ವಿಶೇಷ ಪ್ರಾರ್ಥನೆ, ಹೊಸ ಉಡುಪು ಧರಿಸಿ ಸಂಭ್ರಮ
ಮಂಗಳೂರು: ದ.ಕ.ಜಿಲ್ಲೆಯಲ್ಲಿ ಇಂದು ಬಕ್ರೀದ್ ಹಬ್ಬ ಆಚರಿಸಲಾಗುತ್ತದೆ. ಮುಂಜಾನೆಯಿಂದಲೇ ಮುಸ್ಲಿಮರು ಈದುಲ್ ಅಝ್ಹಾ (ಬಕ್ರೀದ್) ಸಡಗರದಲ್ಲಿದ್ದಾರೆ. ಜಿಲ್ಲೆಯ ಮುಸ್ಲಿಮರು ಮಸೀದಿ, ಈದ್ಗಾಗಳಲ್ಲಿ ಸಾಮೂಹಿಕ ನಮಾಝ್ ನಿರ್ವಹಿಸಿ, ಈದ್ ಖುತ್ಬಾ ಮತ್ತು ಪ್ರವಚನ ಆಲಿಸಿ, ಈದ್ ಸಂದೇಶ ಸ್ವೀಕರಿಸುವುದು ಮತ್ತು ನೆರೆಮನೆ ಹಾಗೂ ಸಂಬಂಧಿಕರ ಮನೆಗೆ ಸೌಹಾರ್ದ ಭೇಟಿ ನೀಡುತ್ತಿರುವುದು ಕಂಡು ಬಂತು. ಮಕ್ಕಳಿಂದ ಹಿಡಿದು ಹಿರಿಯರ ಸಹಿತ ಹೊಸ ಬಟ್ಟೆಬರೆ ಧರಿಸಿ, ಅತ್ತರ್ ಹಚ್ಚಿ, ನಾನಾ ಬಗೆಯ ತಿಂಡಿ-ತಿನಿಸು ತಿಂದು ಹಬ್ಬವನ್ನು ಸಂಭ್ರಮಿಸಿದರು.
ಈದ್ ನಮಾಝ್-ಖುತ್ಬಾದ ಬಳಿಕ ದಫನ ಭೂಮಿಗೆ ತೆರಳಿ ಅಗಲಿದ ಕುಟುಂಬದ ಸದಸ್ಯರ ಮಗ್ಫಿರತ್ ಗಾಗಿ ಪ್ರಾರ್ಥಿಸಿದರು. ಬಳಿಕ ಕುಟುಂಬಸ್ಥರು, ಸ್ನೇಹಿತರು, ಸಮೀಪದ ನಿವಾಸಿಗಳ ಮನೆಗೆ ತೆರಳಿ ಈದ್ ಶುಭಾಶಯ ಸಲ್ಲಿಸುತ್ತಿದ್ದಾರೆ.
ನಗರದ ಲೈಟ್ಹೌಸ್ ಹಿಲ್ ರಸ್ತೆಯಲ್ಲಿರುವ ಬಾವುಟಗುಡ್ಡ ಈದ್ಗಾ ಮಸೀದಿಯಲ್ಲಿ ದ.ಕ.ಜಿಲ್ಲಾ ಖಾಝಿ ಅಲ್ಹಾಝ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಮತ್ತು ಉಳ್ಳಾಲದ ಕೇಂದ್ರ ಜುಮಾ ಮಸೀದಿಯಲ್ಲಿ ಖತೀಬ್ ಅಬ್ದುಲ್ ಮಜೀದ್ ಫಾಳಿಲಿ ಅವರ ನೇತೃತ್ವದಲ್ಲಿ ಈದ್ ನಮಾಝ್ ಮತ್ತು ಖುತ್ಬಾ ಪಾರಾಯಣ ನಡೆಯಿತು.
ಮಂಗಳೂರಿನ ಪಂಪ್ವೆಲ್ನ ಮಸ್ಜಿದುತ್ತಖ್ವಾ, ಹಂಪನಕಟ್ಟೆಯ ಮಸ್ಜಿದುನ್ನೂರ್, ಸ್ಟೇಟ್ಬ್ಯಾಂಕ್ನ ಇಬ್ರಾಹೀಂ ಖಲೀಲ್ ಮಸ್ಜಿದ್, ಕಂಕನಾಡಿ ರಹ್ಮಾನಿಯಾ ಜುಮಾ ಮಸೀದಿ, ನಗರದ ವಾಸ್ಲೇನ್ ಇಹ್ಸಾನ್ ಮಸ್ಜಿದ್, ಪಾಂಡೇಶ್ವರ ಪೊಲೀಸ್ಲೇನ್ನ ಫೌಝಿಯಾ ಜುಮಾ ಮಸ್ಜಿದ್, ಬಂದರ್ ಕಚ್ಚೀ ಮೇಮನ್ ಜುಮಾ ಮಸ್ಜಿದ್, ಬಂದರ್ ಕಂದುಕ ಬದ್ರಿಯಾ ಜುಮಾ ಮಸ್ಜಿದ್, ಬೋಳಾರ ಮುಹಿಯುದ್ದೀನ್ ಜುಮಾ ಮಸ್ಜಿದ್, ಕುದ್ರೋಳಿ ಜಾಮೀಯಾ ಜುಮಾ ಮಸ್ಜಿದ್, ಬಿಕರ್ನಕಟ್ಟೆ ಅಹಸನುಲ್ ಮಸಾಜೀದ್ ಸಹಿತ ಜಿಲ್ಲೆಯ ಜುಮಾ ಮಸ್ಜಿದ್ ಮತ್ತು ಈದ್ಗಾಗಳಲ್ಲಿ ನಮಾಝ್ ಹಾಗೂ ಖುತ್ಬಾ ನೆರವೇರಿಸಲಾಯಿತು.