ಕಾಲ್ತುಳಿತ ದುರಂತ : ಸಿದ್ದರಾಮಯ್ಯ, ಡಿಕೆಶಿ ದಿಲ್ಲಿಗೆ ದೌಡು

ಹೈಕಮಾಂಡ್‌ಗೆ ವಿವರಣೆ ನೀಡಲು ಹೋದ ಸಿಎಂ, ಡಿಸಿಎಂ

ಬೆಂಗಳೂರು : ಆರ್‌ಸಿಬಿ ವಿಜಯೋತ್ಸವ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಸಾವನ್ನಪ್ಪಿದ ಘಟನೆ ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್‌ಗೆ ತೀವ್ರ ಹಿನ್ನಡೆ ಉಂಟು ಮಾಡಿದೆ. ಕುಂಭಮೇಳ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತ ಸೇರಿದಂತೆ ಬೇರೆ ಬೇರೆ ರಾಜ್ಯಗಳಲ್ಲಿ ಸಂಭವಿಸಿದ ದುರ್ಘಟನೆಗಳಿಗೆ ಕೇಂದ್ರ ಸರ್ಕಾರವನ್ನು ಗುರಿ ಮಾಡಿಕೊಂಡು ಟೀಕಿಸುತ್ತಿದ್ದ ಕಾಂಗ್ರೆಸ್‌ಗೆ ಈಗ ತನ್ನದೇ ಆಡಳಿತವಿರುವ ರಾಜ್ಯದಲ್ಲಿ ಸಂಭವಿಸಿದ ಘೋರ ದುರಂತ ಮತ್ತು ಅದರಲ್ಲಿ ನೇರವಾಗಿ ಸರ್ಕಾರವೇ ಶಾಮೀಲಾಗಿರುವುದು ನುಂಗಲಾಗದ ಬಿಸಿತುಪ್ಪವಾಗಿ ಪರಿಣಮಿಸಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರನ್ನು ಹೈಕಮಾಂಡ್‌ ದಿಲ್ಲಿಗೆ ಕರೆಸಿಕೊಂಡಿದೆ.

ತನಿಖೆ ನಡೆಯುತ್ತಿರುವ ಹೊತ್ತಲ್ಲೇ ವಿಪಕ್ಷಗಳು ನಡೆಸುತ್ತಿರುವ ದಾಳಿ ಗಾಯದ ಮೇಲೆ ಬರೆ ಎಳೆದಂತಾಗಿದೆ. ದುರ್ಘಟನೆಯ ವಿವರಣೆ ಪಡೆಯಲು ಕೈ ಹೈಕಮಾಂಡ್ ಮುಂದಾಗಿದ್ದು, ವರಿಷ್ಠರ ಬುಲಾವ್​ ಬೆನ್ನಲ್ಲೇ ಇಂದು ಬೆಳಗ್ಗೆ ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್​ ಒಂದೇ ವಿಮಾನದಲ್ಲಿ ದೆಹಲಿಗೆ ತೆರಳಿದ್ದಾರೆ.





















































 
 

ರಾಷ್ಟೀಯ ಮಟ್ಟದಲ್ಲಿ ಮುಜುಗರಕ್ಕೆ ಕಾರಣವಾಗಿರುವ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಆಡಳಿತದ ಮೇಲೆ ಕಾಂಗ್ರೆಸ್ ಹೈಕಮಾಂಡ್ ಅಸಮಾಧಾನಗೊಂಡಿದೆ. ಘಟನೆ ನಡೆದ ದಿನವೇ ಪ್ರಾಥಮಿಕ ಮಾಹಿತಿ ಪಡೆದಿದ್ದ ವರಿಷ್ಠರು, ಈಗ ಸಂಪೂರ್ಣ ವರದಿ ಪಡೆಯಲಿದ್ದಾರೆ. ಇಂದು ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್​,​ ರಾಹುಲ್ ಗಾಂಧಿಯನ್ನು ಭೇಟಿಯಾಗಿ ಮಾಹಿತಿ ನೀಡಲಿದ್ದಾರೆ.

ಕಾಲ್ತುಳಿತಕ್ಕೆ ಕಾರಣವೇನು? ಯಾರ ಲೋಪ? ಎಲ್ಲಿ ಎಡವಿದ್ದು? ಕೆಎಸ್‌ಸಿಎ ಪಾತ್ರ ಮತ್ತು ರಾಜ್ಯ ಸರ್ಕಾರದ ಪಾತ್ರದ ಕುರಿತು ವರದಿ ಸಲ್ಲಿಸಲಿದ್ದಾರೆ ಎಂದು ಮೂಲವೊಂದು ತಿಳಿಸಿದೆ. ವಿಜಯೋತ್ಸವದ ಹಿಂದಿನ ದಿನ ಜರುಗಿದ ಪತ್ರ ವ್ಯವಹಾರ ಹಾಗೂ ಕಾಲ್ತುಳಿತ ಪ್ರಕರಣವನ್ನು ವಿಪಕ್ಷಗಳು ಅಸ್ತ್ರ ಮಾಡಿಕೊಂಡಿವೆ ಎಂದು ರಾಹುಲ್​ ಗಾಂಧಿಗೆ ಮನವರಿಕೆ ಮಾಡಲಿದ್ದಾರೆ.

ಈಗಾಗಲೇ ಕೆ.ಸಿ ವೇಣುಗೋಪಾಲ್​ಗೆ ದೂರವಾಣಿ ಮೂಲಕ ಸಿಎಂ ಮತ್ತು ಡಿಸಿಎಂ ಮಾಹಿತಿ ನೀಡಿದ್ದಾರೆ. ಇಂದಿನ ಸಭೆಯಲ್ಲಿ ಲೋಪದೋಷದ ಬಗ್ಗೆಯೂ ಚರ್ಚೆಯಾಗಲಿದೆ. ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೆಸ್​ಗೆ ಮುಜುಗರವಾಗಿರುವ ಕಾಲ್ತುಳಿತ ದುರಂತದ ಬಗ್ಗೆ ಖುದ್ದಾಗಿ ರಾಹುಲ್ ಗಾಂಧಿ ವರದಿ ಪಡೆದುಕೊಳ್ಳಲಿದ್ದಾರೆ. ಹಾಗೆಯೇ ಸಮಯದ ಸಿಕ್ಕಿದರೆ, ಸಂಪುಟ ವಿಸ್ತರಣೆ, ಎಂಎಲ್‌ಸಿ ಆಯ್ಕೆ ಕುರಿತಂತೆಯೂ ಮಹತ್ವದ ಚರ್ಚೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top