ಎಂ.ಎಸ್‌. ಧೋನಿಗೆ ಐಸಿಸಿ ಹಾಲ್‌ ಆಫ್‌ ಫೇಮ್‌ ಗೌರವ

ವಿಶೇಷ ಗೌರವಕ್ಕೆ ಪಾತ್ರರಾದ ಭಾರತದ 11ನೇ ಕ್ರಿಕೆಟಿಗ

ಲಂಡನ್‌: ಭಾರತಕ್ಕೆ ಎರಡು ವಿಶ್ವಕಪ್‌ ಗೆಲ್ಲಿಸಿಕೊಟ್ಟ ದಿಗ್ಗಜ ಕ್ರಿಕೆಟಿಗ ಎಂ.ಎಸ್‌.ಧೋನಿ 2025ನೇ ಸಾಲಿನ ಹಾಲ್‌ ಆಫ್ ಫೇಮ್‌ ಗೌರವಕ್ಕೆ ಭಾಜನರಾಗಿದ್ದಾರೆ. ಅವರ ಜತೆಗೆ ಇತರ 6 ಕ್ರಿಕೆಟಿಗರು ಕೂಡ ಈ ವಿಶೇಷ ಗೌರವಕ್ಕೆ ಪಾತ್ರರಾಗಿದ್ದಾರೆ. ಈ ಮೂಲಕ ಧೋನಿ ಐಸಿಸಿ ಹಾಲ್‌ ಆಫ್‌ ಫೇಮ್‌ ಸೇರ್ಪಡೆಗೊಂಡ ಭಾರತದ 11ನೇ ಕ್ರಿಕೆಟಿಗ ಎನಿಸಿಕೊಂಡರು.

ಧೋನಿಗೂ ಮುನ್ನ ಸುನಿಲ್‌ ಗವಾಸ್ಕರ್‌, ಬಿಶನ್‌ ಸಿಂಗ್‌ ಬೇಡಿ, ಕಪಿಲ್‌ ದೇವ್‌, ಅನಿಲ್‌ ಕುಂಬ್ಳೆ, ರಾಹುಲ್‌ ದ್ರಾವಿಡ್‌, ಸಚಿನ್‌ ತೆಂಡುಲ್ಕರ್‌, ವೀರೇಂದ್ರ ಸೆಹ್ವಾಗ್‌, ವೀನೂ ಮಂಕಡ್‌, ಮಹಿಳಾ ಕ್ರಿಕೆಟಿಗರಾದ ಡಯಾನ ಎಡುಲ್ಜಿ, ನೀತು ಡೇವಿಡ್‌ ಈ ವಿಶೇಷ ಗೌರವಕ್ಕೆ ಪಾತ್ರರಾಗಿದ್ದರು.



















































 
 

2004ರಲ್ಲಿ ಭಾರತ ಪರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಧೋನಿ 2007ರಲ್ಲಿ ತಮ್ಮ ಚೊಚ್ಚಲ ನಾಯಕ್ವದಲ್ಲೇ ಟಿ20 ವಿಶ್ವಕಪ್‌, 2011ರಲ್ಲಿ ಏಕದಿನ ವಿಶ್ವಕಪ್‌ ಗೆದ್ದು ಸಾಧನೆ ಮಾಡಿದ್ದರು. ಅವರು 350 ಏಕದಿನ ಪಂದ್ಯಗಳಲ್ಲಿ 50.57ರ ಸರಾಸರಿಯಲ್ಲಿ 10,773 ರನ್‌ ಗಳಿಸಿದ್ದು, ಇದರಲ್ಲಿ 10 ಶತಕ, 73 ಅರ್ಧಶತಕ ಒಳಗೊಂಡಿವೆ. 90 ಟೆಸ್ಟ್‌ನಲ್ಲಿ 6 ಶತಕ ಒಳಗೊಂಡ 4876 ರನ್‌ ಕಲೆಹಾಕಿದ್ದಾರೆ. 2019ರ ಏಕದಿನ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್‌ ವಿರುದ್ಧ ಕೊನೆ ಬಾರಿ ಭಾರತವನ್ನು ಪ್ರತಿನಿಧಿಸಿದ್ದ ಧೋನಿ, 2020ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು.

ಏನಿದು ಹಾಲ್‌ ಆಫ್‌ ಫೇಮ್‌?

ಐಸಿಸಿ ಕೊಡುವ ಹಾಲ್ ಆಫ್ ಫೇಮ್ ಗೌರವಕ್ಕೆ ಆಯ್ಕೆಯಾಗಬೇಕಾದರೆ ಆಟಗಾರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿ ಕನಿಷ್ಠ ಐದು ವರ್ಷ ಆಗಿರಬೇಕು. ಈ ನಡುವೆ ಆ ಆಟಗಾರ ಯಾವುದೇ ಅಂತಾರಾಷ್ಟ್ರೀಯ ಪಂದ್ಯ ಆಡಿರಬಾರದು. ಹಾಗಾದಲ್ಲಿ ಮಾತ್ರ ಆಟಗಾರರನ್ನು ಈ ಪ್ರಶಸ್ತಿಗೆ ಪರಿಗಣಿಸಲಾಗುತ್ತದೆ. ಇದು ಕ್ರಿಕೆಟ್‌ಗೆ ಅಸಾಧಾರಣ ಕೊಡುಗೆ ನೀಡಿದ ದಿಗ್ಗಜ ಆಟಗಾರರಿಗೆ ಐಸಿಸಿ ಸಲ್ಲಿಸುವ ವಿಶೇಷ ಗೌರವ. ಈ ವರೆಗೂ ಒಟ್ಟು 122 ಮಂದಿ ಐಸಿಸಿ ಹಾಲ್‌ ಆಫ್‌ ಫೇಮ್‌ ಸೇರ್ಪಡೆಗೊಂಡಿದ್ದಾರೆ.

2025ರಲ್ಲಿ ಹಾಲ್‌ ಆಫ್‌ ಫೇಮ್‌ ಸೇರ್ಪಡೆಗೊಂಡವರೆಂದರೆ ಭಾರತದ ಧೋನಿ, ಆಸ್ಟ್ರೇಲಿಯಾದ ಮ್ಯಾಥ್ಯೂ ಹೇಡನ್‌, ದಕ್ಷಿಣ ಆಫ್ರಿಕಾದ ಹಾಶಿಂ ಆಮ್ಲ, ಗ್ರೇಮ್‌ ಸ್ಮಿತ್‌, ನ್ಯೂಜಿಲೆಂಡ್‌ನ ಡೇನಿಯಲ್‌ ವೆಟೋರಿ, ಮಹಿಳಾ ಕ್ರಿಕೆಟಿಗರಾದ ಪಾಕಿಸ್ತಾನದ ಸನಾ ಮೀರ್‌.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top