ಅಂದು ಮಾಡಿದ ಟೀಕೆಗಳನ್ನೇ ತಿರುಗುಬಾಣವಾಗಿ ಬಳಸಿ ಕಾಲೆಳೆಯುತ್ತಿರುವ ನೆಟ್ಟಿಗರು
ಮಂಗಳೂರು: ಆರ್ಸಿಬಿ ತಂಡ ಚೊಚ್ಚಲ ಐಪಿಎಲ್ ಕಪ್ ಗೆದ್ದ ಸಂಭ್ರಮಾಚರಣೆ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ನಿನ್ನೆ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ 11 ಅಮಾಯಕರು ಸಾವನ್ನಪ್ಪಿದ ಘಟನೆಯ ಬಳಿಕ ಕುಂಭಮೇಳದ ಸಂದರ್ಭದಲ್ಲಿ ಪ್ರಯಾಗ್ರಾಜ್ನಲ್ಲಿ ಸಂಭವಿಸಿದ ಕಾಲ್ತುಳಿತ ಮತ್ತು ತೆಲುಗಿನ ಜನಪ್ರಿಯ ನಟ ಅಲ್ಲು ಅರ್ಜುನ್ ಅಭಿನಯದ ಪುಷ್ಪ-2 ಚಿತ್ರದ ಪ್ರೀಮಿಯರ್ ಶೋ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತ ಘಟನೆಗಳನ್ನು ಜನರು ನೆನಪಿಸಿಕೊಳ್ಳುತ್ತಿದ್ದಾರೆ.
ವಿವಿಧ ಸೋಷಿಯಲ್ ಮೀಡಿಯಾದಲ್ಲಿ ನಿನ್ನೆಯಿಂದೀಚೆಗೆ ಜನರು ಈ ಎರಡು ಘಟನೆಗಳು ಮತ್ತು ಅದರ ನಂತರ ಆದ ಬೆಳವಣಿಗೆಗಳು, ಈ ಘಟನೆಗಳಿಗೆ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಪ್ರತಿಕ್ರಿಯಿಸಿದ ರೀತಿಯನ್ನು ನೆನಪಿಸಿಕೊಂಡು ಕರ್ನಾಟಕ ಸರ್ಕಾರಕ್ಕೆ ಚಾಟಿ ಬೀಸುತ್ತಿದ್ದಾರೆ.
ಮಹಾಕುಂಭಮೇಳದಲ್ಲಿ ಕಳೆದ ಜ.29ರಂದು ಮುಂಜಾನೆ ಶಾಹಿ ಪುಣ್ಯಸ್ನಾನಕ್ಕಾಗಿ ನಾಗಾ ಸಾಧುಗಳು ತಯಾರಾಗುತ್ತಿದ್ದಾಗ ಕಾಲ್ತುಳಿತ ಸಂಭವಿಸಿ 30ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು. ಈ ಸಂದರ್ಭದಲ್ಲಿ ಮಹಾಕುಂಭಮೇಳದಲ್ಲಿ ಸುಮಾರು 1.5 ಕೋಟಿ ಜನರು ಇದ್ದರು. ತ್ರಿವೇಣಿ ಸಂಗಮದ ಒಂದು ಭಾಗದಲ್ಲಿ ನಡೆದ ಕಾಲ್ತುಳಿತವನ್ನು ಕೂಡಲೇ ಸಮರ್ಪಕವಾಗಿ ನಿಭಾಯಿಸಿ ಕುಂಭಮೇಳ ನಿರಾಂತಕವಾಗಿ ಮುಂದುವರಿಯಲು ಅವಕಾಶ ಮಾಡಿಕೊಡಲಾಗಿತ್ತು.
ಆದರೆ ಕಾಂಗ್ರೆಸ್, ಸಮಾಜವಾದಿ ಪಾರ್ಟಿ ಸೇರಿದಂತೆ ವಿಪಕ್ಷಗಳೆಲ್ಲ ಉತ್ತರ ಪ್ರದೇಶದ ಯೋಗಿ ಸರ್ಕಾರ ಮತ್ತು ಕೇಂದ್ರದ ಬಿಜೆಪಿ ಸರ್ಕಾರವನ್ನು ಈ ವಿಚಾರವಾಗಿ ಹಿಗ್ಗಾಮುಗ್ಗಾ ಟೀಕಿಸಿದ್ದವು. ಕರ್ನಾಟಕದ ಹಲವು ಕಾಂಗ್ರೆಸ್ ನಾಯಕರೂ ಯದ್ವಾತದ್ವಾ ಹೇಳಿಕೆಗಳನ್ನು ನೀಡಿದ್ದರು. ಮಹಾಕುಂಭಮೇಳಕ್ಕೆ ಮಾಡಿದ್ದ ವ್ಯವಸ್ಥೆಗಳು ಸರಿ ಇರಲಿಲ್ಲ, ಕೋಟಿಗಟ್ಟಲೆ ಜನರು ಸೇರುವುದು ಗೊತ್ತಿದ್ದೂ ಭದ್ರತೆಯನ್ನು ನಿರ್ಲಕ್ಷಿಸಲಾಗಿತ್ತು ಎಂಬುದು ಎಲ್ಲ ಟೀಕೆಗಳ ಸಾರವಾಗಿತ್ತು. ಕುಂಭಮೇಳ ಯಶಸ್ವಿಯಾಗಿ ಮುಗಿದ ಬಳಿಕವೂ ಟೀಕಾಪ್ರಹಾರಗಳು ಮುಂದುವರಿದಿದ್ದವು.
ಇದೀಗ ಜನರು ಈ ಟೀಕೆಗಳನ್ನೇ ಕಾಂಗ್ರೆಸ್ ಮೇಲೆ ತಿರುಗುಬಾಣವಾಗಿ ಪ್ರಯೋಗಿಸುತ್ತಿದ್ದಾರೆ. ಮಹಾಕುಂಭಮೇಳದಲ್ಲಿ ಕೋಟಿಗಟ್ಟಲೆ ಜನರು ಸೇರಿದಾಗ ಸಂಭವಿಸಿದ ಅವಘಡವನ್ನು ಅಲ್ಲಿನ ಸರ್ಕಾರ ಯಶಸ್ವಿಯಾಗಿ ನಿಭಾಯಿಸಿದೆ. ಮಹಾಕುಂಭಮೇಳದಲ್ಲಿ 60 ಕೋಟಿಗೂ ಹೆಚ್ಚು ಜನರು ಭಾಗವಹಿಸಿದ್ದು, ಎರಡು ತಿಂಗಳು ಈ ಕಾರ್ಯಕ್ರಮ ನಡೆಯಬೇಕಾದರೆ ಯಾವ ಮಟ್ಟದ ತಯಾರಿ ಮಾಡಿಕೊಳ್ಳಲಾಗಿತ್ತು ಎಂದು ಊಹಿಸಲೂ ಸಾಧ್ಯವಿಲ್ಲ. ಆದರೆ ಸುಮಾರು ಒಂದು ಲಕ್ಷದಷ್ಟು ಜನ ಸೇರಿದ ಕಾರ್ಯಕ್ರಮವೊಂದನ್ನು ನಿಭಾಯಿಸಲು ಸಾಧ್ಯವಾಗದೆ ಕಾಂಗ್ರೆಸ್ ಸರ್ಕಾರ ತನ್ನ ವೈಫಲ್ಯವನ್ನು ಬಟಾಬಯಲು ಮಾಡಿಕೊಂಡಿದೆ. ಇದು ಟೀಕಸಲು ಮಾತ್ರ ಇರುವ ʼಕೈʼಲಾಗದ ಸರ್ಕಾರ ಎಂದು ಅನೇಕರು ಬರೆದುಕೊಂಡಿದ್ದಾರೆ.
ಇನ್ನೊಂದು ಕಾಲ್ತುಳಿತ ಸಂಭವಿಸಿದ್ದು ಕಳೆದ ಡಿಸೆಂಬರ್ 4ರಂದು. ಹೈದರಾಬಾದ್ನ ಆರ್ಟಿಸಿ ಕ್ರಾಸ್ರೋಡ್ಸ್ನಲ್ಲಿರುವ ಸಂಧ್ಯಾ ಥಿಯೇಟರ್ನಲ್ಲಿ ಪುಷ್ಪ-2 ಚಿತ್ರದ ಪ್ರೀಮಿಯರ್ ಶೋನಲ್ಲಿ ಪಾಲ್ಗೊಳ್ಳಲು ನಟ ಅಲ್ಲು ಅರ್ಜುನ್ ಬಂದ ವೇಳೆ ಅಭಿಮಾನಿಗಳು ಅವರನ್ನು ನೋಡುವ ಸಲುವಾಗಿ ಮುಗಿಬಿದ್ದಾಗ ನೂಕುನುಗ್ಗಲು ಸಂಭವಿಸಿ ಓರ್ವ ಮಹಿಳೆ ಸಾವನ್ನಪ್ಪಿ ಆಕೆಯ ಮಗ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು.
ತೆಲಂಗಾಣದ ಕಾಂಗ್ರೆಸ್ ಸರ್ಕಾರ ಈ ಘಟನೆಗೆ ಅಲ್ಲು ಅರ್ಜುನ್ ಅವರನ್ನೇ ನೇರ ಹೊಣೆ ಮಾಡಿ ಪೊಲೀಸರನ್ನು ನಟನ ಮನೆಗೆ ಕಳುಹಿಸಿ ಉಟ್ಟ ಬಟ್ಟೆಯಲ್ಲೇ ಬಂಧನವಾಗುವಂತೆ ಮಾಡಿತ್ತು. ಈ ಘಟನೆಯಿಂದಾಗಿ ಕೆಲವು ದಿನ ಅಲ್ಲು ಅರ್ಜುನ್ ಜೈಲಿನಲ್ಲೂ ಕಳೆಯಬೇಕಾಗಿ ಬಂತು. ಅಲ್ಲಿನ ಮುಖ್ಯಮಂತ್ರಿ ರೇವಂತ್ ರೆಡ್ಡಿ ನಟನ ಮೇಲೆ ಯಾವುದೋ ದ್ವೇಷ ತೀರಿಸಿಕೊಳ್ಳುತ್ತಿದ್ದಾರೆ ಎಂಬ ಭಾವನೆ ಆ ಸಂದರ್ಭದಲ್ಲಿ ಜನರಿಗೆ ಉಂಟಾಗಿತ್ತು.
ಈ ಘಟನೆಯನ್ನು ಪ್ರಸ್ತಾಪಿಸಿ ಜನರು ಬೆಂಗಳೂರು ಕಾಲ್ತುಳಿತ ಘಟನೆಗೆ ಯಾರನ್ನು ಹೊಣೆ ಮಾಡೋಣ. ತೆಲಂಗಾಣದಲ್ಲಿ ಅನ್ವಯವಾದ ಕಾನೂನು ಕರ್ನಾಟಕದಲ್ಲಿ ಅನ್ವಯವಾಗುವುದಿಲ್ಲವೇ? ಸರ್ಕಾರದ ಬೇಜವಾಬ್ದಾರಿ ಮತ್ತು ವೈಫಲ್ಯದಿಂದಲೇ ಕಾಲ್ತುಳಿತ ಸಂಭವಿಸಿದೆ. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೊಣೆ ಹೊತ್ತುಕೊಳ್ಳುತ್ತಾರೆಯೇ? ಕರ್ನಾಟಕದ ಪೊಲೀಸರು ತೆಲಂಗಾಣ ಪೊಲೀಸರು ಪಾಲಿಸಿದ ಕಾನೂನನ್ನು ಪಾಲಿಸಲು ಮುಂದಾಗುತ್ತಾರೆಯೇ ಎಂದೆಲ್ಲ ಜನರು ಪ್ರಶ್ನಿಸುತ್ತಿದ್ದಾರೆ.
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಅನಾಹುತವನ್ನು ತಪ್ಪಿಸಬಹುದಾಗಿತ್ತು. ಆರ್ಸಿಬಿ ಅಭಿಮಾನಿಗಳು ಅಷ್ಟೊಂದು ಸಂಖ್ಯೆಯಲ್ಲಿ ಬರುತ್ತಾರೆ ಎಂಬ ಅಂದಾಜು ಇಂಟಲಿಜೆನ್ಸ್ಗೆ ಇರಬಹುದಿತ್ತು. ಪೊಲೀಸರು ಲಾಠಿ ಬೀಸಿ ಭಯ ಸೃಷ್ಟಿಸುವುದನ್ನು ತಪ್ಪಿಸಬಹುದಿತ್ತು. ಆರ್ಸಿಬಿ ಅಭಿಮಾನಿಗಳು ತಮ್ಮನ್ನು ನಿಯಂತ್ರಿಸಿಕೊಂಡು ತಾವಿದ್ದಲ್ಲಿಂದಲೇ ಹಾರೈಸಬಹುದಿತ್ತು… ಎಲ್ಲವೂ ದುರ್ಘಟನೆ ಘಟಿಸಿದ ಬಳಿಕ ಆಡಬಹುದಾದ ಮಾತುಗಳಷ್ಟೇ. ಶೋಕದಿಂದ ಪಾಠ ಕಲಿಯುವ ಮನಸ್ಸಿದ್ದರೆ ಕಲಿಯಬಹುದು. ಮೂಲತಃ, ಗುಂಪು ಮನಸ್ಥಿತಿ ಇರುವಲ್ಲಿ ಕಾಲ್ತುಳಿತ ಸಂಭವನೀಯ ಎಂಬ ಸರಳ ಸತ್ಯ ಗೊತ್ತಿರಬೇಕು. ಕಾಲ್ತುಳಿತ ಸಂಭವಿಸುವುದು ಹೇಗೆ ಎಂಬುದು ಗೊತ್ತಿದ್ದರೆ ಇಂಥ ಗುಂಪುಗಳ ನಡುವೆ ಹೋಗುವುದನ್ನೇ ತಪ್ಪಿಸಬಹುದು.
























