ವಾಲ್ಮೀಕಿ ನಿಗಮದ ಹಣವನ್ನು ಚುನಾವಣೆ ಗೆಲ್ಲಲು ಬಳಸಿದ ಆರೋಪದ ಹಿನ್ನೆಲೆಯಲ್ಲಿ ದಾಳಿ
ಬೆಂಗಳೂರು : ವಾಲ್ಮೀಕಿ ನಿಗಮದಲ್ಲಿ ಸಂಭವಿಸಿರುವ ಬಹುಕೋಟಿ ಭ್ರಷ್ಟಾಚಾರ ಸಂಬಂಧ ಜಾರಿ ನಿರ್ದೇಶನಾಲಯ ಇಂದು ಬೆಳಗ್ಗೆ ಬಳ್ಳಾರಿಯ ಕಾಂಗ್ರೆಸ್ ಸಂಸದ ಇ.ತುಕರಾಂ ಮತ್ತು ಬಳ್ಳಾರಿ ಭಾಗದ ಮೂವರು ಶಾಸಕರು ಸೇರಿದಂತೆ ಒಟ್ಟು ಕಡೆ ದಾಳಿ ನಡೆಸಿದೆ. ಬಳ್ಳಾರಿ ಚುನಾವಣೆಗೆ ವಾಲ್ಮೀಕಿ ನಿಗಮದ 21 ಕೋಟಿ ರೂ. ಬಳಸಿದ ಆರೋಪದಲ್ಲಿ ಈ ದಾಳಿಯಾಗಿದ್ದು, ಸಂಸದ ತುಕಾರಾಂ ಅವರನ್ನು ಇಡಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ.
ಮುಡಾ ಅಕ್ರಮ ಸೈಟ್ ಹಂಚಿಕೆ ಮಾಡಿದ್ದ ಪ್ರಕರಣದಲ್ಲಿ ನಿನ್ನೆ ಇ.ಡಿ. 100 ಕೋಟಿ ರೂ ಮೌಲ್ಯದ 92 ನಿವೇಶನಗಳನ್ನು ಮುಟ್ಟುಗೋಲು ಹಾಕಿತ್ತು. ಇದರ ಬೆನ್ನಲ್ಲೇ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಬಹುಕೋಟಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಕರ್ನಾಟಕದ ಒಟ್ಟು 8 ಕಡೆ ಏಕಕಾಲಕ್ಕೆ ಇ.ಡಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಸಂಸದರು, ಶಾಸಕರ ಮನೆ ಮೇಲೆ ಇ.ಡಿ ದಾಳಿ ಮಾಡಿ ಪರಿಶೀಲನೆ ನಡೆಸಿದೆ.
ಬಳ್ಳಾರಿಯಲ್ಲಿ 5 ಸ್ಥಳ, ಬೆಂಗಳೂರಿನಲ್ಲಿ 3 ಕಡೆ ಇಡಿ ದಾಳಿ ನಡೆದಿದ್ದು, ಬಳ್ಳಾರಿ ಸಂಸದ ಇ.ತುಕಾರಾಂ, ಕಂಪ್ಲಿ ಕ್ಷೇತ್ರದ ಶಾಸಕ ಜೆ.ಎನ್.ಗಣೇಶ್, ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಶಾಸಕ ನಾರಾ ಭರತ್ ರೆಡ್ಡಿ, ಬಳ್ಳಾರಿ ಗ್ರಾಮಾಂತರ ಶಾಸಕ ಬಿ.ನಾಗೇಂದ್ರ ಮತ್ತು ಕೂಡ್ಲಿಗಿ ಶಾಸಕ ಶ್ರೀನಿವಾಸ್ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ಮಾಡಲಾಗುತ್ತಿದೆ.
ಸಂಡೂರಿನಲ್ಲಿರುವ ಸಂಸದ ಇ.ತುಕಾರಾಂ ನಿವಾಸದ ಮೇಲೆ ಜಾರಿ ನಿರ್ದೇಶನಾಲಯದ 10ಕ್ಕೂ ಹೆಚ್ಚು ಅಧಿಕಾರಿಗಳಿಂದ ದಾಳಿ ಮಾಡಲಾಗಿದೆ. ಮನೆಯಿಂದ 2 ಕಿ.ಮೀ. ದೂರದಲ್ಲಿ ರಸ್ತೆಗೆ ಬ್ಯಾರಿಕೇಡ್ ಅವಳಡಿಕೆ ಮಾಡಲಾಗಿದೆ.