. ದುರಂತದಲ್ಲಿ ಸಿಲುಕಿರುವವರಿಗೆ ನೆರವು ನೀಡುವ ವಿಚಾರವಾಗಿ ಸಚಿವರು ಹಾಗೂ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಅಲ್ಲದೇ ನಿರಂತರವಾಗಿ ಅವರ ಜೊತೆ ಸಂಪರ್ಕದಲ್ಲಿದ್ದೇನೆ ಎಂದು ತಿಳಿಸಿದ್ದರು.





















































 
 

ಗುರುವಾರ ಅಹಮಾದಾಬಾದ್‌ನ ಸರ್ದಾರ್ ವಲ್ಲಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್ ಗ್ಯಾಟ್ವಿಕ್‌ಗೆ ಹಾರುತ್ತಿದ್ದ AI171 ವಿಮಾನ ಅಪಘಾತಕ್ಕೀಡಾಗಿದೆ. ಮಧ್ಯಾಹ್ನ 13.38ಕ್ಕೆ ಅಹಮದಾಬಾದ್‌ನಿಂದ ಹೊರಟ 12 ವರ್ಷದ ಹಳೆಯ ಬೋಯಿಂಗ್‌ 787-8 ವಿಮಾನ 230 ಪ್ರಯಾಣಿಕರು ಹಾಗೂ 12 ಸಿಬ್ಬಂದಿಯನ್ನ ಹೊತ್ತೊಯ್ಯುತ್ತಿತ್ತು. ವಿಮಾನ ಟೇಕ್‌ಆಫ್‌ ಆದ ಕೆಲವೇ ನಿಮಿಷಗಳಲ್ಲಿ ಅಪಘಾತಕ್ಕೀಡಾಯಿತು.

ವಿಮಾನದಲ್ಲಿದ್ದ 242 ಜನರಲ್ಲಿ 241 ಮಂದಿ ಸಾವನ್ನಪ್ಪಿದ್ದಾರೆ. ಬದುಕುಳಿದ ಏಕೈಕ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿಮಾನದಲ್ಲಿದ್ದ 230 ಪ್ರಯಾಣಿಕರ ಪೈಕಿ 169 ಭಾರತೀಯರು, 53 ಬ್ರಿಟಿಷ್ ಪ್ರಜೆಗಳು, 7 ಪೋರ್ಚುಗೀಸ್ ಪ್ರಜೆಗಳು ಮತ್ತು ಓರ್ವ ಕೆನಡಾ ಇದ್ದರು. ಬದುಕುಳಿದ ಏಕೈಕ ವ್ಯಕ್ತಿ ಭಾರತೀಯ ಮೂಲದ ಬ್ರಿಟಿಷ್‌ ಪ್ರಜೆಯಾಗಿದ್ದಾರೆ ಎಂದು ಏರ್‌ ಇಂಡಿಯಾ ಖಚಿತಪಡಿಸಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top