ಬರ್ತ್‌ಡೇ ಪಾರ್ಟಿಯಲ್ಲಿ ಮದ್ಯ, ಮಾದಕ ವಸ್ತು ಬಳಸಿದ ಪ್ರಕರಣ
ಹೈದರಾಬಾದ್: ಬರ್ತ್‌ಡೇ ಪಾರ್ಟಿಯಲ್ಲಿ ಮದ್ಯ ಮತ್ತು ಡ್ರಗ್ಸ್ ಪೂರೈಸಿರುವ ಆರೋಪಕ್ಕೆ ಒಳಗಾಗಿರುವ ತೆಲುಗಿನ ಪ್ರಸಿದ್ಧ ಗಾಯಕಿ ಮಂಗ್ಲಿ ಯಾನೆ ಸತ್ಯವತಿ ರಾಠೋಡ್, ಪಾರ್ಟಿಯಲ್ಲಿ ಮದ್ಯ ಸೇವಿಸಲು ಪೊಲೀಸರ ಅನುಮತಿ ಪಡೆಯಬೇಕೆಂದು ತನಗೆ ಗೊತ್ತಿರಲಿಲ್ಲ, ಇದು ಅರಿವಿಲ್ಲದೆ ಆಗಿರುವ ತಪ್ಪು ಎಂದು ಹೇಳಿಕೊಂಡಿದ್ದಾರೆ.
ಪ್ರಸಿದ್ಧ ಜಾನಪದ ಗಾಯಕಿಯಾಗಿರುವ ಮಂಗ್ಲಿ ತೆಲುಗು ಮತ್ತು ಕನ್ನಡದ ಅನೇಕ ಸಿನಿಮಾಗಳಿಗೂ ಹಾಡಿದ್ದಾರೆ. ವಿಶಿಷ್ಟವಾದ ಧ್ವನಿ ಮತ್ತು ಜಾನಪದ ಶೈಲಿಯ ನೃತ್ಯಗಳಿಂದ ಅವರು ಸೋಷಿಯಲ್ ಮೀಡಿಯಾದಲ್ಲೂ ಭಾರಿ ಫೇಮಸ್ ಆಗಿದ್ದಾರೆ.

ಜೂ.10ರಂದು ಮಂಗ್ಲಿಯ ಹುಟ್ಟುಹಬ್ಬವಾಗಿದ್ದು, ಈ ನಿಮಿತ್ತ ಹೈದರಾಬಾದ್‌ನ ಹೊರವಲಯದ ರೆಸಾರ್ಟ್ ಒಂದರಲ್ಲಿ ಪಾರ್ಟಿ ಏರ್ಪಾಡು ಮಾಡಿದ್ದರು. ಈ ಪಾರ್ಟಿಗೆ ಪೊಲೀಸರು ದಾಳಿ ಮಾಡಿದಾಗ ಮದ್ಯ ಮತ್ತು ಮಾದಕ ವಸ್ತು ಪೂರೈಕೆಯಾಗಿರುವುದು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಮಂಗ್ಲಿ ವಿರುದ್ಧ ಕೇಸ್ ದಾಖಲಾಗಿದೆ. ಆದರೆ ರಕ್ತ ಪರೀಕ್ಷೆಯಲ್ಲಿ ಮಂಗ್ಲಿ ಮಾದಕ ವಸ್ತು ಸೇವಿಸಿಲ್ಲ ಎನ್ನುವುದು ದೃಢಪಟ್ಟಿದೆ.
ಪೂರ್ವಾನುಮತಿ ಇಲ್ಲದೆ ಪಾರ್ಟಿ ಆಯೋಜಿಸಲಾಗಿದೆ ಎಂಬ ಆರೋಪದ ಮೇಲೆ ಪೊಲೀಸರು ದಾಳಿ ನಡೆಸಿ ಮಂಗ್ಲಿ ಮತ್ತು ಇತರ ಹಲವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಯಕಿ ಸ್ಪಷ್ಟನೆ ನೀಡಿ ಈ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲೂ ಹಂಚಿಕೊಂಡಿದ್ದಾರೆ.
ನನ್ನ ಕುಟುಂಬದೊಂದಿಗೆ ಸಮಯ ಕಳೆಯುವ ಉದ್ದೇಶದಿಂದ ಬರ್ತ್‌ಡೇ ಪಾರ್ಟಿ ಆಯೋಜಿಸಿದ್ದೆ. ಇದು ನನ್ನ ಪೋಷಕರ ಇಚ್ಛೆಯಂತೆ ನಡೆಯಿತು. ಈ ಪಾರ್ಟಿಯಲ್ಲಿ ನನ್ನ ಕುಟುಂಬದ ಸದಸ್ಯರು, ಸಂಬಂಧಿಕರು, ಸ್ನೇಹಿತರು ಇದ್ದರು. ಡ್ರಿಂಕ್ಸ್ ಮತ್ತು ಸಾಂಗ್ ವ್ಯವಸ್ಥೆ ಕೂಡ ಮಾಡಲಾಗಿತ್ತು. ಆದರೆ ಇವುಗಳಿಗೆ ಅನುಮತಿ ಅಗತ್ಯವಿದೆ ಅನ್ನೋದು ನನಗೆ ಗೊತ್ತಿರಲಿಲ್ಲ. ರೆಸಾರ್ಟ್‌ನಲ್ಲಿ ಹಠಾತ್ತನೆ ಪಾರ್ಟಿ ಮಾಡಲಾಗಿತ್ತು. ಯಾರಾದ್ರೂ ನನಗೆ ಮಾಹಿತಿ ಕೊಟ್ಟಿದ್ದರೆ ಖಂಡಿತವಾಗಿ ಬೇಕಾದ ಅನುಮತಿ ಪಡೆದುಕೊಳ್ಳುತ್ತಿದೆ. ಯಾರೊಬ್ಬರೂ ಅನುಮತಿ ಅಗತ್ಯ ಅಂತ ನನಗೆ ಹೇಳಲಿಲ್ಲ. ನಾನು ತಿಳಿದೂ ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿದ್ದಾರೆ.

ರೆಸಾರ್ಟ್‌ನಲ್ಲಿ ಲೋಕಲ್ ಡ್ರಿಂಕ್ಸ್ ಮಾತ್ರ ಇತ್ತು. ಬೇರೆ ಯಾವುದೇ ಮಾದಕ ವಸ್ತುಗಳು ಬಳಸಿರಲಿಲ್ಲ ಅಥವಾ ಕಂಡುಬಂದಿಲ್ಲ. ಪೊಲೀಸರು ಶೋಧ ನಡೆಸಿದಾಗಲೂ ಯಾವುದೇ ಅಕ್ರಮ ವಸ್ತುಗಳು ಪತ್ತೆಯಾಗಿಲ್ಲ. ಗಾಂಜಾ ಸೇವಿಸಿದ್ದ ವ್ಯಕ್ತಿ ಬೇರೆಡೆ ಮತ್ತು ಬೇರೆ ಸಮಯದಲ್ಲಿ ಸೇವಿಸಿದ್ದಾನೆ ಎಂಬುದನ್ನು ಪೊಲೀಸರೇ ಖಚಿತಪಡಿಸಿದ್ದಾರೆ. ನಾವು ಅಧಿಕಾರಿಗಳಿಗೆ ಸಂಪೂರ್ಣ ಸಕರಿಸುತ್ತಿದ್ದೇವೆ. ದಯವಿಟ್ಟು ಸಾಕ್ಷ್ಯಗಳಿಲ್ಲದೆ ನನ್ನ ವಿರುದ್ಧ ಆಧಾರ ರಹಿತ ಆರೋಪಗಳನ್ನು ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.
ಇದಕ್ಕೂ ಮುನ್ನ ಪಾರ್ಟಿಯಲ್ಲಿ ಭಾಗಿಯಾಗಿದ್ದ ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಮೆಡಿಕಲ್ ಟೆಸ್ಟ್‌ನಲ್ಲಿ ಹಲವರು ಮಾದಕ ವಸ್ತು ಸೇವಿಸಿರೋದು ಪತ್ತೆಯಾಗಿತ್ತು. ಈ ಸಂಬಂಧ ಚೆವೆಲ್ಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ದಾಳಿ ವೇಳೆ ಪೊಲೀಸರು ವಿಡಿಯೋ ಮಾಡಿದ್ದು, ಮಂಗ್ಲಿ, ವಿಡಿಯೋ ಮಾಡೋದು ನಿಲ್ಲಿಸ್ತಿಯೋ ಇಲ್ವೋ ಎಂದು ಪೊಲೀಸರ ಮೇಲೆ ಗದರಿದ್ದರು. ಇದಕ್ಕೆ, ನನ್ನ ಕೆಲಸ ನಾನು ಮಾಡ್ತಿದ್ದೇನೆ ಎಂದು ಪೊಲೀಸ್ ಸಿಬ್ಬಂದಿ ಉತ್ತರಿಸಿದ್ದರು.