ಕಡಬ: ತಾಲೂಕಿನ ಇಚ್ಚಂಪಾಡಿಯಲ್ಲಿ ಸೇತುವೆಯೊಂದ ಬಳಿ ನೀರಿನಲ್ಲಿ ಸ್ನಾನಕ್ಕೆ ಇಳಿದ ಯುವಕನೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಇಂದು ಮಧ್ಯಾಹ್ನ ನಡೆದಿದೆ.
ಇಚ್ಚಂಪಾಡಿ ಗ್ರಾಮದ ಕೆಡೆಂಬೇಲು ಮನೆ ನಿವಾಸಿ ಜಯಾನಂದ ಶೆಟ್ಟಿ ಯವರ ಮಗ ಚೇತನ್ ಶೆಟ್ಟಿ (21) ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ. ಈತನು ಮಂಗಳೂರಿನಲ್ಲಿ ವೈದ್ಯಕೀಯ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದು, ಈ ದಿನ ರಜೆಯ ಸಂದರ್ಭ ಮನೆಯಲ್ಲೇ ಇದ್ದನು. ಬೆಳಿಗ್ಗೆ 8 ಗಂಟೆಗೆ ಮನೆಯಿಂದ ಕ್ರಿಕೆಟ್ ಆಡಲು ಹೊರಟ ಚೇತನ್ ಶೆಟ್ಟಿ, ಮಧ್ಯಾಹ್ನದ ವೇಳೆಗೆ ಸ್ನೇಹಿತರ ಜೊತೆ ಇಚ್ಚಂಪಾಡಿ ಸೇತುವೆ ಬಳಿ ಇರುವ ನೂಜಿಬಾಳ್ತಿಲ ಗ್ರಾಮದ ಗುಂಡ್ಯ ಹೊಳೆಗೆ ಸ್ನಾನಕ್ಕೆ ಇಳಿದನು. ಆದರೆ ಹೊಳೆಯ ನೀರಿನ ಆಳತೆ ಅರಿಯದೇ ಮಧ್ಯಾಹ್ನ ಸುಮಾರು 1.30 ಗಂಟೆಯ ವೇಳೆಗೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ.
ಮಾಹಿತಿ ತಿಳಿದ ಯುವಕನ ತಂದೆ ಜಯಾನಂದ ಶೆಟ್ಟಿ ಹಾಗೂ ಬಾವ ಆನಂದ ಶೆಟ್ಟಿ ಕೂಡಲೇ ಸ್ಥಳಕ್ಕೆ ಧಾವಿಸಿದ್ದಾರೆ.ಸ್ಥಳೀಯ ವ್ಯಕ್ತಿಯಾದ ಜಾಯ್ ಪಿ.ಪಿ. ಎಂಬವರು ಚೇತನನನ್ನು ನೀರಿನಿಂದ ಹೊರ ತೆಗೆದಿದ್ದಾರೆ ಎನ್ನಲಾಗಿದೆ. ಮೃತ ದೇಹವನ್ನು ಕಡಬ ಸರಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದ್ದು,
ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.