ಮೋದಿ ಸರ್ಕಾರ 3.0ಗೆ ಒಂದು ವರ್ಷ ಪೂರ್ಣ

ಸಾಧನೆ, ಸವಾಲುಗಳ ನಡುವೆ ಮೋದಿ ಜನಪ್ರಿಯತೆ ಅಬಾಧಿತ

ನವದೆಹಲಿ: ಅನೇಕ ಸವಾಲು ಮತ್ತು ಸಾಧನೆಗಳ ನಡುವೆ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಮೂರನೇ ಅವಧಿಯ ಒಂದನೇ ವರ್ಷವನ್ನು ಪೂರ್ಣಗೊಳಿಸಿದೆ. ಒಂದು ವರ್ಷದ ಅವಧಿಯಲ್ಲಿ ಮೋದಿ ನೇತೃತ್ವದ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಸುಧಾರಣಾ ಕ್ರಮಗಳನ್ನು ಕೈಗೊಂಡಿದೆ. ಇದರೊಂದಿಗೆ ಎನ್‌ಡಿಎ ಮತ್ತು ಮೋದಿ ಸತತ 11 ವರ್ಷ ಆಳ್ವಿಕೆ ನಡೆಸಿದಂತಾಗಿದೆ. ಈ ಹನ್ನೊಂದು ವರ್ಷಗಳಲ್ಲಿ ಮೋದಿ ಜನಪ್ರಿಯತೆ ಅಬಾಧಿತವಾಗಿ ಮುಂದುವರಿಯುತ್ತಿದೆ ಎನ್ನುವುದು ವಿಶೇಷ.

ಲೋಕಸಭಾ ಚುನಾವಣೆಯಲ್ಲಿ ಮತ್ತೊಂದು ನಿರ್ಣಾಯಕ ಗೆಲುವಿನ ನಂತರ 2024ರ ಜೂನ್ 9ರಂದು ಮೋದಿ ಮೂರನೇ ಬಾರಿಗೆ ಪ್ರಧಾನಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ದೇಶವನ್ನು ವಿಕಸಿತ ಭಾರತವಾಗಿ ಪರಿವರ್ತಿಸುವ ಮತ್ತು ಜಾಗತಿಕ ವೇದಿಕೆಯಲ್ಲಿ ತನ್ನ ಪಾತ್ರವನ್ನು ಪ್ರತಿಪಾದಿಸುವತ್ತ ನಿರಂತರ ಗಮನ ಹರಿಸಲಾಗಿದೆ. ಮಿಲಿಟರಿ ಕ್ರಮ ಮತ್ತು ಸಾಮಾಜಿಕ ಕಲ್ಯಾಣ ಸುಧಾರಣೆಗಳಿಂದ ಹಿಡಿದು ಗಮನಾರ್ಹ ಆರ್ಥಿಕ ಪರಿಹಾರ ಮತ್ತು ಪೂರ್ವಭಾವಿ ಜಾಗತಿಕ ರಾಜತಾಂತ್ರಿಕತೆಯವರೆಗೆ ಗಮನ ಕೇಂದ್ರೀಕರಿಸಲಾಗಿದೆ.

















































 
 

ಮೋದಿ ಸರ್ಕಾರದ 3.0ರ ಮೊದಲ ವರ್ಷದ ನಿರ್ಣಾಯಕ ಕ್ಷಣಗಳಲ್ಲಿ ಆಪರೇಷನ್ ಸಿಂದೂರ ಪ್ರಮುಖವಾದ ಬೆಳವಣಿಗೆ. ಏಪ್ರಿಲ್ 22ರಂದು 26 ಜೀವಗಳನ್ನು ಬಲಿ ಪಡೆದ ವಿನಾಶಕಾರಿ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತ್ಯುತ್ತರವಾಗಿ 2025ರ ಮೇ 7ರಂದು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಉಗ್ರರ ಶಿಬಿರಗಳನ್ನು ಭಾರತ ಧ್ವಂಸಗೊಳಿಸಿತು. ಕೇಂದ್ರ ಸರ್ಕಾರದ ದಿಟ್ಟ ನಿರ್ಧಾರಗಳಲ್ಲಿ ಇದು ಒಂದು.

ಬ್ರಿಟಿಷ್‌ ಕಾಲದ ಕಾನೂನಿಗೆ ಇತಿಶ್ರೀ ಹಾಡಿ ಹೊಸ ಮೂರು ಕ್ರಿಮಿನಲ್‌ ಕಾನೂನುಗಳ ಪರಿಚಯ, ಒಂದು ದೇಶ, ಒಂದು ಚುನಾವಣೆ ಪರಿಕಲ್ಪನೆ ಪರಿಚಯ, ಕಾಶ್ಮೀರದಲ್ಲಿ ಐತಿಹಾಸಿಕ ವಿಧಾನಸಭಾ ಚುನಾವಣೆ, ಆಯುಷ್ಮಾನ್‌ ಅಡಿ 70 ವರ್ಷ ಮೇಲ್ಪಟ್ಟವರಿಗೆ ಉಚಿತ ಚಿಕಿತ್ಸೆ, ಮುಂಬೈ ದಾಳಿ ಮಾಸ್ಟರ್‌ಮೈಂಡ್‌ ಉಗ್ರ ರಾಣಾ ಭಾರತಕ್ಕೆ ಹಸ್ತಾಂತರ, ಆಡಳಿತದ ಪಾರದರ್ಶಕತೆಗೆ ವಕ್ಫ್‌ ತಿದ್ದುಪಡಿ ಕಾಯ್ದೆ, ವಿಶ್ವದಾಖಲೆಯ ಕುಂಭಮೇಳ ಅಭೂತಪೂರ್ವ ಯಶಸ್ಸು ಮೊದಲಾದ ಸಾಧನೆಗಳೊಂದಿಗೆ ಮೋದಿ ಸರ್ಕಾರ ಗಮನ ಸೆಳೆದಿದೆ.

12 ಲಕ್ಷದ ತನಕ ಆದಾಯ ತೆರಿಗೆಯಲ್ಲಿ ವಿನಾಯಿತಿ ನೀಡುವ ಮೂಲಕ ಮಧ್ಯಮ ವರ್ಗದ ಜನರಿಗೆ ಅನುಕೂಲ ಮಾಡಿಕೊಡಲಾಯಿತು. ದೆಹಲಿ, ಮಹಾರಾಷ್ಟ್ರ, ಹರಿಯಾಣ ಚುನಾವಣೆಯಲ್ಲಿ ಅಭೂತಪೂರ್ವ ಜಯವನ್ನು ಎನ್‌ಡಿಎ ಮೈತ್ರಿಕೂಟ ಸಾಧಿಸಿತು.

Leave a Comment

Your email address will not be published. Required fields are marked *

This site uses Akismet to reduce spam. Learn how your comment data is processed.

error: Content is protected !!
Scroll to Top